ADVERTISEMENT

ಜೂಜು ನಿಲ್ಲಿಸದಿದ್ದರೆ ಹೋರಾಟ: ಡಿವೈಎಫ್‌ಐ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 16:03 IST
Last Updated 13 ಜನವರಿ 2023, 16:03 IST

ಮಂಗಳೂರು: ನಗರದ ಜೂಜುಕೇಂದ್ರಗಳನ್ನು ಮುಚ್ಚುವವರೆಗೆ ಹಲವು ಹಂತಗಳಲ್ಲಿ ಹೋರಾಟ ಸಂಘಟಿಸುವುದಾಗಿ ಡಿವೈಎಫ್ಐ ತಿಳಿಸಿದೆ.

‘ನಗರದಾದ್ಯಂತ ಸ್ಕಿಲ್ ಗೇಮ್, ವಿಡಿಯೊ ಗೇಮ್, ಇಸ್ಪೀಟ್ ಕ್ಲಬ್‌ಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಜೂಜುಕೇಂದ್ರಗಳಿಗೆ ಮುತ್ತಿಗೆ ಹಾಕಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ಬಳಿಕವೂ ಜಿಲ್ಲಾಡಳಿತವಾಗಲೀ, ಪೊಲೀಸ್ ಇಲಾಖೆಯಾಗಲೀ ಅವುಗಳನ್ನು ಮುಚ್ಚಿಸಲು ಕ್ರಮಕೈಗೊಂಡಿಲ್ಲ’ ಎಂದು ಸಂಘಟನೆ ಆರೋಪಿಸಿದೆ.

ರಿಕ್ರಿಯೇಷನ್ ಕ್ಲಬ್ ಹೆಸರಲ್ಲಿ ಈ ಜುಗಾರಿ ಅಡ್ಡೆಗಳು ಕಾನೂನುಬಾಹಿರವಾಗಿ ಕಾರ್ಯಾಚರಿಸುತ್ತಿವೆ. ಬೀದಿಬದಿ ವ್ಯಾಪಾರಿಗಳು, ದಿನಕೂಲಿ ನೌಕರರು, ರಿಕ್ಷಾ ಚಾಲಕರಂತಹ ಅಲ್ಪ ಆದಾಯವಿರುವ ದುಡಿಯುವ ವರ್ಗದವರನ್ನು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿಪಡೆಯುತ್ತಿವೆ. ಇಂತಹ ಜುಗಾರಿ ಕೇಂದ್ರಗಳಿಂದ ಹಲವಾರು ಕುಟುಂಬಗಳು ಬೀದಿಪಾಲಾಗಿವೆ. ಈ ಜುಗಾರಿ ಕೇಂದ್ರಗಳನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ದುಡಿಯುವ ಜನರ ನಿರೀಕ್ಷೆಗಳನ್ನು ನಗರ ಪೊಲೀಸ್‌ ಆಯುಕ್ತರು ಹುಸಿಗೊಳಿಸಬಾರದು' ಎಂದು ಡಿವೈಎಫ್ಐನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್‌ ಒತ್ತಾಯಿಸಿದರು.

ADVERTISEMENT

‘ಜುಗಾರಿ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚದಿದ್ದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿರುದ್ಧವೂ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.