ADVERTISEMENT

‘ಡಾಲ್ಫಿನ್ ಸಂರಕ್ಷಣೆ’ ಯತ್ನಕ್ಕೆ ಮರುಜೀವ

ಮಂಗಳೂರು ಮತ್ತು ಕೆನರಾ ಅರಣ್ಯ ವೃತ್ತದಿಂದ ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವ ಸಲ್ಲಿಕೆ

ಸಂಧ್ಯಾ ಹೆಗಡೆ
Published 14 ಜುಲೈ 2024, 19:25 IST
Last Updated 14 ಜುಲೈ 2024, 19:25 IST
ಡಾಲ್ಫಿನ್ (ಸಾಂದರ್ಭಿಕ ಚಿತ್ರ)
ಡಾಲ್ಫಿನ್ (ಸಾಂದರ್ಭಿಕ ಚಿತ್ರ)   

ಮಂಗಳೂರು: ಮಂಗಳೂರು ಅರಣ್ಯ ವೃತ್ತ ಹಾಗೂ ಕೆನರಾ (ಉತ್ತರ ಕನ್ನಡ) ಅರಣ್ಯ ವೃತ್ತ ವ್ಯಾಪ್ತಿಯ ಕಡಲ ತೀರಗಳ ನಿರ್ದಿಷ್ಟ ಭಾಗವನ್ನು ಡಾಲ್ಫಿನ್‌ಗಳ ಸಂರಕ್ಷಿತ ಪ್ರದೇಶವನ್ನಾಗಿ ಗುರುತಿಸುವ ಪ್ರಯತ್ನ ಮತ್ತೆ ಮರುಜೀವ ಪಡೆದಿದೆ.

ಈ ಸಂಬಂಧ ಮಂಗಳೂರು ಹಾಗೂ ಕೆನರಾ ಅರಣ್ಯ ವೃತ್ತಗಳಿಂದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ₹11.69 ಕೋಟಿ ವೆಚ್ಚದ ಪರಿಷ್ಕೃತ ಪ್ರಸ್ತಾವ ಸಲ್ಲಿಕೆಯಾಗಿದೆ.

ಮಂಗಳೂರು ವೃತ್ತ ವ್ಯಾಪ್ತಿಯ ಕುಂದಾಪುರ ಕೋಡಿ ಬೀಚ್‌ ಭಾಗದಲ್ಲಿ ಡಾಲ್ಫಿನ್‌ಗಳು ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸುತ್ತಮುತ್ತಲಿನ ಕಡಲ ತೀರದಲ್ಲೂ ಡಾಲ್ಫಿನ್‌ಗಳು ಇವೆ. ದಕ್ಷಿಣ ಕನ್ನಡದಿಂದ ಉತ್ತರ ಕನ್ನಡದವರೆಗೆ ಒಟ್ಟು 325 ಕಿ.ಮೀ ಸಮುದ್ರ ತೀರ ಇದ್ದು, ಅದರಲ್ಲಿ 165 ಕಿ.ಮೀ ಮಂಗಳೂರು ವೃತ್ತಕ್ಕೆ ಒಳಪಟ್ಟಿದೆ.

ADVERTISEMENT

ಯಾಕೆ ಸಂರಕ್ಷಿತ ಪ್ರದೇಶ?: ಇಲ್ಲಿನ ಕಡಲಿನಲ್ಲಿರುವ ಡಾಲ್ಪಿನ್‌ಗಳ ಬಗ್ಗೆ ಹೆಚ್ಚು ಅಧ್ಯಯನ ನಡೆದಿಲ್ಲ. ಸಂರಕ್ಷಿತ ಪ್ರದೇಶ ಘೋಷಣೆಯಾದರೆ, ಡಾಲ್ಫಿನ್ ಸಂರಕ್ಷಣೆ ಜೊತೆಗೆ ಅವುಗಳ ಚಲನವಲನ, ಸಮೀಕ್ಷೆ, ವಿಶೇಷ ಅಧ್ಯಯನ ಸಾಧ್ಯವಾಗುತ್ತದೆ. ಡಾಲ್ಫಿನ್‌ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ಅವುಗಳ ಮಹತ್ವ ತಿಳಿಸಲಾಗುತ್ತದೆ. ಮೀನುಗಾರರು ಮೀನುಗಾರಿಕೆಗೆ ತೆರಳಿದಾಗ ಡಾಲ್ಫಿನ್‌ಗಳು ಕಂಡುಬಂದಲ್ಲಿ ಅವುಗಳ ರಕ್ಷಣೆಗೆ ಬಗ್ಗೆ ಹೆಚ್ಚು ಎಚ್ಚರ ವಹಿಸುವಂತೆ ಅರಿವು ಮೂಡಿಸಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಕಡಲ ತೀರಗಳು ಶುಚಿತ್ವ ಹೊಂದಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಸಂರಕ್ಷಿತ ಪ್ರದೇಶ ಎಂದು ಘೋಷಿಸಿದಾಗ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಲಭ್ಯವಾಗುತ್ತದೆ. ಡಾಲ್ಫಿನ್ ಸಂರಕ್ಷಣೆಗೆ ಸಿಬ್ಬಂದಿ ನೇಮಕ, ಗಾಯಗೊಂಡು ಕಡಲತೀರಕ್ಕೆ ಬಂದರೆ ಅವುಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇಂತಹ ಅನೇಕ ಸೌಲಭ್ಯಗಳು ದೊರೆಯುತ್ತವೆ. ಕಡಲಾಮೆ (ಆಲಿವ್‌ ರಿಡ್ಲೆ) ಸಂರಕ್ಷಣೆ ನಿಟ್ಟಿನಲ್ಲಿ ನಡೆದ ಪ್ರಯತ್ನ ಈಗಾಗಲೇ ಯಶಸ್ವಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಲ ತೀರದಲ್ಲಿ 1985ರ ನಂತರ ಮೊದಲ ಬಾರಿಗೆ ಕಳೆದ ವರ್ಷ 12 ಕಡೆಗಳಲ್ಲಿ ಕಡಲಾಮೆಗಳು ಮೊಟ್ಟೆ ಇಟ್ಟಿದ್ದವು. ಮೊಟ್ಟೆಗಳನ್ನು ರಕ್ಷಿಸಿ, 1,000ಕ್ಕೂ ಹೆಚ್ಚು ಮರಿಗಳನ್ನು ಕಡಲಿಗೆ ಬಿಡಲಾಗಿದೆ. ಡಾಲ್ಫಿನ್ ಸಂರಕ್ಷಿತ ಪ್ರದೇಶದ ಪರಿಷ್ಕೃತ ಪ್ರಸ್ತಾವ ಸಲ್ಲಿಕೆಗೆ ಇದು ಮುಖ್ಯ ಪ್ರೇರಣೆ ಎನ್ನುತ್ತಾರೆ ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿ. ಕರಿಕಾಳನ್.

ಸವಾಲು ಏನು?: ಡಾಲ್ಫಿನ್ ಸಂರಕ್ಷಿತ ಪ್ರದೇಶ ಘೋಷಣೆಗೆ ಕಡಲ ಕಿನಾರೆಯ ಸ್ವಚ್ಛತೆ ಅತಿ ಮುಖ್ಯ. ಕಡಲ ಕಿನಾರೆಯ ಆಕರ್ಷಣೆ ಹೆಚ್ಚುತ್ತಿದ್ದು, ಪ್ರವಾಸಿಗರ ಸಂಖ್ಯೆಯೂ ವೃದ್ಧಿಸುತ್ತಿದೆ. ಹೀಗಾಗಿ, ಕಡಲ ಕಿನಾರೆ ಸ್ವಚ್ಛವಾಗಿಟ್ಟುಕೊಳ್ಳುವುದು ಇಲಾಖೆಗೆ ದೊಡ್ಡ ಸವಾಲಾಗಲಿದೆ. ಮಂಗಳೂರಿನಲ್ಲಿ ಕಡಲ ತಡಿಯಲ್ಲಿ ಬೃಹತ್ ಕೈಗಾರಿಕೆಗಳು ಇದ್ದು, ಸಮುದ್ರದ ನೀರನ್ನು ಮಾಲಿನ್ಯರಹಿತವಾಗಿ ಉಳಿಸಿಕೊಳ್ಳುವುದು ಕೂಡ ಸವಾಲಿನ ಸಂಗತಿ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಪ್ರಧಾನಿ ಘೋಷಿಸಿದ್ದ ಯೋಜನೆ

2020ರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಾಜೆಕ್ಟ್ ಡಾಲ್ಫಿನ್’ ಯೋಜನೆ ಘೋಷಿಸಿದ್ದರು. ಇದರ ಭಾಗವಾಗಿ, ಅರಣ್ಯ ಇಲಾಖೆಯ ಮಂಗಳೂರು ವೃತ್ತ ಮತ್ತು ಕೆನರಾ ವೃತ್ತಗಳ ಮೂಲಕ ಡಾಲ್ಫಿನ್ ಸಂರಕ್ಷಣೆ ಯೋಜನೆಯ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕಳೆದ ವರ್ಷ ಕಡಲಾಮೆ ಸಂರಕ್ಷಣೆ ಮತ್ತು ಡಾಲ್ಫಿನ್ ಸಂರಕ್ಷಣೆ ಇವೆರಡೂ ಪ್ರಸ್ತಾವ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಕಡಲಾಮೆ ಸಂರಕ್ಷಣೆ ಪ್ರಸ್ತಾವಕ್ಕೆ ಮಾತ್ರ ಅನುದಾನ ದೊರೆತಿತ್ತು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.ಪ್ರಧಾನಿ ಘೋಷಿಸಿದ್ದ ಯೋಜನೆ

2020ರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಾಜೆಕ್ಟ್ ಡಾಲ್ಫಿನ್’ ಯೋಜನೆ ಘೋಷಿಸಿದ್ದರು. ಇದರ ಭಾಗವಾಗಿ, ಅರಣ್ಯ ಇಲಾಖೆಯ ಮಂಗಳೂರು ವೃತ್ತ ಮತ್ತು ಕೆನರಾ ವೃತ್ತಗಳ ಮೂಲಕ ಡಾಲ್ಫಿನ್ ಸಂರಕ್ಷಣೆ ಯೋಜನೆಯ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕಳೆದ ವರ್ಷ ಕಡಲಾಮೆ ಸಂರಕ್ಷಣೆ ಮತ್ತು ಡಾಲ್ಫಿನ್ ಸಂರಕ್ಷಣೆ ಇವೆರಡೂ ಪ್ರಸ್ತಾವ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಕಡಲಾಮೆ ಸಂರಕ್ಷಣೆ ಪ್ರಸ್ತಾವಕ್ಕೆ ಮಾತ್ರ ಅನುದಾನ ದೊರೆತಿತ್ತು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. 

ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್ ಮೂಲಕ ಪ್ರಸ್ತಾವ ಸಲ್ಲಿಸಲಾಗಿದ್ದು ಈ ಸಂಬಂಧ ಈಗಾಗಲೇ ಎರಡು ವರ್ಚುವಲ್ ಸಭೆಗಳು ನಡೆದಿವೆ.
-ವಿ. ಕರಿಕಾಳನ್ ಸಿಸಿಎಫ್ ಮಂಗಳೂರು ವೃತ್ತ

ಪ್ರಧಾನಿ ಘೋಷಿಸಿದ್ದ ಯೋಜನೆ

2020ರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಾಜೆಕ್ಟ್ ಡಾಲ್ಫಿನ್’ ಯೋಜನೆ ಘೋಷಿಸಿದ್ದರು. ಇದರ ಭಾಗವಾಗಿ, ಅರಣ್ಯ ಇಲಾಖೆಯ ಮಂಗಳೂರು ವೃತ್ತ ಮತ್ತು ಕೆನರಾ ವೃತ್ತಗಳ ಮೂಲಕ ಡಾಲ್ಫಿನ್ ಸಂರಕ್ಷಣೆ ಯೋಜನೆಯ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕಳೆದ ವರ್ಷ ಕಡಲಾಮೆ ಸಂರಕ್ಷಣೆ ಮತ್ತು ಡಾಲ್ಫಿನ್ ಸಂರಕ್ಷಣೆ ಇವೆರಡೂ ಪ್ರಸ್ತಾವ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಕಡಲಾಮೆ ಸಂರಕ್ಷಣೆ ಪ್ರಸ್ತಾವಕ್ಕೆ ಮಾತ್ರ ಅನುದಾನ ದೊರೆತಿತ್ತು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.