ADVERTISEMENT

ದ.ಕ. ಹಾಲು ಒಕ್ಕೂಟದಿಂದ ಶೇ 12 ಡಿವಿಡೆಂಡ್: ಸುಚರಿತ ಶೆಟ್ಟಿ ಪ್ರಕಟಣೆ

ವಾರ್ಷಿಕ ಮಹಾಸಭೆಯಲ್ಲಿ ಒಕ್ಕೂಟದ ಕೆ.ಪಿ. ಸುಚರಿತ ಶೆಟ್ಟಿ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 9:09 IST
Last Updated 20 ಸೆಪ್ಟೆಂಬರ್ 2024, 9:09 IST
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಾರ್ಷಿ ಮಹಾಸಭೆಯಲ್ಲಿ ಸಭೆಯಲ್ಲಿ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿದರು
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಾರ್ಷಿ ಮಹಾಸಭೆಯಲ್ಲಿ ಸಭೆಯಲ್ಲಿ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿದರು   

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 2023-24ನೇ ಸಾಲಿನಲ್ಲಿ ₹ 8.28 ಕೋಟಿ ನಿವ್ವಳ ಲಾಭ ಗಳಿಸಿದೆ. ಸಂಘಗಳು ಒಕ್ಕೂಟಕ್ಕೆ ವರ್ಷದಲ್ಲಿ ನೀಡಿದ ಹಾಲಿನ ಪ್ರಮಾಣಕ್ಕನುಗುಣವಾಗಿ ಶೇ.25ರಷ್ಟು ಬೋನಸ್ ನೀಡಲು ಮತ್ತು ಶೇ 12 ರಂತೆ ಡಿವಿಡೆಂಡ್ ನೀಡಲು ಒಕ್ಕೂಟವು ನಿರ್ಧರಿಸಿದೆ.

ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅಧ್ಯಕ್ಷತೆಯಲ್ಲಿ ಕುಲಶೇಖರದ ಕೊರ್ಡೆಲ್ ಹಾಲ್‌ನಲ್ಲಿ ಬುಧವಾರ ನಡೆದ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಒಕ್ಕೂಟವು 2023-24ನೇ ಸಾಲಿನಲ್ಲಿ ಒಟ್ಟು ₹ 1108.89 ಕೋಟಿ ವ್ಯವಹಾರ ನಡೆಸಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಶೇ. 6.13 ಪ್ರಗತಿ ಸಾಧಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ADVERTISEMENT

ಕುಂದಾಪುರದ ಮೇಕೋಡು ಹಾಲು ಉತ್ಪಾದಕರ ಸಂಘದ ಪ್ರಕಾಶ್ಚಂದ್ರ ಶೆಟ್ಟಿ, ಮಂಗಳೂರಿನ ಪಡುಮರ್ನಾಡು ಸಂಘದ ಲಿಮಲ ಲಿನೆಟ್ ಗೋನ್ಸಾಲ್ವಿಸ್, ಬಂಟ್ವಾಳದ ಅಲ್ಲಿಪಾದೆ ಸಂಘದ ಸರಿತಾ ಐಡಾ ಫರ್ನಾಂಡಿಸ್ ಅವರನ್ನು ಉತ್ತಮ ಹೈನುಗಾರರು ಎಂದು ಗುರುತಿಸಿ ಗೌರವಿಸಲಾಯಿತು. 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಹಾಲು ಉತ್ಪಾದಕರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ನೀಡಲಾಯಿತು.

ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ರವಿರಾಜ ಹೆಗ್ಡೆ, ಪ್ರಕಾಶ್‌ಚಂದ್ರ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್ ಕೆ., ನರಸಿಂಹ ಕಾಮತ್, ಬಿ. ಸುಧಾಕರ ರೈ, ಎಂ. ಸುಧಾಕರ ಶೆಟ್ಟಿ, ಸುಭದ್ರಾ ರಾವ್‌, ಸವಿತ ಎನ್. ಶೆಟ್ಟಿ, ಸ್ಮಿತಾ ಆರ್ ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್.ರಮೇಶ್, ಡಾ. ಅರುಣ್‌ ಕುಮಾರ್ ಶೆಟ್ಟಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ. ಭಾಗವಹಿಸಿದ್ದರು.

ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ ಸ್ವಾಗತಿಸಿದರು. ನಿರ್ದೇಶಕಿ ಸ್ಮಿತಾ ಆರ್. ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಉತ್ತಮ ಸಾಧನೆ

ಮಾಡಿದ  ಸಂಘಗಳು ಒಕ್ಕೂಟದ ಅತ್ಯುತ್ತಮ ಸಂಘ:  ನೆರಿಯ ಸಂಘ ದ.ಕ. ಜಿಲ್ಲೆಯ ಉತ್ತಮ ಸಂಘ:  ಕಡಂದಲೆ  ಉಡುಪಿ ಜಿಲ್ಲೆಯ ಉತ್ತಮ ಸಂಘ: ಹಾಳೆಕಟ್ಟೆ  ಒಕ್ಕೂಟದ ಉತ್ತಮ ಮಹಿಳಾ ಸಂಘ: ತೋಟತ್ತಾಡಿ ಮತ್ತು  ಆರೂರು ತಾಲ್ಲೂಕುವಾರು ಉತ್ತಮ ಸಂಘ: ಮಂಗಳೂರು:ಅತಿಕಾರಿ ಬೆಟ್ಟು ಇರುವೈಲು ಬಂಟ್ವಾಳ: ವಗ್ಗ ಇಡ್ಕಿದು;  ಪುತ್ತೂರು: ಪಾಣಾಜೆ ಮುಂಡೂರು; ಬೆಳ್ತಂಗಡಿ: ಗುಂಡೂರಿ ಪಡಂಗಡಿ; ಸುಳ್ಯ: ಎಡಮಂಗಲಯೇನೆಕಲ್ಲು; ಉಡುಪಿ: ತೆಂಕ ಎರ್ಮಾಳು ಇನ್ನಂಜೆ ಕುಂದಾಪುರ: ಸಿದ್ದಾಪುರ ಹಾಲಾಡಿ: ಕಾರ್ಕಳ: ಕಾಂತಾವರ ಶಿವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.