ADVERTISEMENT

ಮುಡಿಪು | 6 ತಿಂಗಳಿಂದ ಸಮಸ್ಯೆ: ನೀರಿಗಾಗಿ ಹಾಹಾಕಾರ

ಮುಡಿಪುವಿನ ಬಾವಿ, ಕೊಳವೆ ಬಾವಿಗಳಲ್ಲಿ ತೈಲಾಂಶ ಮಿಶ್ರಿತ ನೀರು: ಸ್ಥಳೀಯರಲ್ಲಿ ಆತಂಕ

ಸತೀಶ್ ಕೊಣಾಜೆ
Published 24 ನವೆಂಬರ್ 2024, 7:13 IST
Last Updated 24 ನವೆಂಬರ್ 2024, 7:13 IST
ಇಂಧನ ಮಿಶ್ರಿತ ಕಲುಷಿತ ಬಾವಿ
ಇಂಧನ ಮಿಶ್ರಿತ ಕಲುಷಿತ ಬಾವಿ   

ಮುಡಿಪು: ಪಜೀರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಡಿಪು ಸಮೀಪದ‌ ಸಂಬಾರ ತೋಟ ಪರಿಸರದ ಬಾವಿ, ಕೊಳವೆಬಾವಿಗಳಲ್ಲಿ ತೈಲಾಂಶ ಮಿಶ್ರಿತ ನೀರು ಕಂಡುಬಂದಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಕುಡಿಯುವ ನೀರಿಗಾಗಿ ಹಲವು ದಿನಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

ಮುಡಿಪು ಪೇಟೆಯಿಂದ‌ ಸುಮಾರು 3 ಕಿ.ಮೀ ದೂರವಿರುವ ಸಂಬಾರ ತೋಟ ಪ್ರದೇಶದಲ್ಲಿ ಸುಮಾರು 100 ಮನೆಗಳಿವೆ. ಆದರೆ, ಇದೀಗ ಈ ಪರಿಸರದ ಸುಮಾರು 10 ಕೊಳವೆ ಬಾವಿ ಹಾಗೂ ಕೆಲವು ಬಾವಿಗಳ ನೀರಿನಲ್ಲಿ ಈ ಬಗೆಯ ನೀರು ಕಂಡುಬಂದಿದೆ.

6 ತಿಂಗಳಿಂದ ಸಮಸ್ಯೆ: ಸಂಬಾರತೋಟದ ಕೆಲವು ಕೊಳವೆ ಬಾವಿಗಳಲ್ಲಿ ಆರು ತಿಂಗಳ ಹಿಂದೆಯೇ ನೀರಿನಲ್ಲಿ ಈ ರೀತಿಯ ಅಂಶ ಕಂಡುಬಂದಿತ್ತು. ಈ ಬಗ್ಗೆ ಪಜೀರು ಪಂಚಾಯತಿ ಹಾಗೂ ಇನ್ನಿತರ ಇಲಾಖೆಗಳ ಗಮನಕ್ಕೆ ತರಲಾಗಿತ್ತು. ಆದರೆ, ಬಾವಿಗಳಲ್ಲಿ ಈ ಸಮಸ್ಯೆ ಇರದ ಕಾರಣ‌ ಬಾವಿಯ ನೀರನ್ನು ಬಳಸಿಕೊಳ್ಳುತ್ತಿದ್ದರು. ಇದೀಗ ಈ ಭಾಗದ‌ ಹೆಚ್ಚಿನ ಬಾವಿ ನೀರಲ್ಲೂ ತೈಲದ ವಾಸನೆ ಬರುತ್ತಿದ್ದು, ಯಾವುದೇ ಉದ್ದೇಶಕ್ಕೂ ಬಳಸಲು ಸಾಧ್ಯವಾಗುತ್ತಿಲ್ಲ. ಸಂಬಾರತೋಟದ ಮುಖ್ಯ ರಸ್ತೆಗೆ ತಾಗಿಕೊಂಡು ಪೆಟ್ರೋಲ್ ಪಂಪ್‌ ಹಾಗೂ ಸರ್ವಿಸ್ ಸ್ಟೇಷನ್‌ಗಳಿವೆ.

ADVERTISEMENT

ನೀರಿನ ಗುಣಮಟ್ಟ ಪರೀಕ್ಷೆ: ಸಮಸ್ಯೆ ಆರಂಭವಾದಾಗಿನಿಂದಲೇ ಸ್ಥಳೀಯರು ಬಾವಿಯ ನೀರಿನ ಕಾರ್ಬನ್ ಅನಾಲಿಸ್ಟಿಕ್ ಟೆಸ್ಟ್, ವಿಒಸಿ ಟೆಸ್ಟ್, ಮಂಗಳೂರು ಬಯೊಟೆಕ್ ಲ್ಯಾಬೊರೇಟರಿ ಸೇರಿದಂತೆ ಆರೋಗ್ಯ ಇಲಾಖೆಯಿಂದ ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಿದ್ದಾರೆ. ಅದರಲ್ಲಿ ತೈಲಾಶಂ ಮಿಶ್ರಿತ ಪ್ರಮಾಣ ಕಂಡು ಬಂದ ಕಾರಣ ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದ್ದರು.

‘ನಮ್ಮ ಮನೆಯಲ್ಲಿ ಬಾವಿ ಇಲ್ಲ. ಪಂಚಾಯಿತಿಯ ನೀರಿನ ವ್ಯವಸ್ಥೆ ಇಲ್ಲದೆ ಸಮೀಪದ ಮನೆಯ‌ ಬಾವಿಯ ನೀರನ್ನೇ ಬಳಸಿಕೊಳ್ಳುತ್ತಿದ್ದೇವೆ. ಆ ನೀರಿನ‌ಲ್ಲಿ ತೈಲದ ವಾಸನೆ ಬರುತ್ತಿದೆ. ಇದರಿಂದಾಗಿ ಮನೆಯ ಮಕ್ಕಳಿಗೆ ಕೆಮ್ಮು, ವಾಂತಿ–ಭೇದಿ ಉಂಟಾಗುತ್ತಿದೆ’ ಎಂದು ನಸೀಮಾ ಅವರು ಸಮಸ್ಯೆ ವಿವರಿಸಿದರು.

‘ಬಾವಿಯ ನೀರೂ ವಾಸನೆ ಬರುತ್ತಿದ್ದು, ಉಪಯೋಗ ಮಾಡಲು ಭಯವಾಗುತ್ತಿವೆ. ಕೆಮ್ಮು, ಚರ್ಮದ ಸಮಸ್ಯೆ ಎದುರಾಗುತ್ತಿದೆ. ಎಲ್ಲ ಇಲಾಖೆಗಳಿಗೂ ಮನವಿ ನೀಡಿದರೂ ಸಮಸ್ಯೆಗೆ ಪರಿಹಾರ ಒದಗಿಲ್ಲ’ ಎನ್ನುತ್ತಾರೆ ಸಾಂಬಾರ್ ತೋಟದ ಫಮೀಝ.

‘ಈ ಸಮಸ್ಯೆಯಿಂದಾಗಿ ನಾವು ಸಮೀಪದ ಮನೆಯೊಂದರ ಬಾವಿಯಿಂದ ಪಂಪ್‌ ಹಾಕಿ ನೀರು ಉಪಯೋಗ ಮಾಡುತ್ತಿದ್ದೇವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಹಮೀದ್.

ಇತ್ತೀಚೆಗೆ ನೀರಿನ ಸಮಸ್ಯೆ ಹೆಚ್ಚುತ್ತಿರುವುದರಿಂದ ಸ್ಥಳೀಯರು ಮತ್ತೊಮ್ಮೆ ಜಿಲ್ಲಾಧಿಕಾರಿ, ಪರಿಸರ ಇಲಾಖೆಯ ಅಧಿಕಾರಿ, ಉಸ್ತುವಾರಿ ಸಚಿವರಿಗೆ, ವಿಧಾನಸಭಾ ಅಧ್ಯಕ್ಷರಿಗೆ, ತಹಶೀಲ್ದಾರ್‌ಗೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪಜೀರು ಗ್ರಾಮ ಪಂಚಾಯಿತಿಗೆ ತೆರಳಿ ಸಮಸ್ಯೆ ನಿವಾರಿಸಲು ಒತ್ತಾಯಿಸಿದ್ದಾರೆ.

ಸಾಂಬಾರ್ ತೋಟ ಪ್ರದೇಶಕ್ಕೆ ಸ್ಪೀಕರ್ ಯು.ಟಿ.ಖಾದರ್ ನಿರ್ದೇಶನದಂತೆ ಉಳ್ಳಾಲ ತಹಶೀಲ್ದಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಲಕ್ಷ್ಮೀಕಾಂತ್, ಪಜೀರು ಪಂಚಾಯಿತಿ ಅಧ್ಯಕ್ಷ ರಫೀಕ್, ಕುರ್ನಾಡು ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಜೀರು ಪಂಚಾಯಿತಿ ವತಿಯಿಂದ ಸಾಂಬಾರ್ ತೋಟದಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಬಸ್ ಹಾಗೂ ಇತರ ವಾಹನಗಳನ್ನು ತೊಳೆಯದಂತೆ ಸೂಚನೆ ನೀಡಿದ್ದಾರೆ.

ಸಂಬಾರ್ ತೋಟ ಪರಿಸರದಲ್ಲಿ ಉದ್ಭವಿಸಿರುವ ಸಮಸ್ಯೆಗೆ ಸಂಬಂಧಿಸಿ ಕೊಳವೆ ಬಾವಿಗಳ ನೀರನ್ನು ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ಗುಣಮಟ್ಟ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಏಳು ದಿನಗಳೊಳಗೆ ವರದಿ ಬರಲಿದೆ. ಬಳಿಕ ಕ್ರಮಕೈಗೊಳ್ಳಲಾಗುವುದು. ನೀರಿಗೆ ಸಮಸ್ಯೆಯಾಗದಂತೆ ಪಜೀರು ಪಂಚಾಯತಿಯ ಪೈಪ್ ನೀರನ್ನು ಬಳಸಿಕೊಳ್ಳುವಂತೆ ಸ್ಥಳೀಯರಲ್ಲಿ ತಿಳಿಸಲಾಗಿದೆ ಎಂದು ರಫೀಕ್ ತಿಳಿಸಿದರು.

ಬಾವಿ
ಆರೋಗ್ಯ ಇಲಾಖೆಯ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.