ADVERTISEMENT

ಪಾಲಿಕೆ ಠೇವಣಿಗೆ ಲೈವ್‌ ಇ–ಬಿಡ್ಡಿಂಗ್

ಒಂದೇ ಬ್ಯಾಂಕ್‌ನಲ್ಲಿ ₹110 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 16:29 IST
Last Updated 26 ಜುಲೈ 2024, 16:29 IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿದ್ದ ₹110 ಕೋಟಿ ಮೊತ್ತದ ಠೇವಣಿ ಇ– ಬಿಡ್ಡಿಂಗ್ ಮೂಲಕ ಒಂದೇ ಬ್ಯಾಂಕ್‌ಗೆ ವರ್ಗಾವಣೆಯಾಗುತ್ತಿದೆ.

ವಿವಿಧ ಮೂಲಗಳಿಂದ ಸಂಗ್ರಹವಾಗಿದ್ದ ಪಾಲಿಕೆಯ ಆದಾಯವನ್ನು ಹಲವಾರು ರಾಷ್ಟ್ರೀಕೃತ  ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಯಾಗಿ ಇಡಲಾಗಿತ್ತು. ಇದು ಪ್ರತಿವರ್ಷ ಅದೇ ಶಾಖೆಯಲ್ಲಿ ನವೀಕರಣಗೊಳ್ಳುತ್ತಿತ್ತು. ಎಫ್‌.ಡಿ ಬಾಂಡ್‌ಗಳನ್ನು ಪರಿಶೀಲಿಸಿದಾಗ ಬಡ್ಡಿದರ ಕಡಿಮೆ ಇರುವುದು ಕಂಡುಬಂತು. ಇದರಿಂದ ಪಾಲಿಕೆಗೆ ಆಗುತ್ತಿರುವ ನಷ್ಟವನ್ನು ತಡೆಯಲು, ಇ– ಬಿಡ್ಡಿಂಗ್ ಮಾಡುವ ನಿರ್ಧಾರ ಕೈಗೊಂಡು, ಜುಲೈ 18ರಂದು ಲೈವ್ ಇ– ಬಿಡ್ಡಿಂಗ್ ನಡೆಸಲಾಯಿತು. ಒಂಬತ್ತು ರಾಷ್ಟ್ರೀಕೃತ ಹಾಗೂ 10 ಖಾಸಗಿ ಬ್ಯಾಂಕ್‌ಗಳು ಬಿಡ್‌ನಲ್ಲಿ ಭಾಗವಹಿಸಿದ್ದವು. ಅತಿ ಹೆಚ್ಚು ಬಡ್ಡಿದರ ನಿಗದಿಪಡಿಸಿದ (ಶೇ 7.9) ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎಲ್ಲ ಹಣ ಠೇವಣಿ ಇಡಲಾಗುತ್ತಿದೆ. ಜುಲೈ 28ರಿಂದ ಖಾತೆ ವರ್ಗಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ.

ಈ ಹಿಂದೆ ಒಂದೆರಡು ಬಾರಿ ಪ್ರಯತ್ನ ನಡೆದರೂ, ಪೂರ್ಣ ಯಶಸ್ಸು ದೊರೆತಿರಲಿಲ್ಲ. ಈ ಬಾರಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಈವರೆಗೆ ನಿಶ್ಚಿತ ಠೇವಣಿಯಿಂದ ಪಾಲಿಕೆಗೆ ವಾರ್ಷಿಕವಾಗಿ ₹5 ಕೋಟಿಯಷ್ಟು ಬಡ್ಡಿ ಮೊತ್ತ ದೊರೆಯುತ್ತಿತ್ತು. ಇನ್ನು ಮುಂದೆ ಹೆಚ್ಚುವರಿಯಾಗಿ ₹4 ಕೋಟಿ ದೊರೆಯಬಹುದೆಂದು ಅಂದಾಜಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಬಿಡ್ ಪಡೆದಿರುವುದರಿಂದ ಪಾಲಿಕೆಯ ಠೇವಣಿ ಇನ್ನಷ್ಟು ಹೆಚ್ಚು ಭದ್ರವಾದಂತಾಗಿದೆ ಎಂದು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.