ADVERTISEMENT

ಬೆಳ್ಳಿಪ್ಪಾಡಿಯಿಂದ ಶಾಂತಿಗೋಡಿಗೆ ಕಾಡಾನೆಗಳ ಪಯಣ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 16:22 IST
Last Updated 13 ಜೂನ್ 2024, 16:22 IST

ಪುತ್ತೂರು: ಪುತ್ತೂರು ತಾಲ್ಲೂಕಿನ ಬೆಳ್ಳಿಪ್ಪಾಡಿ ಮತ್ತು ಶಾಂತಿಗೋಡು ಗ್ರಾಮ ವ್ಯಾಪ್ತಿಯ ಕಠಾರ ರಕ್ಷಿತಾರಣ್ಯದಲ್ಲಿ ಬುಧವಾರ ಇದ್ದ ಕಾಡಾನೆಗಳು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಿಮದಾಗಿ ಶಾಂತಿಗೋಡು ಗ್ರಾಮ ವ್ಯಾಪ್ತಿಗೆ ತೆರಳಿವೆ.

ಕಠಾರ ರಕ್ಷಿತಾರಣ್ಯ ಪ್ರದೇಶದಲ್ಲಿದ್ದ ಕಾಡಾನೆಗಳನ್ನು ಬಂದ ಹಾದಿಯಲ್ಲೇ ರಕ್ಷಿತಾರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ಬುಧವಾರ ಸಂಜೆ ಆರಂಭಗೊಂಡಿತ್ತು. ಪುತ್ತೂರು ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಕುಶಾಲನಗರದ ದುಬಾರೆಯ ನುರಿತ ಆನೆ ಕಾರ್ಯಾಚರಣೆ ಸಿಬ್ಬಂದಿ, ಸುಬ್ರಹ್ಮಣ್ಯದ ನುರಿತ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪುತ್ತೂರು ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನು ಶಾಂತಿಗೋಡು ರಕ್ಷಿತಾರಣ್ಯದ ಕಡೆಗೆ ಓಡಿಸುವ ಕಾರ್ಯಾಚರಣೆಯನ್ನು ತಡರಾತ್ರಿ ವರೆಗೂ ನಡೆಸಿದ್ದರು. ಈ ವೇಳೆ ಕಾಡಾನೆಗಳು ಶಾಂತಿಗೋಡು ಕಡೆಗೆ ತೆರಳಿದ್ದವು.

ರಾತ್ರಿ ವೇಳೆ ಕಠಾರ ವ್ಯಾಪ್ತಿಯಿಂದ ಕುಮಾರಧಾರಾ ನದಿಗೆ ಸಂಪರ್ಕ ಕಲ್ಪಿಸುವ ಬೆದ್ರಾಳ ಹೊಳೆ ದಾಟಿ ಚಿಕ್ಕಮುಡ್ನೂರು ಗ್ರಾಮದ ಎಣಿಮೊಗರು ಧನ್ಯಕುಮಾರ್ ಜೈನ್ ಎಂಬುವರ ತೋಟಕ್ಕೆ ನುಗ್ಗಿದ್ದ ಕಾಡಾನೆಗಳು ಅಲ್ಲಿಂದ ಶಾಂತಿಗೋಡು ಗ್ರಾಮದ ಪಂಜಿಗದ ವಸಂತಕುಮಾರ್ ಸೇರಿದಂತೆ ಹಲವರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿದ್ದವು. ಪಂಜಿಗ ಪ್ರದೇಶದಲ್ಲಿ ಆನೆಗಳು ತೆರಳಿದ ಹೆಜ್ಜೆ ಗುರುತು ಗುರುವಾರ ಬೆಳಿಗ್ಗೆ ಕಂಡು ಬಂದಿದೆ.

ADVERTISEMENT

ಶಾಂತಿಗೋಡು ಗ್ರಾಮದ ಪಂಜಗ ಕಡೆಗೆ ಬಂದಿರುವ ಕಾಡಾನೆಗಳು ಅಲ್ಲಿನ ಕಾಡುಪ್ರದೇಶ ಸೇರಿಕೊಂಡಿರಬಹುದೆಂದು ಅಲ್ಲಿನ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಳ್ಳಿಪ್ಪಾಡಿ ಗ್ರಾಮದ ಕಡೆಗೆ ತೆರಳಿದ್ದ ಕಾಡಾನೆಗಳು ಮತ್ತೆ ಹಿಂತಿರುಗಿ ಶಾಂತಿಗೋಡು ಗ್ರಾಮಕ್ಕೆ ಬಂದಿರುವುದರಿಂದ ಹಾಗೂ ಎರಡು ಕಾಡಾನೆಗಳಿರುವುದು ಸ್ಪಷ್ಟವಾಗಿರುವುದರಿಂದ ಶಾಂತಿಗೋಡು ಗ್ರಾಮಸ್ಥರಲ್ಲಿನ ಆತಂಕ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.