ADVERTISEMENT

ನಿಟ್ಟೆ ವಿವಿ: 1052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ; 22 ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:21 IST
Last Updated 17 ನವೆಂಬರ್ 2024, 8:21 IST
ವಿದ್ಯಾರ್ಥಿನಿಯೊಬ್ಬಗೆ ಡಾ.ಆರ್ತಿ ಸರಿನ್ ಪ್ರಮಾಣಪತ್ರ ವಿತರಿಸಿದರು. ಎಂ.ಎಸ್.ಮೂಡಿತ್ತಾಯ ಇದ್ದಾರೆ
ವಿದ್ಯಾರ್ಥಿನಿಯೊಬ್ಬಗೆ ಡಾ.ಆರ್ತಿ ಸರಿನ್ ಪ್ರಮಾಣಪತ್ರ ವಿತರಿಸಿದರು. ಎಂ.ಎಸ್.ಮೂಡಿತ್ತಾಯ ಇದ್ದಾರೆ   

ಉಳ್ಳಾಲ: ದೇಶದ ಅಭಿವೃದ್ಧಿಯ ಚುಕ್ಕಾಣಿ ವಿದ್ಯಾವಂತ ಯುವಕರ ಕೈಯಲ್ಲಿದ್ದು ಯುವಜನರು ಪದವಿಗಳನ್ನು ಬಳಸಿಕೊಂಡು ದೇಶ ಕಟ್ಟುವ ಕೆಲಸ ಮಾಡಬೇಕು, ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಉಳಿಸುವ ಪ್ರಯತ್ನವನ್ನೂ ಮಾಡಬೇಕು ಎಂದು ಸೇನಾಪಡೆಗಳ ವೈದ್ಯಕೀಯ ಸೇವೆಗಳ ಡೈರೆಕ್ಟರ್‌ ಜನರಲ್ ಡಾ.ಆರ್ತಿ ಸರಿನ್ ಸಲಹೆ ನೀಡಿದರು.

ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಸಂದೇಶ ನೀಡಿದ ಅವರು ದೇಶದ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ಪದವೀಧರರು ನಾಗರಿಕ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದಂತಾಗುತ್ತದೆ ಎಂದರು.

ಮೌಲ್ಯಗಳ ಉಳಿವು ಮತ್ತು ಬಳಕೆಯ ಮೇಲೆ ಮಾನವ ಜನಾಂಗದ ಅಭಿವೃದ್ಧಿ ಅವಲಂಬಿಸಿದೆ. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಜ್ಞಾನವನ್ನು ಸದಾ ವಿಸ್ತರಿಸಿಕೊಂಡು ತಾವು ಬೆಳೆಯುತ್ತ, ಸಮಾಜವನ್ನೂ ಬೆಳೆಸುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.‌

ADVERTISEMENT

ಕುಲಪತಿ ಎಂ.ಎಸ್.ಮೂಡಿತ್ತಾಯ ಮಾತನಾಡಿ ನಿಟ್ಟೆ ವಿವಿ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್‌ ಫ್ರೇಮ್‌ವರ್ಕ್‌ನ ಭಾರತದ 1100ಕ್ಕೂ ಹೆಚ್ಚು ವಿವಿಗಳ ಪೈಕಿ ಒಟ್ಟಾರೆ 66ನೇ ಸ್ಥಾನ ಹೊಂದಿದೆ. ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ 6ನೇ ಸ್ಥಾನದಲ್ಲಿ, ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧವಿಜ್ಞಾನ ಸಂಸ್ಥೆ 41ನೇ ಸ್ಥಾನದಲ್ಲಿದೆ ಎಂದರು.

ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಹ ಕುಲಾಧಿಪತಿಗಳಾದ ಪ್ರೊ. ಎಂ.ಶಾಂತಾರಾಂ ಶೆಟ್ಟಿ, ವಿಶಾಲ್ ಹೆಗ್ಡೆ, ಕುಲಸಚಿವ ಪ್ರೊ. ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಪ್ರೊ. ಪ್ರಸಾದ್ ಬಿ. ಶೆಟ್ಟಿ ಇದ್ದರು. ಡಾ.ಸಿದ್ಧಾರ್ಥ್ ಮತ್ತು ವಾಕ್‌ಶ್ರವಣ ವಿಭಾಗದ ಪ್ರೊ ಅಖಿಲಾ ನಿರೂಪಿಸಿದರು.

ಒಟ್ಟು 1052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 34 ಪಿಎಚ್‌ಡಿ, 163 ವೈದ್ಯಕೀಯ, 147 ದಂತ ವೈದ್ಯಕೀಯ, 209 ಫಾರ್ಮಸಿ, 143 ನರ್ಸಿಂಗ್, 85 ಫಿಸಿಯೋಥೆರಪಿ, 146 ಅರೆ ವೈದ್ಯಕೀಯ ವಿಜ್ಞಾನ, 14 ಮಾನವಿಕ, 49 ಜೀವವಿಜ್ಞಾನ, 41 ವಾಸ್ತುಶಿಲ್ಪ, 15 ವಾಕ್–ಶ್ರವಣ, 6 ವ್ಯವಹಾರ ನಿರ್ವಹಣೆ ಪದವಿ ನೀಡಲಾಯಿತು. 22 ಚಿನ್ನದ ಪದಕ ಹಾಗೂ 72 ಮೆರಿಟ್ ಪ್ರಮಾಣಪತ್ರ ವಿತರಿಸಲಾಯಿತು.

ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.