ADVERTISEMENT

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ

ದೇವಳದ ಪ್ರವೇಶ ದ್ವಾರದ ಬಳಿ ಭಕ್ತರ ಗಮನಕ್ಕೆ ಸೂಚನಾ ಫಲಕ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 14:14 IST
Last Updated 13 ನವೆಂಬರ್ 2024, 14:14 IST
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರವೇಶದ್ವಾರದಲ್ಲಿ ಅಳವಡಿಸಿರುವ ವಸ್ತ್ರ ಸಂಹಿತೆ ಪಾಲನೆಯ ಸೂಚನಾ ಫಲಕ
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರವೇಶದ್ವಾರದಲ್ಲಿ ಅಳವಡಿಸಿರುವ ವಸ್ತ್ರ ಸಂಹಿತೆ ಪಾಲನೆಯ ಸೂಚನಾ ಫಲಕ    

ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರು ವಸ್ತ್ರ ಸಂಹಿತೆ ಪಾಲಿಸುವಂತೆ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಸೂಚನಾ ಫಲಕ  ಅಳವಡಿಸಲಾಗಿದೆ.

`ಭಕ್ತಾದಿಗಳ ಗಮನಕ್ಕೆ, ದೇವರ ದರ್ಶನಕ್ಕೆ ಬರುವಾಗ ಸ್ವಚ್ಛವಾದ, ಶುಭ್ರವಾದ ಮತ್ತು  ಸಭ್ಯವಾದ ಉಡುಪುಗಳನ್ನು ಧರಿಸಿಯೇ ಬನ್ನಿ' ಎಂದು ಫಲಕದಲ್ಲಿ ಬರೆಯಲಾಗಿದೆ. ಪುರುಷರು ಪ್ಯಾಂಟ್, ಅಂಗಿ ಅಥವಾ ಲುಂಗಿ ಮತ್ತು ಅಂಗಿ, ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿಕೊಂಡು ದೇವರ ದರ್ಶನ ಪಡೆಯುವಂತೆ ಸೂಚಿಸಲಾಗಿದೆ. ದೇವಸ್ಥಾನಕ್ಕೆ ಬರುವಾಗ ಧರಿಸಬಹುದಾದ ವಸ್ತ್ರಗಳ ಮಾದರಿಯನ್ನು ಸಾಂದರ್ಭಿಕ ಚಿತ್ರಗಳ ಮೂಲಕ ಫಲಕದಲ್ಲಿ ಹಾಕಲಾಗಿದೆ.

ಹಲವು ವರ್ಷಗಳಿಂದ ಭಕ್ತರು ಮತ್ತು ಹಿಂದುತ್ವಪರ ಸಂಘಟನೆಗಳು ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಆಗ್ರಹಿಸುತ್ತಾ ಬಂದಿದ್ದರು. ಈ ಹಿಂದಿನ ವ್ಯವಸ್ಥಾಪನಾ ಸಮಿತಿಯವರು ದೇವಳದ ಪ್ರವೇಶ ದ್ವಾರದ ಬಳಿ ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚನಾ ಫಲಕ ಅಳವಡಿಸಿದ್ದರೂ, ಅದು ಜಾರಿಗೆ ಬಂದಿರಲಿಲ್ಲ. ಈಗ ಮುಖ್ಯ ದ್ವಾರದ ಬಳಿಯೇ ದೊಡ್ಡ ಫಲಕ ಅಳವಡಿಸಿಲಾಗಿದೆ. ಈ ಸೂಚನೆಯನ್ನು ಭಕ್ತರು ಪಾಲಿಸುವಂತೆ ದೇವಳದ ಆಡಳಿತಾಧಿಕಾರಿ ನವೀನ್‌ಕುಮಾರ್ ಭಂಡಾರಿ ಮನವಿ ಮಾಡಿದ್ದಾರೆ.

ADVERTISEMENT

‘ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮಾತ್ರವಲ್ಲ, ಎಲ್ಲಾ ದೇವಸ್ಥಾನಗಳಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು’ ಎಂದು ಹರಿಪ್ರಸಾದ್ ನೆಲ್ಲಿಕಟ್ಟೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.