ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಶಿಶಿಲದಲ್ಲಿ ವ್ಯಕ್ತಿಯೊಬ್ಬರು ಮಕ್ಕಳೊಂದಿಗೆ ಗುರುವಾರ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾಡಾನೆ ಎದುರಾಗಿದ್ದು, ಅವರು ಬೈಕ್ ಬಿಟ್ಟು ಓಡಿದಾಗ ಕಾಡಾನೆ ಬೈಕ್‌ಗೆ ಹಾನಿ ಮಾಡಿದೆ.
ಶಿಶಿಲ ಗ್ರಾಮದ ಕಲ್ಲಾಜೆ ನಿವಾಸಿ ವಸಂತ ಗೌಡ ಅವರು ಮಕ್ಕಳನ್ನು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಬಿಡಲು ಬೆಳಿಗ್ಗೆ 8.30ಕ್ಕೆ ಹೋಗುತ್ತಿದ್ದಾಗ ಕಾಡಾನೆ ಕಾಣಿಸಿಕೊಂಡಿದೆ. ಭಯದಿಂದ ವಸಂತ ಗೌಡ ಬೈಕ್ ನಿಲ್ಲಿಸಲು ಪ್ರಯತ್ನಿಸಿದಾಗ ಬೈಕ್‌ನಿಂದ ಬಿದ್ದು ಅವರಿಗೆ ಹಾಗೂ ಮಕ್ಕಳಾದ ಲಾವ್ಯ ಮತ್ತು ಅದ್ವಿತ್‌ಗೆ ಮೊಣಕಾಲು ಮತ್ತು ಕೈಗಳಿಗೆ ಗಾಯಗಳಾಗಿದೆ. ಅಲ್ಲಿಂದ ಓಡಿ ಹೋಗಿ ಮನೆ ಸೇರಿದರು.
ಈ ವೇಳೆ ಬೈಕನ್ನು ಕೆಡವಿ ಸಂಪೂರ್ಣವಾಗಿ ಹಾನಿಗೊಳಿಸಿದೆ. ಕಾಡಾನೆಗಳ ಹಾವಳಿ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ನಾರಾವಿ ಬಸದಿಯಲ್ಲಿ ದೀಪೋತ್ಸವ ಇಂದು
ಉಜಿರೆ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ನ.22ರಂದು ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿಯಲ್ಲಿ ದೀಪೋತ್ಸವ ಆಯೋಜಿಸಲಾಗಿದೆ ಎಂದು ಬಸದಿಯ ಆಡಳಿತ ಸಮಿತಿ ತಿಳಿಸಿದೆ.
ನ.22ರಂದು ಮಧ್ಯಾಹ್ನ 2ರಿಂದ ನಿತ್ಯವಿಧಿ ಸಹಿತ ಪದ್ಮಾವತಿದೇವಿ ಆರಾಧನೆ, ಉಯ್ಯಾಲೆಸೇವೆ, ಸಂಜೆ 7ರಿಂದ ಭಗವಾನ್ ಧರ್ಮನಾಥ ಸ್ವಾಮಿಗೆ 24 ಕಲಶಗಳಿಂದ ಅಭಿಷೇಕ, ದೇವರ ಉತ್ಸವ, ದೀಪೋತ್ಸವ, ಬಳಿಕ ಮಹಾಪೂಜೆ ನಡೆಯಲಿದೆ. ರಾತ್ರಿ ಜಿನಭಜನೆ ನಡೆಯಲಿದೆ. ನಿರೀಕ್ಷಾ ಜೈನ್ ಹೊಸ್ಮಾರು ಅವರು ಸಂಗೀತ ಪೂಜಾಷ್ಟಕ ಹಾಡುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.