ADVERTISEMENT

ರೈತರ ಸಾಲದ ಅರ್ಜಿ ತಿರಸ್ಕರಿಸದಿರಿ

ದ.ಕ ಬ್ಯಾಂಕಿಂಗ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರ್‌ಬಿಐ ವ್ಯವಸ್ಥಾಪಕ ಕೋರಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 4:32 IST
Last Updated 25 ಜೂನ್ 2024, 4:32 IST
ಸಭೆಯಲ್ಲಿ ಡಾ. ಆನಂದ್ ಕೆ. ಮಾತನಾಡಿದರು. ಕವಿತಾ ಎಂ.ಶೆಟ್ಟಿ, ರಮೇಶ್‌ ಬಾಬು, ವೆಂಕಟರಾಮಯ್ಯ ಟಿ.ಎಂ. ಹಾಗೂ ಉಮಾಶಂಕರ ಪ್ರಸಾದ್‌ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಡಾ. ಆನಂದ್ ಕೆ. ಮಾತನಾಡಿದರು. ಕವಿತಾ ಎಂ.ಶೆಟ್ಟಿ, ರಮೇಶ್‌ ಬಾಬು, ವೆಂಕಟರಾಮಯ್ಯ ಟಿ.ಎಂ. ಹಾಗೂ ಉಮಾಶಂಕರ ಪ್ರಸಾದ್‌ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ   

ಮಂಗಳೂರು: ‘ರೈತರು ಸಾಲಕ್ಕಾಗಿ ಸಲ್ಲಿಸುವ ಅರ್ಜಿಯನ್ನು ತಿರಸ್ಕರಿಸದಿರಿ. ಅವರ ಮೇಲೆ ಕರುಣೆ ತೋರಿಸಿ. ನಿಮ್ಮ ನಿರ್ಧಾರ ಅವರ ಜೀವವನ್ನೇ ಬಲಿಪಡೆಯಬಹುದು...’

ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕ್‌ಗಳ ಪರಿಶೀಲನಾ ಸಮಿತಿ ವತಿಯಿಂದ ಇಲ್ಲಿ ಸೋಮವಾರ ಏರ್ಪಡಿಸಿದ್ದ ಬ್ಯಾಂಕಿಂಗ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ವ್ಯವಸ್ಥಾಪಕ ವೆಂಕಟರಾಮಯ್ಯ ಟಿ.ಎಂ. ಅವರು ಬ್ಯಾಂಕ್‌ ಅಧಿಕಾರಿಗಳಲ್ಲಿ ಮಾಡಿಕೊಂಡ ಮನವಿ ಇದು.  

‘ತುಮಕೂರಿನಲ್ಲಿ ರೈತರೊಬ್ಬರು ಬ್ಯಾಂಕ್‌ನಲ್ಲಿ ಸಾಲ ಸಿಗದೇ ಲೇವಾದೇವಿದಾರರಲ್ಲಿ ₹3 ಲಕ್ಷ ಸಾಲ ಪಡೆದಿದ್ದರು. ಅವರು ಕೊರೆಯಿಸಿದ್ದ ಮೂರೂ ಕೊಳವೆಬಾವಿಗಳು ವಿಫಲವಾದವು. ಲೇವಾದೇವಿದಾರರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾದರು. ಬ್ಯಾಂಕ್‌ ಸಾಲ ಸಿಗುತ್ತಿದ್ದರೆ ಅವರಿಗೆ ಈ ದುಃಸ್ಥಿತಿ ಬರುತ್ತಿರಲಿಲ್ಲವೇನೋ. ರಾಜ್ಯದಲ್ಲಿ ಈ ವರ್ಷ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಾಲದ ಅರ್ಜಿಯನ್ನು ತಿರಸ್ಕರಿಸುವ ಮುನ್ನ ಮತ್ತೊಮ್ಮೆ ಯೋಚಿಸಿ’ ಎಂದರು.

ADVERTISEMENT

ಸಭೆಯ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಆನಂದ್‌ 'ಬ್ಯಾಂಕ್‌ಗಳ ಶಾಖೆಯಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಪ್ರಧಾನ ಮಂತ್ರಿ ಜನ–ಧನ ಯೋಜನೆಯ (ಪಿಎಂಜೆಡಿವೈ ) ಖಾತೆದಾರರಲ್ಲಿ ಕನಿಷ್ಠ 10 ಗ್ರಾಹಕರಿಗಾದರೂ ಓವರ್‌ ಡ್ರಾಫ್ಟ್‌ (ಒ.ಡಿ) ಒದಗಿಸಬೇಕೆಂಬ ಸೂಚನೆ ಪಾಲನೆಯಾಗುತ್ತಿಲ್ಲ ಏಕೆ’ ಎಂದು ವಿವರಣೆ ಕೇಳಿದರು.

‘ಪಿಎಂಜೆಡಿವೈ ಅಡಿ ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ 39,746  ಗ್ರಾಹಕರು ಖಾತೆ ಆರಂಭಿಸಿದ್ದಾರೆ. ಆದರೆ, ಶೇ 66.8ರಷ್ಟು ಗ್ರಾಹಕರಿಗೆ ಮಾತ್ರ ಒ.ಡಿ  ಸಿಕ್ಕಿದೆ. ಕೆಲವು ಬ್ಯಾಂಕ್‌ಗಳು ಒಬ್ಬ ಗ್ರಾಹಕನಿಗೂ ಒ.ಡಿ ಒದಗಿಸಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು. 

‘ಅಟಲ್‌ ಪಿಂಚಣಿ ಯೋಜನೆಯ ಬಗ್ಗೆ ಇನ್ನಷ್ಟು ಮುತುವರ್ಜಿ ಅಗತ್ಯ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಹಾಗೂ ಸಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ಬ್ಯಾಂಕ್‌ಗಳು ಆದ್ಯತೆ ನೀಡಬೇಕು ’ ಎಂದು ಸೂಚಿಸಿದರು.

ವಾರ್ಷಿಕ ಸಾಲ ಯೋಜನೆಯಲ್ಲಿ ಗುರಿ ಮೀರಿದ (ಶೇ 109ರಷ್ಟು) ಸಾಧನೆಗಾಗಿ  ಬ್ಯಾಂಕ್‌ಗಳನ್ನು ಸಿಇಒ  ಅಭಿನಂದಿಸಿದರು.

ಲೀಡ್ ಬ್ಯಾಂಕ್‌ (ಕೆನರಾ ಬ್ಯಾಂಕ್‌) ವ್ಯವಸ್ಥಾಪಕಿ ಕವಿತಾ ಎಂ. ಶೆಟ್ಟಿ, ‘ಪ್ರಧಾನ ಮಂತ್ರಿ ಸ್ವನಿಧಿ ಕಾರ್ಯಕ್ರಮದ ಮೊದಲ ಕಂತಿನಲ್ಲಿ 12,175, ಎರಡನೇ ಕಂತಿನಲ್ಲಿ 3,282 ಹಾಗೂ ಮೂರನೇ ಕಂತಿನಲ್ಲಿ 1187  ಪಲಾನುಭವಿಗಳಿಗೆ ಸಾಲ ನೀಡಲಾಗಿದೆ. ಮೊದಲ ಕಂತಿನ 192 ಅರ್ಜಿಗಳು ವಿಲೇವಾರಿಗ ಇನ್ನೂ ಬಾಕಿ ಇವೆ’ ಎಂದರು. 

ಸಾಲ ಠೇವಣಿ ಅನುಪಾತ ಹೆಚ್ಚಳ: ‘ಜಿಲ್ಲೆಯಲ್ಲಿ ಸಾಲ ಠೇವಣಿ ಅನುಪಾತವು 2022–23ನೇ ಸಾಲಿನಲ್ಲಿ 68.89 ಇದ್ದುದು, 2023–24ರಲ್ಲಿ ಶೇ 71.33ಕ್ಕೆ ಹೆಚ್ಚಳವಾಗಿದೆ. 2024ರ ಮಾರ್ಚ್‌ ಅಂತ್ಯಕ್ಕೆ ಜಿಲ್ಲೆಯ ಠೇವಣಿ ಸಂಗ್ರಹ ₹ 70,987 ಕೋಟಿ ಇದ್ದು, ಶೇ 12.13ರಷ್ಟು ಬೆಳವಣಿಗೆಯಾಗಿದೆ. ಸಾಲ ವಿತರಣೆ ಪ್ರಮಾಣ ₹ 50,632 ಕೋಟಿ ಇದ್ದು,ಇದು ಹಿಂದಿನ ಸಾಲಿಗಿಂದ ಶೇ 12.38ರಷ್ಟು  ಹೆಚ್ಚಳವಾಗಿದೆ. ಕೃಷಿ ಕ್ಷೇತ್ರಕ್ಕೆ 2023–24ನೇ ಸಾಲಿನಲ್ಲಿ ₹ 8,690 ಕೋಟಿ ಸಾಲ ನೀಡುವ ಗುರಿ ಇತ್ತು. ಒಟ್ಟು ₹ 14,710.45 ಕೋಟಿ (ಶೇ 169.28ರಷ್ಟು) ಸಾಲ ನೀಡಲಾಗಿದೆ’ ಎಂದು  ತಿಳಿಸಿದರು.

ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೇಶ್‌ ಬಾಬು, ಕೆನರಾ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಉಮಾಶಂಕರ್‌ ಪ್ರಸಾದ್‌ ಭಾಗವಹಿಸಿದ್ದರು.

ಕನ್ನಡ ಬಾರದ ಸಿಬ್ಬಂದಿ– ಗುರಿ ಸಾಧನೆಗೆ ಅಡ್ಡಿ’

‘ಬ್ಯಾಂಕ್‌ಗಳಿಗೆ ಸರ್ಕಾರವು ನಿಗದಿಪಡಿಸಿದ ಕೆಲವೊಂದು ಗುರಿ ಸಾಧನೆ ಆಗದಿರುವುದಕ್ಕೆ ಗ್ರಾಮೀಣ ಪ್ರದೇಶದ ಬ್ಯಾಂಕ್‌ ಶಾಖೆಗಳಲ್ಲಿ ನೆಲದ ಭಾಷೆಯಲ್ಲಿ ವ್ಯವಹರಿಸುವ ಸಿಬ್ಬಂದಿ ಕೊರತೆಯೂ ಕಾರಣ’ ಎಂದು ಡಾ.ಆನಂದ ಕೆ. ಹೇಳಿದರು. ‘ಗ್ರಾಹಕರ ಜೊತೆ ಪರಿಣಾಮಕಾರಿ ಸಂವಹನವೇ ಸಾಧ್ಯವಾಗದಿದ್ದರೆ ಬ್ಯಾಂಕ್‌ಗಳು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದಾದರೂ ಹೇಗೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್‌ ಶಾಖೆಗಳಲ್ಲಿ ವ್ಯವಸ್ಥಾಪಕರಿಂದ ಹಿಡಿದು ಪ್ರತಿಯೊಬ್ಬ ಸಿಬ್ಬಂದಿ ಕನ್ನಡದಲ್ಲಿ ಸಂವಹನ ನಡೆಸಲು ಸಮರ್ಥರಿರಬೇಕು. ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸಬಲ್ಲ ಸಿಬ್ಬಂದಿಯಾದರೂ ಶಾಖೆಯಲ್ಲಿರಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.