ADVERTISEMENT

ಹಾಲು: ಹೆಚ್ಚು ದರದ ‘ಪ್ರೋತ್ಸಾಹ’ಕ್ಕೆ ಒತ್ತಾಯ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಕಾರ ಸಪ್ತಾಹದಲ್ಲಿ ರಾಜೇಂದ್ರ ಕುಮಾರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 5:50 IST
Last Updated 16 ನವೆಂಬರ್ 2024, 5:50 IST
ಸಹಕಾರ ಸಪ್ತಾಹ ಉದ್ಘಾಟಿಸಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿದರು :ಪ್ರಜಾವಾಣಿ ಚಿತ್ರ
ಸಹಕಾರ ಸಪ್ತಾಹ ಉದ್ಘಾಟಿಸಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿದರು :ಪ್ರಜಾವಾಣಿ ಚಿತ್ರ   

ಮಂಗಳೂರು: ಉತ್ಪಾದನೆ ಕಡಿಮೆ ಇದ್ದರೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಇರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುವ ರೈತರಿಗೆ ಹೆಚ್ಚು ದರ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಆಗ್ರಹಿಸಿದರು.

ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಸಹಯೋಗದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಆಯೋಜಿಸಿರುವ ಸಹಕಾರ ಸಪ್ತಾಹದ ಎರಡನೇ ದಿನವಾದ ಶುಕ್ರವಾರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲೇ ಅತ್ಯುತ್ತಮ ಒಕ್ಕೂಟವಾಗಿ ಗುರುತಿಸಿಕೊಂಡಿದೆ. ವಿವಿಧ ಕಾರಣಗಳಿಂದ ಇಲ್ಲಿ ಹಾಲು ಉತ್ಪಾದನೆ ಕಡಿಮೆ. ಹಾಲಿನ ಬೇಡಿಕೆ ಹೆಚ್ಚು ಇದೆ. ಬೆಂಗಳೂರು, ಕೋಲಾರ, ಹಾಸನ ಮುಂತಾದ ಕಡೆಗಳಿಗೆ ಹೋಲಿಸಿದರೆ ಇಲ್ಲಿ ಉತ್ಪಾದನೆ ವೆಚ್ಚ ಹೆಚ್ಚಾಗುವುದರಿಂದ ಹಸು ಸಾಕುವವರ ಸಂಖ್ಯೆ ಕಡಿಮೆ. ಹೀಗಾಗಿ ರೈತರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಬೇಕು ಎಂದು ಅವರು ಹೇಳಿದರು. ಹೆಚ್ಚು ದರ ನೀಡುವಂತೆ ಆಗ್ರಹಿಸಿ ಸಹಕಾರ ಸಚಿವರಿಗೆ ಮನವಿ ಸಲ್ಲಿಸುವಂತೆ ಅವರು ಒಕ್ಕೂಟದ ಪ್ರಮುಖರಿಗೆ ಸೂಚಿಸಿದರು.

ADVERTISEMENT

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಪ್ರತಿ ವರ್ಷ ಹೊಸ ಉತ್ಪನ್ನ ಬಿಡುಗಡೆ ಮಾಡುತ್ತದೆ. ಈ ವರ್ಷವೂ ಉತ್ಪನ್ನವೊಂದು ಸಿದ್ಧವಾಗಿದ್ದು ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ ಎಂದು ಅವರು ತಿಳಿಸಿದರು.  

ಜಿಲ್ಲಾ ಸಹಕಾರಿ‌ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಲ್ದೊಟ್ಟು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಜಯರಾಮ್ ಶೆಟ್ಟಿ, ನಿರ್ದೇಶಕರಾದ ಪ್ರಕಾಶ್, ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ, ಸುಧಾಕರ ರೈ, ಸುಧಾಕರ ಶೆಟ್ಟಿ, ಸವಿತಾ ಶೆಟ್ಟಿ, ಸ್ಮಿತಾ ಶೆಟ್ಟಿ, ಸದಾಶಿವ ಶೆಟ್ಟಿ, ಚಿಲ್ಲೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಪ್ರಮುಖರಾದ ಕಾಪು ದಿವಾಕರ ಶೆಟ್ಟಿ, ಹೃದಯರಾಜ್ ಹೆಗಡೆ, ಶಶಿಕುಮಾರ್ ಇದ್ದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ‌ ನಿರ್ದೇಶಕ ಡಿ.ವಿವೇಕ್ ಸ್ವಾಗತಿಸಿದರು.

ಸಪ್ತಾಹದಲ್ಲಿ ಭಾಗವಹಿಸಿದ್ದ ಸಹಕಾರಿಗಳು  :ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.