ಮೂಡಿಗೆರೆ: ಜೀವ, ಬೆಳೆ ಹಾನಿ ಮಾಡುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯಲು ತಾಲ್ಲೂಕಿನ ಬಿ.ಹೊಸಳ್ಳಿಯ ದೊಡ್ಡಳ್ಳಕ್ಕೆ 9 ಸಾಕಾನೆಗಳನ್ನು ಕರೆಸಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಗ್ರಾಮದ ಗಾಳಿಗಂಡಿಯ ಮೀನಾ ಎಂಬುವರನ್ನು ಹೆಡದಾಳ್ ಗ್ರಾಮದ ಬಳಿ ನಾಲ್ಕು ದಿನಗಳ ಹಿಂದೆ ಕಾಡಾನೆ ತುಳಿದು ಕೊಂದು ಹಾಕಿದ್ದರಿಂದ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ. ದಾಳಿ ನಡೆಸಿದ ಕಾಡಾನೆಯು ಚಂಡಗೋಡು, ಕಂಚಿಕಲ್ ದುರ್ಗಾ, ಕುಂದೂರು ಭಾಗದಲ್ಲಿ ಸಂಚರಿಸುತ್ತಿರುವ ಮಾಹಿತಿ ಇದ್ದು, ಕಾರ್ಯಚರಣೆಗೆ ಬಂದಿರುವ ಸಾಕಾನೆಗಳನ್ನು ಕುಂದೂರು ಸಮೀಪದ ದೊಡ್ಡಳ್ಳದಲ್ಲಿ ಇಳಿಸಲಾಗಿದೆ.
ಶನಿವಾರ ಸಂಜೆ ಏಳು ಸಾಕಾನೆಗಳು ಬಂದಿದ್ದು, ಭಾನುವಾರ ಬೆಳಿಗ್ಗೆ ಅಭಿಮನ್ಯು ಹಾಗೂ ಮಹೇಂದ್ರ ಆನೆಗಳನ್ನು ಕರೆ ತರಲಾಯಿತು. ಮಾವುತರು, ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸಾಕಾನೆಗಳಿಗೆ ಪೂಜೆ ಸಲ್ಲಿಸಲಾಯಿತು.
ಭಾನುವಾರ ಮಧ್ಯಾಹ್ನದ ವೇಳೆಗೆ ಕಾಡಾನೆಯು ಕೆಂಜಿಗೆ ಮೀಸಲು ಅರಣ್ಯದ ಬಸನಿ ಅರಣ್ಯದಲ್ಲಿದೆ ಎಂಬ ಮಾಹಿತಿ ಬಂದಿದ್ದರಿಂದ ಸಾಕಾನೆಗಳನ್ನು ಲಾರಿ ಮೂಲಕ ಕರೆದೊಯ್ಯಲಾಗಿತ್ತು. ಆದರೆ, ಕಾಡಾನೆಯ ಸುಳಿವು ಸಿಗದ ಕಾರಣ ಸಂಜೆ ವೇಳೆಗೆ ಸಾಕಾನೆಗಳನ್ನು ತಾತ್ಕಾಲಿಕ ಶಿಬಿರಕ್ಕೆ ಕರೆ ತರಲಾಯಿತು.
ಕುಂದೂರು ಗ್ರಾಮದಲ್ಲಿ ಎಂಟು ತಿಂಗಳ ಹಿಂದೆ ಶೋಭಾ ಎಂಬುವರನ್ನು ಕಾಡಾನೆ ತುಳಿದು ಕೊಂದಿದ್ದರಿಂದ ಇದೇ ಪ್ರದೇಶದಲ್ಲಿ ಸಾಕಾನೆಗಳು ಕಾರ್ಯಾಚರಣೆ ನಡೆಸಿ, ಎರಡು ಕಾಡಾನೆಗಳನ್ನು ಸೆರೆ ಹಿಡಿದಿದ್ದವು. ಇತ್ತೀಚೆಗೆ ದಾಳಿ ನಡೆಸಿ ಜೀವ ಹಾನಿ ಮಾಡುತ್ತಿರುವ ಕಾಡಾನೆಯನ್ನೇ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸಾಕಾನೆಗಳು ಬರುತ್ತಿದ್ದಂತೆ ಅವುಗಳನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.