ಸುಳ್ಯ:ತಾಲ್ಲೂಕಿನ ವಿವಿಧ ಕಡೆ ಬೆಳಿಗ್ಗೆ ಸಂಭವಿಸಿದ ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಬಿಡುಗಡೆಗೊಳಿಸಿದ್ದು, ರಿಕ್ಟರ್ ಮಾಪಕದಲ್ಲಿ 3.0 ದಾಖಲಾಗಿರುವುದಾಗಿ ತಿಳಿಸಿದೆ.
ಬೆಳಿಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡಿಗೆ ಈ ಭೂಕಂಪನ ಸಂಭವಿಸಿದ್ದು, ಮಡಿಕೇರಿ – ದಕ್ಷಿಣ ಕನ್ನಡ ಗಡಿಗ್ರಾಮವಾಗಿರುವ ಚೆಂಬುವಿನಿಂದ 5.2 ವಾಯುವ್ಯ ದಿಕ್ಕಿನಲ್ಲಿ ಭೂಮಿಯ 15 ಕಿಲೋಮೀಟರ್ ಆಳದಲ್ಲಿ ರಿಕ್ಟರ್ ಮಾಪಕ 3.೦ ರಷ್ಟು ಭೂಕಂಪನವಾಗಿದೆ.
ಇದರ ಪರಿಣಾಮ ಮಡಿಕೇರಿ ತಾಲ್ಲೂಕಿನ ಕರಿಕೆ ಭಾಗದ ವಾಯುವ್ಯದಲ್ಲಿ 8.2 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸಂಪಾಜೆ ಭಾಗದ ಪಶ್ಚಿಮದಲ್ಲಿ 11.4 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸುಳ್ಯ ತಾಲೂಕು ಭಾಗದ ಆಗ್ನೇಯದಲ್ಲಿ 12.1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಈ ಪ್ರದೇಶದ 40ರಿಂದ 50 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.
ಮಂಗಳವಾರ ಬೆಳಿಗ್ಗೆ 7.44, 7.45 ರ ಹೊತ್ತಿಗೆ ಲಘುವಾಗಿ ಭೂಮಿ ಕಂಪಿಸಿದೆ. ಭಾರೀ ವಿಚಿತ್ರ ಶಬ್ದದೊಂದಿಗೆ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ.ಜನರು ಆತಂಕದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿದೆ. ಮನೆಯ ಚಾವಣಿಯ ತಗಡು ಶೀಟ್‌ಗಳು ಕಂಪಿಸಿದೆ.
ಸುಳ್ಯ, ಸಂಪಾಜೆ, ಗೂನಡ್ಕ, ಗುತ್ತಿಗಾರು ಮತ್ತಿತರವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿರುವ ಬಗ್ಗೆ ಜನರು ತಿಳಿಸಿದ್ದಾರೆ. ಜೂ.25ರಂದುಬೆಳಿಗ್ಗೆ 9.10ರಂದು ಭೂಕಂಪನ ಆಗಿತ್ತು. ಕುಳಿತುಕೊಂಡ ಕುರ್ಚಿ ಅಲುಗಾಡಿದೆ 4-5 ಸೆಕೆಂಡ್ ಕಂಪಿಸಿದರ ಜೊತೆಗೆ ಭಾರೀ ಶಬ್ದ ಕೇಳಿತ್ತು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅನುಭವ ಹಂಚಿಕೊಂಡಿದ್ದಾರೆ. ಬೈಕ್‌ನಲ್ಲಿ ಕುಳಿತಿದ್ದಾಗ ಬೈಕ್ ಒಮ್ಮೆಗೆ ಅಲುಗಾಡಿದ ಅನುಭವ ಆಯಿತು ಎನ್ನುತ್ತಾರೆ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ.ಹಮೀದ್.
ಮನೆಯ ಟೇಬಲ್, ಕುರ್ಚಿಗಳು ಕಂಪಿಸಿದ್ದವು ವಿಚಿತ್ರ ಶಬ್ದವೂ ಕೇಳಿ ಬಂದಿತ್ತು ಎಂದು ಪತ್ರಕರ್ತ ಗಿರೀಶ್ ಅಡ್ಪಂಗಾಯ ಅನುಭವ ಹಂಚಿಕೊಂಡಿದ್ದಾರೆ. ಗುತ್ತಿಗಾರು ಭಾಗದಲ್ಲಿ 5 ಸೆಕೆಂಡ್‌ಗಳ ಕಾಲ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ, ಜೆಸಿಬಿ ಹತ್ತಿರ ದ ಹಾಗೆ ವಿಚಿತ್ರ ಶಬ್ದ ಕೇಳಿತ್ತು ಎನ್ನುತ್ತಾರೆ ಗುತ್ತಿಗಾರಿನ ಬಿಟ್ಟಿ ಬಿ ನೆಡುನಿಲಂ. ಸುಳ್ಯ ವಿಷ್ಣು ಸರ್ಕಲ್ ಭಾಗದಲ್ಲಿ ಕೆಲವು ಸೆಕೆಂಡ್ ಕಾಲ ಭೂಮಿ ಕಂಪಿಸಿದ ಸ್ಪಷ್ಟ ಅನುಭವ ಆಗಿದೆ ಎಂದು ದೀಪು ಪಿ.ಎಸ್.ಅವರು ತಮ್ಮಅನುಭವ ಹಂಚಿಕೊಂಡಿದ್ದಾರೆ. ಭಾನುವಾರ ಕರಿಕೆ ಸಮೀಪ ರಿಕ್ಟರ್ ಸ್ಕೇಲ್‌ನಲ್ಲಿ 2.3 ತೀವ್ರತೆಯ ಕಂಪನ ಆಗಿ ಅದರ ಪ್ರತಿಫಲನ ಈ ಭಾಗದಲ್ಲಿ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.