ಬದಿಯಡ್ಕ/ ಮಂಗಳೂರು: ಕಾಸರಗೋಡು ಜಿಲ್ಲೆಯ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಂಚರಿಸುತ್ತಿದ್ದ ಕಾರನ್ನು ಬೋವಿಕ್ಕಾನ ಸಮೀಪದ ಬಾವಿಕ್ಕೆರೆಯಲ್ಲಿ ಅಡ್ಡಗಟ್ಟಿದ ಬಗ್ಗೆ ಸ್ವಾಮೀಜಿಯವರಿಂದ ಯಾವುದೇ ದೂರು ಬಂದಿಲ್ಲ. ಈ ಕುರಿತು ಯಾವುದೇ ಠಾಣೆಯಲ್ಲೂ ಪ್ರಕರಣ ದಾಖಲಾಗಿಲ್ಲ ಎಂದು ಕಾಸರಗೋಡು ಜಿಲ್ಲೆಯ ಪೊಲೀಸ್ ಮೂಲಗಳು ತಿಳಿಸಿವೆ.
‘ಬೋವಿಕ್ಕಾನದಲ್ಲಿ ಕ್ರೀಡಾ ಚಾಂಪಿಯನ್‌ಷಿಪ್ ಸಲುವಾಗಿ ಸ್ವಯಂಸೇವಕರು ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದರು. ಈ ವೇಳೆ ಎಡನೀರು ಸ್ವಾಮೀಜಿಯವರ ಕಾರು ಅಲ್ಲಿ ಹಾದುಹೋಗಿತ್ತು. ಆಗ ಅದನ್ನು ತಡೆದ ಸ್ವಯಂಸೇವಕರು, ಪರ್ಯಾಯ ಮಾರ್ಗದಲ್ಲಿ ಸೂಚಿಸುವಂತೆ ಹೇಳಿದ್ದರು. ಈ ವೇಳೆ ಕಾರಿನ ಗಾಜಿಗೆ ಕೈಯಿಂದ ಬಡಿದಿದ್ದರು. ಕಾರು ಎಡನೀರು ಮಠದ ಸ್ವಾಮೀಜಿಯವರದ್ದು ಎಂಬುದು ಆ ಸ್ವಯಂಸೇವಕರಿಗೂ ತಿಳಿದಿರಲಿಲ್ಲ. ಈ ಘಟನೆಯ ಬಳಿಕ ಸ್ವಯಂಸೇವಕರು ಸ್ವಾಮೀಜಿಯವರಲ್ಲಿ ಕ್ಷಮೆ ಯಾಚಿಸಿದ್ದಾರೆ’ ಎಂದು ಕಾಸರಗೋಡು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಮುಖ್ಯಮಂತ್ರಿಗೆ ಕ್ಯಾ.ಚೌಟ ಪತ್ರ: ಎಡನೀರು ಮಠದ ಸ್ವಾಮೀಜಿ ಕಾರನ್ನು ತಡೆದ ಕೃತ್ಯವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಖಂಡಿಸಿದ್ದಾರೆ. ಈ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಅವರು ಪತ್ರ ಬರೆದಿದ್ದಾರೆ.
‘ಹಿಂದೂ ಸಮಾಜದ ಮಾರ್ಗದರ್ಶಕರಾದ ಎಡನೀರು ಸ್ವಾಮೀಜಿಯ ಕಾರನ್ನು ತಡೆದಿರುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿದರ್ಶನ. ಸ್ವಾಮೀಜಿಗೆ ಸುರಕ್ಷತೆ ಇಲ್ಲದಿದ್ದರೆ ಸಾಮಾನ್ಯ ಹಿಂದೂಗಳ ಸ್ಥಿತಿ ಹೇಗಿರಬಹುದು? ಸಮಾಜದಲ್ಲಿ ಭೀತಿ ಸೃಷ್ಟಿಸುವ ಇಂತಹ ಪುಂಡರನ್ನು ತಕ್ಷಣ ಮಟ್ಟಹಾಕಬೇಕು. ಶಾಂತಿ ಕದಡುವವರಿಗೆ ಇದು ಪಾಠವಾಗಬೇಕು’ ಎಂದು ಪತ್ರದಲ್ಲಿ ಕ್ಯಾ.ಚೌಟ ಕೋರಿದ್ದಾರೆ.
Cut-off box - ಬೋವಿಕ್ಕಾನದಲ್ಲಿ ಪ್ರತಿಭಟನೆ ಬದಿಯಡ್ಕ: ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ವಾಹನ ತಡೆದ ಕೃತ್ಯವನ್ನು ಖಂಡಿಸಿ ಬೋವಿಕ್ಕಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ಎಡನೀರು ಮಠದ ಅಭಿಮಾನಿಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಹಿಂದೂ ಐಕ್ಯವೇದಿ ಮುಖಂಡ ಶಾಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿಯ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ರವೀಶ್ ತಂತ್ರಿ ಕುಂಟಾರು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಯದೇವ ಖಂಡಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ಪ್ರಭಾಕರ ಮಾಸ್ತರ್ ಪವಿತ್ರನ್ ಮುಖಂಡರಾದ ಅರುಣ್ ಕುಮಾರ ಪುತ್ತಿಲ ಜಯಪ್ರಕಾಶ ತೊಟ್ಟೆತ್ತೋಡಿ ಧಾರ್ಮಿಕ ಮುಖಂಡರಾದ ವಿಠಲ ಭಟ್ ಸುರೇಶ್ ಕೀಯೂರು ಗಣೇಶ ಮಾವಿನಕಟ್ಟೆ ವಾಮನ ಆಚಾರ್ಯ ನವೀನ್ ಕುಮಾರ ಭಟ್ ಸೀತಾರಾಮ ಬಳ್ಳುಳ್ಳಾಯ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.