ಮಂಗಳೂರು: ‘ವ್ಯಕ್ತಿಯು ಬಾಲ್ಯ ಜೀವನದಿಂದ ಪ್ರೌಢಾವಸ್ಥೆಗೆ ಕಾಲಿಡುವ ಘಟ್ಟವಾಗಿರುವ ಪದವಿಪೂರ್ವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯೂ ಅಷ್ಟೇ ಪ್ರಾಮುಖ್ಯ. ಆದರೆ, ಈ ಹಂತದಲ್ಲಿ ಪಠ್ಯೇತರ ಚಟುವಟಿಕೆಯನ್ನು ಕಡೆಗಣಿಸಲಾಗುತ್ತಿದೆ’ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹಾಗೂ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ನಿವೃತ್ತ ಪ್ರಾಚಾರ್ಯರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘ ಹಾಗೂ ಸೇಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಇದೆ. ಪದವಿ ಹಂತದಲ್ಲಿ ಯುವಜನೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ, ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಪಠ್ಯೇತರ ಚಟುವಟಿಕೆಗೆ ಅವಕಾಶವೇ ಇಲ್ಲ. ಈ ಕೊರತೆ ನೀಗಿಸಬೇಕು’ ಎಂದರು.
ನೀಟ್ ಹಾಗೂ ಸಿಇಟಿ ಬಗ್ಗೆ ಅಪಸ್ವರ ವ್ಯಕ್ತವಾಗಿದೆ. ಯಾವುದೋ ಒಂದೆರಡು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಿರುವ ತಪ್ಪುಗಳನ್ನು ಮುಂದಿಟ್ಟು ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದೂಷಿಸುವುದು ಸರಿಯಲ್ಲ. ಪರೀಕ್ಷೆಗಳ ಈ ಲೋಪಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಕಾರಣ. ಸರ್ಕಾರಿ, ಖಾಸಗಿ, ಅನುದಾನಿತ ಎಂಬ ಭೇದ ಮಾಡದೇ ಎಲ್ಲ ಶಿಕ್ಷಣ ಸಂಸ್ಥೆಗಳು ಪರಸ್ಪರ ಸಹಕಾರದಿಂದ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಶ್ರಮಿಸಬೇಕು’ ಎಂದರು.
ಎಸ್.ಎಲ್.ಭೋಜೇಗೌಡ ಅವರು, ‘ಯೇಸುಕಾಯಂಗಳ ಕಳೆದು...’ ಹಾಡನ್ನು ಹಾಡಿ ರಂಜಿಸಿದರು. ’ಶಿಕ್ಷಣ ಇಲಾಖೆಯ ಸಮಸ್ಯೆಗಳ ನಿವಾರಣಗೆ ಶಕ್ತಿಮೀರಿ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಡಿ.ಜಯಣ್ಣ, ‘ಶಿಕ್ಷಣ ಸಂಸ್ಥೆ ನಡೆಸುವುದು ಸುಲಭ ಅಲ್ಲ. ನಿಮ್ಮೆಲ್ಲ ಸಮಸ್ಯೆಗಳನ್ನು ಪರಿಹಾರ ಕಂಡುಕೊಳ್ಳುವುದಕ್ಕೆ ಶಕ್ತಿ ಮೀರಿ ಶ್ರಮಿಸುತ್ತೇನೆ’ ಎಂದರು.
ಕರ್ತವ್ಯದಲ್ಲಿರುವಾಗಲೇ ಅನಾರೋಗ್ಯದಿಂದ ಅಸುನೀಗಿದ ಉಪನ್ಯಾಸಕ ನಂದಕುಮಾರ್ ಅವರ ಕುಟುಂಬಕ್ಕೆ ಸಂಘವು ₹2 ಲಕ್ಷ ದೇಣಿಗೆ ಹಾಗೂ ಅನಾರೋಗ್ಯಕ್ಕೆ ಒಳಾಗಾದ ಪಿ.ಯು ಕಾಲೇಜು ಸಿಬ್ಬಂದಿ ಜೂಲಿಯನ್ ಚಿಕಿತ್ಸೆಗೆ ₹25 ಸಾವಿರ ಸಹಾಯಧನ ಹಸ್ತಾಂತರಿಸಲಾಯಿತು.
ವಿವಿಧ ಪಿ.ಯು. ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ನೃತ್ಯ ಪ್ರಸ್ತುತಿಪಡಿಸಿದರು. ಶಾರದಾ ವಿದ್ಯಾಸಂಸ್ಥೆಗಳ ಸಮೂಹದ ಅಧ್ಯಕ್ಷ ಎಂ.ಬಿ. ಪುರಾಣಿಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸೇಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ.ಕ್ಲಿಫರ್ಟ್ ಸಿಕ್ವೇರಾ, ಸಂಘದ ಅಧ್ಯಕ್ಷ ಜಯಾನಂದ ಎಸ್.ಸುವರ್ಣ, ನೂಜಿಬಾಳ್ತಿಲದ ಬೆಥನಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಫಾ.ವರ್ಗೀಸ್ ಕೈಪನಡ್ಕ, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಉಷಾಪ್ರಭಾ ನಾಯಕ್, ಮೂಡುಬಿದಿರೆ ಎಕ್ಸೆಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕುಂಬ್ರ ಮರ್ಕಝುಲ್ ಹುದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ಎಂ.ಅಬ್ದುಲ ರಹಿಮಾನ್ ಅರಿಯಡ್ಕ, ಸೂರಜ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ರೇವಣಕರ, ಗುರುವಾಯನಕೆರೆಯ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಸುಮಂತ್ ಕುಮಾರ್ ಜೈನ್, ಭಾರತೀ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಶ್ರೀಕೃಷ್ಣ ಎನ್, ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ರಾಜಶೇಖರ ಹೆಬ್ಬಾರ್ ಭಾಗವಹಿಸಿದ್ದರು.
ಪಿ.ಯು. ಕಾಲೇಜು ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಪ್ರಾಂಶುಪಾಲರಾಗಿ ಈ ಸಾಲಿನಲ್ಲಿ ನಿವೃತ್ತರಾಗಿರುವ ತುಂಬೆ ಪದವಿ ಪೂರ್ವ ಕಾಲೇಜಿನ ಕೆ.ಎನ್.ಗಂಗಾಧರ ಆಳ್ವ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪಿ.ಯು ಕಾಲೇಜಿನ ಫಾ.ಜೆರೋಮ್ ಡಿಸೋಜ ಸಜಿಪಮೂಡ ಸರ್ಕಾರಿ ಪಿ.ಯು. ಕಾಲೇಜಿನ ಬಾಬು ಗಾಂವ್ಕರ್ ಕೊಡಿಯಾಲ್‌ಬೈಲ್ ಶಾರದಾ ಪಿ.ಯು. ಕಾಲೇಜಿನ ಮಹಾಬಲೇಶ್ವರ ಭಟ್ ಉಳ್ಳಾಲ ಮಾಸ್ತಿಕಟ್ಟೆಯ ಭಾರತ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾವತಿ ಉಳ್ಳಾಲ ಸಯ್ಯದ್ ಮದನಿ ಪಿ.ಯು. ಕಾಲೇಜಿನ ಕೆ.ಕೆ.ನಸೀರಾ ಬಾನು ಹಾಗೂ ಎಡಪದವು ಸ್ವಾಮಿ ವಿವೇಕಾನಂದ ಪಿ.ಯು. ಕಾಲೇಜಿನ ಪದ್ಮನಾಭ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.