ADVERTISEMENT

ಮಾದಕ ದ್ರವ್ಯ ಮಾರಾಟ ಪ್ರಕರಣ: ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 4:33 IST
Last Updated 20 ಆಗಸ್ಟ್ 2023, 4:33 IST
   

ಮಂಗಳೂರು: ನಗರದ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಪೊಲೀಸರ ಕಣ್ತಪ್ಪಿಸಿ ತಪ್ಪಿಸಿಕೊಂಡಿದ್ದ ಮಾದಕ ದ್ರವ್ಯ ಮಾರಾಟ ಪ್ರಕರಣದ ಆರೋಪಿಯನ್ನು ನಗರದ ದಕ್ಷಿಣ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

‘ಬಂಟ್ವಾಳ ತಾಲ್ಲೂಕಿನ ಸಜಿಪ ನಡು ನಿವಾಸಿ ನೌಫಾಲ್ ಅಲಿಯಾಸ್ ಎಸ್.ಎಂ. ನೌಫಾಲ್ ( 32 ವರ್ಷ) ಬಂಧಿತ ಆರೋಪಿ. ಆತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆತನನ್ನು ಬಂಧಿಸಿದ್ದರು. ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಆತನಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಆತನನ್ನು ಪೊಲೀಸ್ ಭದ್ರತೆಯಲ್ಲಿ ಇಲ್ಲಿನ ಸರ್ಕಾರಿ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಆತ ಆ.16 ರಂದು ಸಂಜೆ 05 ಗಂಟೆ ಸುಮಾರಿಗೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ‌. ಈ ಬಗ್ಗೆ, ಆರೋಪಿಯ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಚಿನ್ ಕೆ.ಎಸ್ ದೂರು ನೀಡಿದ್ದು ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಆರೋಪಿ ನೌಫಾಲ್ ನನ್ನು ಪಾಂಡೇಶ್ವರ ಠಾಣೆಯ ಪಿ.ಎಸ್.ಐ ಮನೋಹ‌ ಪ್ರಸಾದ್‌ ಹಾಗೂ ಸಿಬ್ಬಂದಿ ಶನಿವಾರ ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.