ADVERTISEMENT

ದಕ್ಷಿಣ ಕನ್ನಡ: ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 6:25 IST
Last Updated 9 ಜುಲೈ 2024, 6:25 IST

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಸೋಮವಾರವೂ ದಿನವಿಡೀ ಎಡೆಬಿಡದೆ ಧಾರಾಕಾರ ಮಳೆಯಾಗಿದೆ.

ಸತತ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ, ಫಲ್ಗುಣಿ, ನಂದಿನಿ ಹಾಗೂ ಶಾಂಭವಿ ನದಿಗಳು ತುಂಬಿ ಹರಿಯುತ್ತಿವೆ. ಭಾನುವಾರ ರಾತ್ರಿಯಿಡೀ ಬಿಟ್ಟು ಬಿಟ್ಟು ಬಿರುಸಿನ ಮಳೆ ಆಗಿತ್ತು.ಭಾರಿ ಮಳೆಯ ಮುನ್ಸೂಚನೆ ಇದ್ದ ಕಾರಣ ಮಂಗಳೂರು ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿತ್ತು. 
ಸೋಮವಾರ ಬೆಳಿಗ್ಗೆ 8.30 ರವರೆಗಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಾಳದಲ್ಲಿ 16.80 ಸೆಂ.ಮೀ, ಬಜಪೆಯಲ್ಲಿ 12.75 ಸೆಂ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಉಳ್ಳಾಲ ತಾಲ್ಲೂಕಿನಲ್ಲಿ ಎರಡು ಮನೆಗಳು ಸಂಪೂರ್ಣ ಹಾಗೂ 6 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಬಂಟ್ವಾಳ ತಾಲ್ಲೂಕಿನಲ್ಲಿ ಒಂದು ಮನೆ ಸಂಪೂರ್ಣವಾಗಿ ಹಾಗೂ ಒಂದು ಮನೆ ಭಾಗಶಃ ಹಾನಿಗೊಳಗಾಗಿದೆ. ಪುತ್ತೂರು ತಾಲ್ಲೂಕಿನಲ್ಲಿ ನಾಲ್ಕು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಉಳ್ಳಾಲದಲ್ಲಿ ಮರ ಬಿದ್ದು ಕಾರು ಜಖಂಗೊಂಡಿದೆ.  ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಯೊಂದರ ಆವರಣಗೋಡೆ ಕುಸಿದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲುಕಿನ ತ್ರಾಸಿಯಲ್ಲಿ 21.05 ಸೆಂ.ಮೀ, ಮೊಳಹಳ್ಳಿಯಲ್ಲಿ18.20, ಅಂಪಾರಿನಲ್ಲಿ 16.65, ಬೈಂದೂರು ತಾಲ್ಲೂಕಿನ ಕೆರ್ಗಾಲುವಿನಲ್ಲಿ 20.05, ಪಡುವರಿಯಲ್ಲಿ 19.75, ಶಿರೂರಿನಲ್ಲಿ 17.9,  ಉಪ್ಪುಂದದಲ್ಲಿ 17.4, ಕೈತೋಡಿನಲ್ಲಿ 17.25, ಕಿರಿಮಂಜೇಶ್ವರದಲ್ಲಿ 16.70,   ಉಡುಪಿ ತಾಲ್ಲೂಕಿನ ಅಂಬಲ್ಪಾಡಿಯಲ್ಲಿ 18 ಸೆಂ.ಮೀ ಮಳೆಯಾಗಿದೆ.

ADVERTISEMENT

ಇದೇ 9 ಹಾಗೂ 10 ರಂದು ಕೂಡ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗಿನಿಂದ ಕೂಡಿ ಭಾರಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 9ರಂದು ಈ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್‌ ಹಾಗೂ ಇದೇ 10ರಂದು ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ.  

ಇದೇ 10ರ ವರೆಗೆ ಕರಾವಳಿಯುದ್ಧಕ್ಕೂ ಗಂಟೆಗೆ 35 ಕಿ.ಮೀಯಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಗಾಳಿಯು ಗಂಟೆಗೆ 55 ಕಿ.ಮೀ ವೇಗ ಪಡೆಯುವ ಸಾಧ್ಯತೆ ಇದೆ. ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳಲಿವೆ. ಹಾಗಾಗಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸಬಾರದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.