ಮಂಗಳೂರು: ‘ಯಕ್ಷಗಾನ ಕಲೆಗೆ ಜಾತಿ, ಮತ, ಧರ್ಮಗಳ ಭೇದವಿಲ್ಲ. ಇದು ಎಲ್ಲರಿಗೂ ಸಲ್ಲುವಂತಹದ್ದು. ಯಕ್ಷಗಾನದಲ್ಲಿ ರಾಜಕೀಯ ಬೆರೆಸುವುದು ಹಾಗೂ ನಿರ್ದಿಷ್ಟ ಧರ್ಮವನ್ನು ಲೇವಡಿ ಮಾಡುವ ಪರಿಪಾಟ ಹೆಚ್ಚುತ್ತಿದೆ. ಇದು ಒಪ್ಪತಕ್ಕದ್ದಲ್ಲ’ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಇಲ್ಲಿ ಮಂಗಳವಾರ ಏರ್ಪಡಿಸಿದ್ದ 2023ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತಿ ನಿಧಿ ಪ್ರಶಸ್ತಿ ಹಾಗೂ 2022, 2023ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಯಾರೊ ಒಬ್ಬರು– ಇಬ್ಬರು ಕಲಾವಿದರು ಈ ರೀತಿ ಅನುಚಿತವಾಗಿ ನಡೆದುಕೊಳ್ಳುವುದರಿಂದ ಯಕ್ಷಗಾನದ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ಈ ರೀತಿ ನಡೆದುಕೊಳ್ಳುವ ಕಲಾವಿದರಿಗೆ ಹಿರಿಯ ಕಲಾವಿದರು ಬುದ್ಧಿ ಹೇಳಿ, ಕಿವಿ ಹಿಂಡಬೇಕು’ ಎಂದರು.
ಪ್ರಶಸ್ತಿ ಪುರಸ್ಕೃತ ಅರ್ಥಧಾರಿ ಜಬ್ಬಾರ್ ಸಮೋ, ‘ಯಕ್ಷಗಾನ ಸಂಕ್ರಮಣ ಕಾಲದ ತಿರುವಿನಲ್ಲಿದ್ದು, ಇದಕ್ಕೆ ಮತ್ತೊಂದು ಮುಖಬಂದಿದೆ. ಕೇವಲ ಹಾಸ್ಯ ರಸವನ್ನಷ್ಟೇ ಪ್ರಧಾನವನ್ನಾಗಿಸಲಾಗುತ್ತಿದೆ. ಶುದ್ಧ ಹಾಗೂ ರುಚಿಕರ ಯಕ್ಷಗಾನದ ಮರುತ್ಥಾನವಾಗಬೇಕಿದೆ. ಪ್ರದರ್ಶನದಲ್ಲಿ ಯಕ್ಷಗಾನೇತರ ಗುಪ್ತ ಕಾರ್ಯಸೂಚಿ ವ್ಯಕ್ತವಾದರೆ ಪ್ರೇಕ್ಷಕರೇ ಸಭಾತ್ಯಾಗ ಮಾಡಬೇಕು. ಅನಪೇಕ್ಷಿತ ಅನುಚಿತವಾದುದನ್ನು ಪ್ರತಿಭಟಿಸುವ ಧೈರ್ಯ ತೋರಬೇಕು. ಆಗ ಯಕ್ಷಗಾನವು ಶುದ್ಧವಾಗಿ ಉಳಿಯಬಹುದು’ ಎಂದರು.
ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ, ‘ಅರ್ಹತೆ ಇದ್ದರೂ ಇಷ್ಟರವರೆಗೆ ಯಾರೂ ಗುರುತಿಸದ ಕಲಾವಿದರನ್ನು ಗುರುತಿಸಿ ಈ ಸಲ ಪ್ರಶಸ್ತಿ ನೀಡಿದ್ದಾರೆ. ಯಕ್ಷಗಾನಕ್ಕೆ ಸಂಬಂಧಿಸಿದ ಅಮೂಲ್ಯ ಪುಸ್ತಕಗಳನ್ನು ಬರೆದವರನ್ನೂ ಗುರುತಿಸಿದ್ದು ಖುಷಿ ತಂದಿದೆ’ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್, ‘ಅಕಾಡೆಮಿಯು ಯಕ್ಷಗಾನ ಕಲಾವಿದರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಕಲಾವಿದರಿಗೆ ಶಕ್ತಿ ತುಂಬುವ ಕೆಲಸವೂ ಆಗಬೇಕಿದೆ. ಸಂಘಟನೆಯೊಂದು ಯಕ್ಷಗಾನದ ಹಾಗೂ ಕಲಾವಿದರ 5 ಲಕ್ಷಕ್ಕೂ ಹೆಚ್ಚು ಫೋಟೋಗಳನ್ನು ಸಂಗ್ರಹಿಸಿದೆ. ಅಕಾಡೆಮಿಯು ಇಂತಹ ಸಂಘಟನೆಗಳ ಜೊತೆ ಸೇರಿ ಹಿರಿಯ ಕಲಾವಿದರ ನೆನಪನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡಬೇಕು’ ಎಂದರು.
ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗ್ಯಾರಂಟಿಗಳ ಅನುಷ್ಠಾನದ ಮಂಗಳೂರು ತಾಲ್ಲೂಕು ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್., ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ‘ಸೀತಾ ಪರಿತ್ಯಾಗ’ ಯಕ್ಷಗಾನ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.