ADVERTISEMENT

ಅಮಲು ಬರಿಸುವ 108 ಕೆ.ಜಿ. ಚಾಕೊಲೇಟ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 5:56 IST
Last Updated 21 ಜುಲೈ 2023, 5:56 IST
ಮಂಗಳೂರು ಪೊಲೀಸರು ವಶಪಡಿಸಿಕೊಂಡಿರುವ ಅಮಲು ಬರಿಸುವ ಚಾಕೊಲೇಟ್‌
ಮಂಗಳೂರು ಪೊಲೀಸರು ವಶಪಡಿಸಿಕೊಂಡಿರುವ ಅಮಲು ಬರಿಸುವ ಚಾಕೊಲೇಟ್‌   

ಮಂಗಳೂರು: ನಗರದಲ್ಲಿ ಶಾಲಾ ಕಾಲೇಜುಗಳ ಸಮೀಪದ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಪತ್ತೆಹಚ್ಚಲು ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎರಡು ಅಂಗಡಿಗಳಲ್ಲಿ ಅಮಲು ಬರಿಸುವ ಚಾಕೊಲೇಟ್‌ಗಳನ್ನು ಮಾರಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಇಬ್ಬರನ್ನು ಬಂಧಿಸಿ, ಅಮಲು ಬರಿಸುವ ಒಟ್ಟಾರೆ 108 ಕೆ.ಜಿ. ಚಾಕೊಲೇಟ್‌ ವಶಪಡಿಸಿಕೊಳ್ಳಲಾಗಿದೆ.

‘ನಗರದ ರಥಬೀದಿಯ ಪೂಜಾ ಪ್ಯಾಲೇಸ್ ಕಟ್ಟಡದಲ್ಲಿರುವ ವೈಭವ್ ಪೂಜಾ ಸೇಲ್ಸ್ ಅಂಗಡಿಯಲ್ಲಿ ಅಮಲು ಉಂಟುಮಾಡುವಂತಹ ‘ಬಾಂಗ್’ ಎಂಬ ಚಾಕೋಲೇಟ್‌ 83 ಕೆ.ಜಿ.ಗಳಷ್ಟು ಪತ್ತೆಯಾಗಿದೆ. ಅಂಗಡಿ ಮಾಲೀಕ ಮನೋಹರ್ ಶೇಟ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

‘ಇಲ್ಲಿಯ ಫಳ್ನೀರ್‌ನ ಹೈಲ್ಯಾಂಡ್ ಆಸ್ಪತ್ರೆಯ ಬಳಿಯ ಗ್ರಾಂಡ್ ಕಿಚನ್ ಹೋಟೆಲ್ ಮುಂಭಾಗದ ಗೂಡಂಗಡಿಯಲ್ಲಿ ಉತ್ತರ ಪ್ರದೇಶದ ಬೆಚನ್ ಸೋನ್ಕರ್ ಎಂಬಾತ ಮಾದಕ ಪದಾರ್ಥ ಮಿಶ್ರಿತ ಬಾಂಗ್ ಚಾಕೊಲೇಟ್‌ ಮಾರಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಅಂಗಡಿಯಲ್ಲಿ ಇಂತಹ 25 ಕೆ.ಜಿ. ಚಾಕೊಲೇಟ್‌ ಸಿಕ್ಕಿದೆ. ಆರೋಪಿಯನ್ನು ಬಂಧಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ವಶಪಡಿಸಿಕೊಳ್ಳಲಾದ ಚಾಕೊಲೇಟ್‌ಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ಚಾಕೋಲೇಟ್‌ನಲ್ಲಿ ಇದ್ದ ಅಮಲು ಪದಾರ್ಥ ಯಾವುದು, ಅದನ್ನು ಎಷ್ಟು ಪ್ರಮಾಣದಲ್ಲಿ ಬೆರೆಸಲಾಗಿದೆ. ಅದರ ಸೇವನೆಯ ಅಡ್ಡ ಪರಿಣಾಮಗಳೇನು ಎಂಬುದು ಪ್ರಯೋಗಾಲಯದ ಪರೀಕ್ಷಾ ವರದಿ ಬಳಿಕವೇ ಗೊತ್ತಾಗಲಿದೆ. ಸದ್ಯಕ್ಕೆ ಆಹಾರದಲ್ಲಿ ಕಲಬೆರಕೆ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಂಗಳೂರು ಪೊಲೀಸರು ವಶಪಡಿಸಿಕೊಂಡಿರುವ ಅಮಲು ಬರಿಸುವ ಚಾಕೊಲೇಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.