ಮಂಗಳೂರು: ಆಧುನಿಕ ಶಿಕ್ಷಣ ಕ್ರಮದಲ್ಲಿ ಕನ್ನಡ ಕಲಿಕೆಯ ಬಗ್ಗೆ ಮಕ್ಕಳು ಮತ್ತು ಯುವಜನಾಂಗದಲ್ಲಿ ಕಾಳಜಿ ಮೂಡುವಂತೆ ಪೋಷಕರು ಗಮನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.
ನಗರದ ನೆಹರು ಮೈದಾನದಲ್ಲಿ ಜಿಲ್ಲಾಡಳಿತ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೊತ್ಸವದಲ್ಲಿ ಮಾತನಾಡಿದ ಅವರು ಕನ್ನಡ ಸಮೃದ್ಧವಾಗಿದೆ ಎಂದು ಹೇಳುತ್ತ ಮೈಮರೆತು ಕೈಕಟ್ಟಿ ಕುಳಿತುಕೊಳ್ಳಬಾರದು, ಭಾಷೆ ಹೆಚ್ಚು ಬಳಕೆಯಾಗಬೇಕು, ಕನ್ನಡ ಲಿಪಿಯನ್ನು ಬರೆಯಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ದೇಶದ ಶ್ರೀಮಂತಿಕೆಯನ್ನು ಅಳೆಯಲು ಜಿಡಿಪಿಯೊಂದೇ ಮಾನದಂಡ ಆಗಬಾರದು. ಅಲ್ಲಿನ ಕಲೆ, ಸಾಹಿತ್ಯ, ಸಂಸ್ಕೃತಿ ಎಷ್ಟು ಗಟ್ಟಿಯಾಗಿದೆ ಎಂಬುದು ಕೂಡ ಮುಖ್ಯ ಆಗಬೇಕು. ಅನೇಕ ದೇಶಗಳು ಆರ್ಥಿಕವಾಗಿ ಶ್ರೀಮಂತವಾಗಿದ್ದರೂ ಸಂಸ್ಕೃತಿ ಮತ್ತು ಮಾನವೀಯತೆಯಂಥ ಉದಾತ್ತ ಗುಣಗಳ ಕೊರತೆಯಿಂದ ಜನರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಭಾರತದಲ್ಲಿ ಇಂಥ ಪರಿಸ್ಥಿತಿ ಇಲ್ಲ. ಸಂಸ್ಕೃತಿ ಮತ್ತು ಕಲೆಯ ವಿಷಯದಲ್ಲಿ ನಮ್ಮ ದೇಶ ಇತರರಿಗೆ ಮಾದರಿಯಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಕೇಂದ್ರ ಸರ್ಕಾರ ತೆರಿಗೆ ಮೊತ್ತದ ಮರುಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದ ಸಚಿವರು ಕರ್ನಾಟಕವು ಜಿಎಸ್‌ಟಿ ಸಂಗ್ರಹಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ತೆರಿಗೆ ಮೊತ್ತ ಮರುಹಂಚಿಕೆಯಲ್ಲಿ ನ್ಯಾಯವಾದ ಪಾಲು ಸಿಗುತ್ತಿಲ್ಲ. ಇದರಿಂದ ರಾಜ್ಯ ಅನ್ಯಾಯಕ್ಕೆ ಗುರಿಯಾಗಿದೆ ಎಂದರು.
ನಮ್ಮ ಶ್ರಮದ ಪಾಲನ್ನು ಬೇರೆ ಯಾರೋ ಅನ್ಯಾಯವಾಗಿ ಕಸಿದುಕೊಳ್ಳುತ್ತಿದ್ದಾರೆ ಎಂಬುದನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಸರ್ಕಾರ ಪ್ರಶ್ನಿಸಿದ್ದು ರಾಜ್ಯದ ಹಿತಾಸಕ್ತಿ ಕಾಯಲು ಟೊಂಕಕಟ್ಟಿ ನಿಂತಿದೆ ಎಂದು ಅವರು ಹೇಳಿದರು.
ಲೋಕಸಭಾ ಕ್ಷೇತ್ರಗಳನ್ನು ಜನಸಂಖ್ಯೆಯ ಆಧಾರದಲ್ಲಿ ಮರುವಿಂಗಡಣೆ ಮಾಡುವ ಪ್ರಯತ್ನವನ್ನು ಪ್ರಸ್ತಾಪಿಸಿದ ಸಚಿವರು ಸ್ವಾತಂತ್ರ್ಯಾನಂತರ ಕರ್ನಾಟಕ ಜನಸಂಖ್ಯಾ ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸಿದೆ. ಆದರೆ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳು ವಿಂಗಡಣೆ ಆದರೆ ನಮಗೆ ಕಡಿಮೆ ಪ್ರತಿನಿಧಿಗಳು ಸಿಗುವ ಸಾಧ್ಯತೆ ಇದೆ. ಇದು ಗಂಭೀರವಾಗಿ ಆಲೋಚಿಸಬೇಕಾದ ವಿಷಯವಾಗಿದೆ ಎಂದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜಾ, ಮೇಯರ್ ಮನೋಜ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪಶ್ಚಿಮ ವಲಯ ಡಿಐಜಿ ಅಮಿತ್ ಸಿಂಗ್, ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಪ್ರವೀಣ್‌ಚಂದ್ರ ಆಳ್ವ, ಎ.ಸಿ ವಿನಯರಾಜ್, ನವೀನ್ ಡಿಸೋಜಾ, ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ, ಶಾಹುಲ್ ಹಮೀದ್, ದೇವಿಪ್ರಸಾದ್ ಶೆಟ್ಟಿ, ಶಿವಪ್ರಕಾಶ್ ಇದ್ದರು.
60 ಮಂದಿಗೆ ವೈಯಕ್ತಿಕ ಮತ್ತು 22 ಸಂಘಟನೆಗಳಿಗೆ ಜಿಲ್ಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಭಾ ಕಾರ್ಯಕ್ರಮದ ನಂತರ ಕನ್ನಡ–ಕರ್ನಾಟಕಕ್ಕೆ ಸಂಬಂಧಿಸಿದ ಹಾಡುಗಳಿಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ಭಾಷೆ ಮತ್ತು ಸಂಸ್ಕೃತಿಯ ಜಾಗೃತಿ ಬಡಿದೆಬ್ಬಿಸಿದರು. ಅಂಬೇಡ್ಕರ್ ವೃತ್ತದಿಂದ ನೆಹರು ಮೈದಾನದ ವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರ ಹಾಗೂ ಕುವೆಂಪು ಮೂರ್ತಿಯ ಸ್ತಬ್ಧಚಿತ್ರದ ಮೆರವಣಿಗೆ ನಡೆಯಿತು.
ಜಿಲ್ಲಾಡಳಿತ ಗುರುವಾರ ಸಂಜೆ ಜಿಲ್ಲಾ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿತ್ತು. ಮೊದಲು 20 ಸಂಸ್ಥೆಗಳು ಮತ್ತು 55 ಮಂದಿಯನ್ನು ವೈಯಕ್ತಿಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ತಿಳಿಸಲಾಗಿತ್ತು. ವೈಯಕ್ತಿಕ ವಿಭಾಗದಲ್ಲಿ ರಾತ್ರಿ ಇಬ್ಬರ ಹೆಸರು ಸೇರಿಸಲಾಯಿತು. ಸೇರ್ಪಡೆ ಕಾರ್ಯ ಶುಕ್ರವಾರ ಬೆಳಿಗ್ಗೆಯೂ ಮುಂದುವರಿಯಿತು. ಪಟ್ಟಿಯಲ್ಲಿದ್ದ 2 ಸಂಸ್ಥೆಗಳಿಗೆ ತಾಂತ್ರಿಕ ಕಾರಣಗಳಿಂದ ಪ್ರಶಸ್ತಿ ಕೊಡಲಾಗುವುದಿಲ್ಲ ಎಂದು ಕೊನೆಯ ಹಂತದಲ್ಲಿ ತಿಳಿಸಲಾಗಿತ್ತು. ಇದರಿಂದ ಗೊಂದಲ ಉಂಟಾಯಿತು. ಸಚಿವರು ಹಾಗೂ ಜಿಲ್ಲಾಧಿಕಾರಿ ಮುಂದೆ ಆ ಸಂಘ ಸಂಸ್ಥೆಯ ಪ್ರತಿನಿಧಿಗಳು ನೋವು ತೋಡಿಕೊಂಡರು. ‘ಆಹ್ವಾನಿಸಿ ಅವಮಾನ ಮಾಡಲಾಗಿದೆ’ ಎಂದು ದೂರಿದರು. ಪರಿಶೀಲನೆ ಮಾಡಿ ನ್ಯಾಯ ದೊರಕಿಸಿಕೊಡುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.