ADVERTISEMENT

ಮಂಗಳೂರು | ವಿದ್ಯುತ್ ಸ್ಪರ್ಶ: ರಿಕ್ಷಾ ಚಾಲಕರಿಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 13:08 IST
Last Updated 27 ಜೂನ್ 2024, 13:08 IST

ಮಂಗಳೂರು: ನಗರದ ರೊಸಾರಿಯೊದಲ್ಲಿ ಭಾರಿ ಮಳೆ ವೇಳೆ ತುಂಡಾಗಿ ನೆಲಕ್ಕುರುಳಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರಿಕ್ಷಾ ಚಾಲಕರಿಬ್ಬರು ಮೃತಪಟ್ಟಿದ್ದಾರೆ. ಬುಧವಾರ ರಾತ್ರಿಯೇ ಈ ದುರ್ಘಟನೆ ಸಂಭವಿಸಿದ್ದು, ಗುರುವಾರ ನಸುಕಿನಲ್ಲಿ ಗೊತ್ತಾಗಿದೆ.

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ರಾಜು (50) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ರಾಮಕುಂಜದ ದೇವರಾಜ್‌ (46) ಮೃತರು ಎಂದು ಪೊಲೀಸರು ತಿಳಿಸಿದರು. 

ಬಾಡಿಗೆ ಆಟೊ ರಿಕ್ಷಾವನ್ನು ಚಲಾಯಿಸುತ್ತಿದ್ದ ರಾಜು ಹಾಗೂ ದೇವರಾಜ್‌ ಇಬ್ಬರು ರೊಸಾರಿಯೊದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.

ADVERTISEMENT

‘ರಿಕ್ಷಾ ತೊಳೆಯಲು ಹೋದ ರಾಜು ಅವರು ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದರು. ವಿದ್ಯುದಾಘಾತಕ್ಕೊಳಗಾದ ಅವರ ನರಳಾಟ ಕೇಳಿ ದೇವರಾಜ್‌ ನೆರವಿಗೆ ಧಾವಿಸಿದ್ದರು. ಗೋಣಿ ಚೀಲವೊಂದನ್ನು ಮೈಮೇಲೆ ಎಸೆದು ಅವರನ್ನು ರಕ್ಷಿಸಲು ಯತ್ನಿಸಿದ್ದರು. ಭಾರಿ ಮಳೆಯಾಗಿ ಆ ಸ್ಥಳದಲ್ಲಿ ನೀರು ಹರಿಯುತ್ತಿದ್ದರಿಂದ ದೇವರಾಜ್‌ ಅವರಿಗೂ ವಿದ್ಯುದಾಘಾತ ಉಂಟಾಗಿತ್ತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ದಾಖಲಾಗಿವೆ. ರಾತ್ರಿ ವೇಳೆ ಭಾರಿ ಮಳೆಯಾಗುತ್ತಿದ್ದುದರಿಂದ, ಅವರು ಮೃತಪಟ್ಟಿರುವುದು ಬೆಳಿಗ್ಗೆವರೆಗೂ ಗೊತ್ತಾಗಿರಲಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು. 

ನಗರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.