ADVERTISEMENT

ಕುಂಚದಲ್ಲಿ ಕಲಾ ಪ್ರಪಂಚ ಸೃಷ್ಟಿ

ಬಹುಸಂಸ್ಕೃತಿ ಉತ್ಸವದ ಭಾಗವಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 6:41 IST
Last Updated 14 ನವೆಂಬರ್ 2024, 6:41 IST
ಮಂಗಳೂರಿನ ತುಳು ಭವನದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು  : ಪ್ರಜಾವಾಣಿ ಚಿತ್ರ
ಮಂಗಳೂರಿನ ತುಳು ಭವನದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು  : ಪ್ರಜಾವಾಣಿ ಚಿತ್ರ   

ಮಂಗಳೂರು: ಕೈಯಲ್ಲಿ ಕುಂಚ ಹಿಡಿದ ಮಕ್ಕಳು ಬಣ್ಣದ ಲೋಕ ಸೃಷ್ಟಿಸಿದರು. ಬಿಳಿ ಕ್ಯಾನ್ವಾಸ್‌ನಲ್ಲಿ ಕಲಾ ಪ್ರಪಂಚವನ್ನೇ ಸೃಷ್ಟಿಸಿದರು.

ಇದಕ್ಕೆ ಅವಕಾಶ ಒದಗಿಸಿದ್ದು ಸುವರ್ಣ ಕರ್ನಾಟಕ ಸಂಭ್ರಮದ ಭಾಗವಾಗಿರುವ ಬಹುಸಂಸ್ಕೃತಿ ಉತ್ಸವದ ಅಂಗವಾಗಿ ಬುಧವಾರ ನಡೆದ ಚಿತ್ರಕಲಾ ಸ್ಪರ್ಧೆ. ವಿವಿಧ ಪ್ರೌಢಶಾಲೆಗಳ ನೂರಾರು ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಆಶಯದೊಂದಿಗೆ ನಡೆಯುತ್ತಿರುವ ಸುವರ್ಣ ಕರ್ನಾಟಕ ಸಂಭ್ರಮವು ನಮ್ಮ ರಾಜ್ಯ ಹಾಗೂ ಭಾಷೆಯ ಅಭಿಮಾನದ ಪ್ರತೀಕವಾಗಿದೆ. ಕನ್ನಡದ ಅರಿವು, ಅಭಿಮಾನದೊಂದಿಗೆ ಬಹುಸಂಸ್ಕೃತಿಯ ಆಶಯ ಸಾರ್ಥಕಗೊಳಿಸಬೇಕಾಗಿದೆ ಎಂದರು.

ADVERTISEMENT

ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ ಸುಮಂಗಲಾ ಎಸ್. ನಾಯಕ್ ಮಾತನಾಡಿ, ಭಾರತವು ಬಹುಸಂಸ್ಕೃತಿಯ ದೇಶ, ನಮ್ಮ ಕರಾವಳಿ ಜಿಲ್ಲೆ ಇದಕ್ಕೆ ನೈಜ ಉದಾಹರಣೆಯಾಗಿದೆ. ಎಲ್ಲ ಸಂಸ್ಕೃತಿ, ಆಚಾರ ವಿಚಾರಗಳನ್ನು ಗೌರವಿಸುವ ಭಾವ ಬೆಳೆಸಿಕೊಳ್ಳಲು ಇಂತಹ ಸ್ಪರ್ಧೆಗಳು ಪೂರಕವಾಗಿವೆ ಎಂದರು.

ಕಲಾವಿದ ಗಣೇಶ್ ಸೋಮಾಯಾಜಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿ ನಿರ್ದೇಶಕ ಕೋಟಿ ಪ್ರಸಾದ್ ಆಳ್ವ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಹಾಲಸಾ ಚಿತ್ರಕಲಾ ಶಾಲೆಯ ವಿಭಾಗ ಮುಖ್ಯಸ್ಥ ಎನ್.ಎಸ್. ಪತ್ತಾರ್, ಆರ್ಟ್ ಕೆನರಾ ಟ್ರಸ್ಟ್ ಸದಸ್ಯ ಹರೀಶ್ ಕೊಡಿಯಾಲ್ ಬೈಲ್ ಇದ್ದರು. ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.