ಮಂಗಳೂರು: ನಗರದಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ಮತ್ತೊಂದು ವಸತಿ ನಿಲಯ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಸ್ತಾವ ಸಲ್ಲಿಸಿದೆ.
ಇದಕ್ಕಾಗಿ ಎರಡು ಜಾಗಗಳನ್ನು ಇಲಾಖೆ ಗುರುತಿಸಿದೆ. ತಾಲ್ಲೂಕಿನ ಮೂಡುಶೆಡ್ಡೆಯಲ್ಲಿ ಇಲಾಖೆಗೆ ಸಂಬಂಧಿಸಿದ 1.5 ಎಕರೆ ನಿವೇಶನ ಇದ್ದು, ಅಲ್ಲಿ ಪ್ರಸ್ತುತ ಹಳೆಯ ಸ್ವೀಕಾರ ಕೇಂದ್ರದ ಕಟ್ಟಡ ಇದೆ. ಅಲ್ಲಿ ಜಾಗದ ಲಭ್ಯತೆ ಇದ್ದು, ಹೊಸ ವಸತಿ ನಿಲಯ ನಿರ್ಮಿಸಬಹುದಾಗಿದೆ. ಇಲ್ಲವಾದಲ್ಲಿ, ರೊಸಾರಿಯೊ
ಚರ್ಚ್ ರಸ್ತೆಯಲ್ಲಿ ಕಂದಾಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಬಂದರು ಇಲಾಖೆ ಸಿಬ್ಬಂದಿ ವಸತಿಗೃಹಗಳ ಪಕ್ಕದಲ್ಲಿ ಸರ್ಕಾರಿ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಇದೆ. ಇದರ ಮೇಲ್ಭಾಗದಲ್ಲಿ ಇನ್ನೊಂದು ಅಂತಸ್ತು ನಿರ್ಮಿಸಿ, ಅಲ್ಲಿಯೂ ಅವಕಾಶ ಕಲ್ಪಿಸಬಹುದಾಗಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.
ಈ ಕಟ್ಟಡಕ್ಕೆ ಪೇಂಟಿಂಗ್, ಮಳೆಗಾಲದಲ್ಲಿ ಸೋರಿಕೆ ತಡೆಗಟ್ಟಲು ದುರಸ್ತಿ ಅಗತ್ಯವಿದೆ. ಇದಕ್ಕೆ ಅಂದಾಜು ₹40 ಲಕ್ಷ ವೆಚ್ಚಬೇಕಾಗಬಹುದು ಎಂದೂ ತಿಳಿಸಲಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಸ್ತುತ ಕೊಂಚಾಡಿ ಮತ್ತು ಕಂಕನಾಡಿಯಲ್ಲಿ ತಲಾ ಒಂದು ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಇವೆ. ಪ್ರತಿ ವಸತಿ ನಿಲಯದ ಸಾಮರ್ಥ್ಯ ತಲಾ 50 ಆಗಿದ್ದು, ಅವುಗಳಲ್ಲಿ 10 ಸೀಟ್‌ಗಳು ಪರಿಶಿಷ್ಟರು, ಅಲ್ಪಸಂಖ್ಯಾತರಿಗೆ ಮೀಸಲಿದ್ದು, ಬಿಪಿಎಲ್ ಕಾರ್ಡ್ ಹೊಂದಿದವರಾಗಿದ್ದರೆ ಅಂತಹವರಿಗೆ ಎಲ್ಲ ಸೌಲಭ್ಯಗಳು ಉಚಿತವಾಗಿ ದೊರೆಯುತ್ತವೆ. ಮೀಸಲಿರುವ ಸೀಟ್‌ಗಳು ಎಲ್ಲವೂ ಭರ್ತಿಯಾಗಿವೆ. ಸಾಮಾನ್ಯ ಸೀಟ್‌ಗಳ ಕೋಟಾದಲ್ಲಿ ಕೊಂಚಾಡಿ ಹಾಸ್ಟೆಲ್‌ನಲ್ಲಿ 34 ಮಹಿಳೆಯರು ಇದ್ದರೆ, ಕಂಕನಾಡಿಯ ಹಾಸ್ಟೆಲ್‌ನಲ್ಲಿ 27 ಉದ್ಯೋಗಸ್ಥ ಮಹಿಳೆಯರು ಇದ್ದಾರೆ ಎಂದು ಅವರು ತಿಳಿಸಿದರು.
₹50 ಸಾವಿರ ಆದಾಯ ಮಿತಿಯೊಳಗಿನ ಮಹಿಳೆಯರಿಗೆ ಮಾತ್ರ ಹಾಸ್ಟೆಲ್‌ನಲ್ಲಿ ವಸತಿ ಪಡೆಯಲು ಅವಕಾಶ ಇದೆ. ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು, ನರ್ಸ್‌ಗಳು, ಬಟ್ಟೆ ಅಂಗಡಿಯಲ್ಲಿ ದುಡಿಯುವರು ಹಾಸ್ಟೆಲ್ ಅನ್ನು ಆಶ್ರಯಿಸಿದ್ದಾರೆ. ಅವರಿಗೆ ತಿಂಗಳಿಗೆ ಆಹಾರದ ವೆಚ್ಚ ₹1,500, ವಸತಿ ಶುಲ್ಕ ₹1,200 ಇದ್ದು, ಕಡಿಮೆ ಬಾಡಿಗೆ ಇರುವ ಕಾರಣ ಹೆಚ್ಚಿನ ಸಂದರ್ಭಗಳಲ್ಲಿ ಹಾಸ್ಟೆಲ್‌ಗಳು ಭರ್ತಿಯಾಗಿರುತ್ತವೆ. ಕೊಂಚಾಡಿಯಲ್ಲಿರುವ ಹಾಸ್ಟೆಲ್‌ಗೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಒಬ್ಬ ಮಹಿಳಾ ಅಧಿಕಾರಿ.
‘ವಸತಿ ನಿಲಯದಿಂದ ಸಂಗ್ರಹವಾಗುವ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದ್ದ ಕಾರಣಕ್ಕೆ ಬಾಡಿಗೆ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಆದರೆ, ವಸತಿ ನಿಲಯದ ವಾಸಿಗಳು, ಆಹಾರ ವೆಚ್ಚ ಹೆಚ್ಚಿಸಿದರೆ ತಮಗೆ ಭರಿಸಲು ಸಾಧ್ಯವಾಗದು ಎಂದು ಹೇಳಿದ್ದರಿಂದ ಹಿಂದಿನಷ್ಟೇ ಮೊತ್ತವನ್ನು ಉಳಿಸಲಾಗಿದೆ. ಆಹಾರ ಮೆನುದಲ್ಲಿ ಬದಲಾವಣೆ ಮಾಡಿದ್ದು, ಸಂಜೆಯ ಸ್ನ್ಯಾಕ್ಸ್ ಕಡಿತಗೊಳಿಸಲಾಗಿದೆ. ಹಿಂದೆ, ಚಿಕನ್, ಮೀನು, ಮೊಟ್ಟೆ ಎಲ್ಲವನ್ನೂ ನೀಡಲಾಗುತ್ತಿತ್ತು. ಈಗ ನಿಗದಿತ ವೆಚ್ಚದಲ್ಲೇ ಆಹಾರ ತಯಾರಿಕೆ ಮಾಡುವ ಸಂಬಂಧ ಸಮಿತಿ ರಚಿಸಲಾಗಿದೆ. ಹೀಗಾಗಿ, ಇಲಾಖೆಗೆ ಈಗ ವಸತಿ ನಿಲಯದ ಹೊರೆ ತಪ್ಪಿದೆ’ ಎಂದು ಅವರು ಹೇಳಿದರು.
‘ಮೂಡುಶೆಡ್ಡೆಯು ಮಂಗಳೂರು ನಗರದಿಂದ 10 ಕಿ.ಮೀ ದೂರದಲ್ಲಿದ್ದು, ಬಸ್ ವ್ಯವಸ್ಥೆ ಇದೆ. ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ನಿರ್ಮಾಣಕ್ಕೆ ಈ ಜಾಗ ಯೋಗ್ಯವಾಗಿದೆ. ಪ್ರಸ್ತುತ ನಡೆಸುತ್ತಿರುವ ಎರಡು ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿದ್ದು, ಸರ್ಕಾರ ಇದರ ಬಾಡಿಗೆ ವೆಚ್ಚ ನೀಡುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.