ADVERTISEMENT

ಮಂಗಳೂರು | ಮಳೆ ಬಂದ್ರೆ ಮೂಗುಮುಚ್ಚಿ ಕೂರಬೇಕು

ಅನಿಯಂತ್ರಿತ ಸೊಳ್ಳೆಕಾಟ, ವೆಲ್‌ವೆಲ್ ದುರ್ವಾಸನೆ, ಚರಂಡಿ ಸೇರುವ ಮಲೀನ ನೀರು

ಸಂಧ್ಯಾ ಹೆಗಡೆ
Published 19 ಜೂನ್ 2024, 5:52 IST
Last Updated 19 ಜೂನ್ 2024, 5:52 IST
ಅರೆಕೆರೆಬೈಲ್‌ನಲ್ಲಿ ಮಳೆಬಂದಾಗ ಉಕ್ಕುವ ರಸ್ತೆ ನಡುವೆ ಇರುವ ಮ್ಯಾನ್‌ಹೋಲ್
ಅರೆಕೆರೆಬೈಲ್‌ನಲ್ಲಿ ಮಳೆಬಂದಾಗ ಉಕ್ಕುವ ರಸ್ತೆ ನಡುವೆ ಇರುವ ಮ್ಯಾನ್‌ಹೋಲ್   

ಮಂಗಳೂರು: ಇಲ್ಲಿನ ನಿವಾಸಿಗಳು ಮಳೆ ಬಂದರೆ ಬೆಚ್ಚಿ ಬೀಳುತ್ತಾರೆ. ಮಳೆ ಜೋರಾದರೆ, ಚರಂಡಿಯ ನೀರು ಮ್ಯಾನ್‌ಹೋಲ್‌ನಲ್ಲಿ ಉಕ್ಕಿಹರಿಯತ್ತದೆ. ಇಡೀ ಪರಿಸರ ಗಬ್ಬು ವಾಸನೆ ಹರಡಿ, ನಿವಾಸಿಗಳು ಮೂಗು ಮುಚ್ಚಿ ಕೂರಬೇಕು...

ನಗರದ ಗುಜ್ಜರಕೆರೆ ಸಮೀಪದ ಅಂಬಾ ನಗರ ಅರೆಕೆರೆಬೈಲ್ ನಿವಾಸಿಗಳ ಪ್ರತಿ ಮಳೆಗಾಲದ ಗೋಳು ಇದು. ತಗ್ಗು ಪ್ರದೇಶವಾಗಿರುವ ಇಲ್ಲಿ ಜೋರು ಮಳೆ ಬಂದರೆ ರಸ್ತೆ ಹೊಳೆಯಾಗುತ್ತದೆ. ರಸ್ತೆಯ ನಡುವೆ ಇರುವ ಮ್ಯಾನ್‌ಹೋಲ್‌ನಿಂದ ಹೊಲಸು ನೀರು ಉಕ್ಕಿ ಹರಿಯುತ್ತದೆ. ಈ ಕೊಳಚೆ ನೀರಿನಲ್ಲೇ ನಡೆದುಕೊಂಡು ಮನೆ ತಲುಪಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದು. ಮ್ಯಾನ್‌ಹೋಲ್ ಸಮೀಪ ಇರುವ ಮನೆಗಳಲ್ಲೂ ಕುಳಿತುಕೊಳ್ಳುವುದೂ ಕಷ್ಟ, ಅಸಹನೀಯ ವಾಸನೆ ಬರುತ್ತದೆ ಎನ್ನುತ್ತಾರೆ ಅವರು.

‘ರಸ್ತೆಯಲ್ಲಿ ನಿಲ್ಲುವ ನೀರು ಮನೆಯಂಗಳವನ್ನೂ ಆವರಿಸುತ್ತಿತ್ತು. ಮನುಷ್ಯ ಮಲ, ಹೊಲಸು ಅಂಗಳದಲ್ಲಿ ಬಂದು ರಾಶಿ ಬೀಳುತ್ತಿತ್ತು. ಹೀಗಾಗಿ, ಎರಡು ವರ್ಷಗಳ ಹಿಂದೆ ಅಂಗಳವನ್ನು ಎತ್ತರಿಸಿದೆವು. ಈಗ ಎಡೆಬಿಡದೆ ಮಳೆ ಸುರಿದರೆ ಮಾತ್ರ ಅಂಗಳಕ್ಕೆ ನೀರು ಏರುತ್ತದೆ. ಈ ವರ್ಷ ತೋಡು ದುರಸ್ತಿ ಕಾರ್ಯ ನಡೆದಿದೆ. ಸಮಸ್ಯೆ ಕೊಂಚ ತಗ್ಗಿದೆ. ಆದರೆ, ಪೂರ್ಣ ನಿವಾರಣೆಯಾಗಿಲ್ಲ’ ಎನ್ನುತ್ತಾರೆ ನಿವಾಸಿ ಜಯಶ್ರೀ.

ADVERTISEMENT

ಗುಜ್ಜರಕೆರೆಯಲ್ಲಿ ನೀರು ತುಂಬಿದಾಗ ಹೊರಹೋಗಲು ಔಟ್‌ಲೆಟ್ ಮಾಡಲಾಗಿದೆ. ಅದು ಅರೆಕೆರೆಬೈಲ್ ವಸತಿ ಪ್ರದೇಶದ ಮಾರ್ಗವಾಗಿ ಹೋಗುತ್ತದೆ. ಮಳೆ ಬಂದಾಗ ಮ್ಯಾನ್‌ಹೋಲ್‌ನಿಂದ ನುಗ್ಗುವ ನೀರಿನ ಜೊತೆಗೆ, ಕೆರೆಯಿಂದ ಹೊರಹೋಗುವ ನೀರು ತೋಡಿನಿಂದ ಉಕ್ಕಿ ವಸತಿ ಪ್ರದೇಶವನ್ನು ಆವರಿಸುತ್ತದೆ. ಇದು ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತದೆ ಎಂದು ಅವರು ಬೇಸರಿಸಿದರು.

ಸೊಳ್ಳೆಕಾಟ: ‘ಮಳೆಗಾಲ ಬಂತೆಂದರೆ ಅರೆಕೆರೆಬೈಲ್ ನಿವಾಸಿಗಳಿಗೆ ಡೆಂಗಿ ಜ್ವರದ ಭೂತ ಕಾಡುತ್ತದೆ. ಇಡೀ ಪ್ರದೇಶ ಸೊಳ್ಳೆ ಅಭಿವೃದ್ಧಿಯ ತಾಣವಾಗಿ ಮಾರ್ಪಡುತ್ತದೆ. ಕೆಲವು ವರ್ಷಗಳ ಹಿಂದೆ ಈ ಭಾಗದ ಐವರು ಡೆಂಗಿಗೆ ಬಲಿಯಾಗಿದ್ದಾರೆ. ನಾವು ಕೂಡ ಡೆಂಗಿ ಜ್ವರದಿಂದ ಬಳಲಿ, ಸಾಕಷ್ಟು ನೋವು ಅನುಭವಿಸಿದ್ದೇವೆ. ಪ್ರತಿದಿನ ಸಂಜೆ ಮನೆಯಲ್ಲಿ ಧೂಮ (ಹೊಗೆ) ಹಾಕುತ್ತೇನೆ, ಸೊಳ್ಳೆಬತ್ತಿ ಹಚ್ಚುವ ಜೊತೆಗೆ ಸೊಳ್ಳೆ ಸಾಯಿಸಲು ಎಲೆಕ್ಟ್ರಿಕ್ ಬ್ಯಾಟ್ ಬಳಸುತ್ತೇನೆ. ಆದರೂ, ಸೊಳ್ಳೆಕಾಟ ನಿಯಂತ್ರಿಸುವುದು ಕಷ್ಟವಾಗಿದೆ’ ಎನ್ನುತ್ತಾರೆ ಜಯಶ್ರೀ.

‘2018ರ ನಂತರ ಈ ಭಾಗದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಇಲ್ಲಿನ ಅಭಿವೃದ್ಧಿಗೆ ಶಾಸಕರು ಮುತುವರ್ಜಿವಹಿಸಿದ್ದಾರೆ. ಆದರೂ, ಆಗಬೇಕಾಗಿರುವ ಕಾಮಗಾರಿಗಳು ಸಾಕಷ್ಟಿವೆ. ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕಾಗಿದೆ. ಅರೆಕೆರೆಬೈಲ್‌ನಲ್ಲಿ ವೆಟ್‌ವೆಲ್ ಇದೆ. ಇದರಿಂದಾಗಿ ಇಡೀ ಪರಿಸರ ದುರ್ವಾಸನೆಯಿಂದ ಕೂಡಿದೆ. ನೀರು ಶುದ್ಧೀಕರಣಗೊಳ್ಳದೆ ನೇರವಾಗಿ ಚರಂಡಿ ಸೇರಿ, ಅಲ್ಲಿಂದ ನೇತ್ರಾವತಿ ನದಿ ಸೇರುತ್ತದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ’ ಎಂದು ಸ್ಥಳೀಯ ಮುಖಂಡ ನೇಮು ಕೊಟ್ಟಾರಿ ಆಗ್ರಹಿಸಿದರು.

ವೆಟ್‌ವೆಲ್‌ ಪಕ್ಕದಲ್ಲಿರುವ ಚರಂಡಿಯಲ್ಲಿ ಹರಿಯುವ ಕಪ್ಪು ನೀರು ಮತ್ತು ಚರಂಡಿಯ ತಡೆಗೋಡೆ ಕುಸಿದಿರುವುದು

ಅರೆಕೆರೆಬೈಲ್ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಇದನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಅಥವಾ ಮಹಾನಗರ ಪಾಲಿಕೆ ಮುಂದಾಗಬೇಕು.

-ನೇಮು ಕೊಟ್ಟಾರಿ ಸ್ಥಳೀಯ ಮುಖಂಡ

‘ತಗಡಿನ ಹೊದಿಕೆ ಅಗತ್ಯ’

ಅಭಿವೃದ್ಧಿ ಹೊಂದಿರುವ ಗುಜ್ಜರಕೆರೆ ನೋಡುಗರನ್ನು ಸೆಳೆಯುತ್ತದೆ. ಮೇಲ್ನೋಟಕ್ಕೆ ಸುಂದರವಾಗಿದ್ದರೂ ಒಂದು ಬದಿಯಿಂದ ಚರಂಡಿ ನೀರು ಕೆರೆಗೆ ಸೇರುತ್ತದೆ. ಈ ಭಾಗದ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿರುವ ಕೆರೆ ಪವಿತ್ರ ತೀರ್ಥವಾಗಬೇಕು. ಇದಕ್ಕೆ ಮಲೀನ ನೀರು ಸೇರುವುದನ್ನು ತಡೆಗಟ್ಟಿ ಕುಡಿಯಲು ಬಳಕೆ ಮಾಡುವಂತಾಗಬೇಕು. ಕೆರೆ ಪಕ್ಕದಲ್ಲಿ ಅಳವಡಿಸಿರುವ ಆಟಿಕೆಗಳು ಮಳೆನೀರಿನಲ್ಲಿ ತೋಯ್ದು ತುಕ್ಕು ಹಿಡಿಯುತ್ತವೆ. ಇದಕ್ಕೆ ತಗಡಿನ ಹೊದಿಕೆಯ ರಕ್ಷಣೆ ಇದ್ದರೆ ಉತ್ತಮ. ಜೊತೆಗೆ ಅಪೂರ್ಣವಾಗಿರುವ ಕಾಲುವೆ ಪೂರ್ಣಗೊಳಿಸಿದರೆ ಮಳೆ ನೀರು ಹರಿದು ಹೋಗಲು ಅನುಕೂಲವಾಗುತ್ತದೆ ಎಂದು ನೇಮು ಕೊಟ್ಟಾರಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.