ಪುತ್ತೂರು: ಕರ್ನಾಟಕ ಗಡಿಯಲ್ಲಿರುವ ಕೇರಳದ ಮಿಂಚಿಪದವು ಎಂಬಲ್ಲಿನ ಪಾಳು ಬಾವಿಯಲ್ಲಿ ಎಂಡೋಸಲ್ಫಾನ್ ಡಬ್ಬಗಳನ್ನು ಹೂತು ಹಾಕಿರುವ ಘಟನೆಗೆ ಸಂಬಂಧಿಸಿ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೇರಳ ಗೇರು ಪ್ಲಾಂಟೇಷನ್ ಕಾರ್ಪೊರೇಷನ್ ಗೋದಾಮಿನಲ್ಲಿ ಇರಿಸಿದ್ದ ಎಂಡೋಸಲ್ಫಾನ್ ಡಬ್ಬಗಳನ್ನು ಎಂಡೋಸಲ್ಫಾನ್ ನಿಷೇಧದ ಬಳಿಕ ಗೇರು ಪ್ಲಾಂಟೇಷನ್ ಅಧಿಕಾರಿಗಳು ಪಾಳು ಬಾವಿಯಲ್ಲಿ ಹೂತು ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಪರಿಸರ ಹೋರಾಟಗಾರರು ದೂರು ನೀಡಿದ್ದರು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ನೋಟಿಸ್ ಜಾರಿಗೊಳಿಸಿದ್ದರಿಂದ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿ ಜೆ. ಚಂದ್ರಬಾಬು ನೇತೃತ್ವದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿರು.
ಹಸಿರು ನ್ಯಾಯ ಮಂಡಳಿಯ ಪ್ರಯೋಗಾಲಯ ಸಹಾಯಕ ನಿಖಿಲ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ರವಿ ಡಿ.ಆರ್., ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಅಧೀಕ್ಷಕ ಆದರ್ಶ ಟಿ.ವಿ. ತಂಡದಲ್ಲಿದ್ದರು.
ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಪುತ್ತೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರಿಂದ ಎಂಡೋ ಸಂತ್ರಸ್ತರ ಮಾಹಿತಿ ಸಂಗ್ರಹಿಸಿದರು. ಬಳಿಕ ಮಿಂಚಿಪದವು ಪ್ರದೇಶಕ್ಕೆ ತೆರಳಿದರು. ಬಳಿಕ ಕೇರಳ ಪ್ಲಾಂಟೇಷನ್ ಕಾರ್ಪೊರೇಷನ್ ಕಚೇರಿಗೆ ತೆರಳಿ ಮಾಹಿತಿ ಪಡೆದುಕೊಂಡ ಅಧಿಕಾರಿಗಳು, ಗೋದಾಮಿನಲ್ಲಿದ್ದ ಎಂಡೋಸಲ್ಫಾನ್ ಡಬ್ಬಗಳಿಂದ ಮಾದರಿ ಸಂಗ್ರಹಿಸಿದರು.
ಮಿಂಚಿಪದವಿನ ಪಾಳು ಬಾವಿಯನ್ನು ಪರಿಶೀಲಿಸಿದ ಅಧಿಕಾರಿಗಳು ಬಾವಿ ಆಳದಿಂದ ಮಣ್ಣು ಹಾಗೂ ಸಮೀಪದ ಕೆರೆಗಳ ನೀರನ್ನು ಪರೀಕ್ಷಾರ್ಥವಾಗಿ ಸಂಗ್ರಹಿಸಿದರು. ಮಿಂಚಿಪದವು ಸಮೀಪದದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಎಂಡೋಸಲ್ಫಾನ್ ಹೋರಾಟಗಾರರಿಂದಲೂ ಮಾಹಿತಿ ಸಂಗ್ರಹಿಸಿದರು.
ಕಾಟಾಚಾರದ ಪರಿಶೀಲನೆ– ಆರೋಪ: ಪಾಳು ಬಾವಿಯಲ್ಲಿ ಎಂಡೋಸಲ್ಫಾನ್ ಹೂತು ಹಾಕಿರುವುದರಿಂದ ಪಕ್ಕದ ಜಲಮೂಲಗಳಿಗೂ ವಿಷಾಂಶ ಸೇರಿರುವ ಆತಂಕ ವ್ಯಕ್ತಪಡಿಸಿದ ಅಲ್ಲಿನ ನಿವಾಸಿಗಳು ಪ್ರತಿ ಬಾರಿಯೂ ಈ ಪ್ರದೇಶದಲ್ಲಿ ಕಾಟಾಚಾರದ ಪರಿಶೀಲನೆ ನಡೆಸಲಾಗುತ್ತಿದೆ. 70 ಅಡಿ ಆಳದ ಬಾವಿಯ ಮಣ್ಣಿನ ಮಾದರಿ ಸಂಗ್ರಹಿಸುವ ಬದಲು ಬಾವಿಯ ಮೇಲಿನ ಮಣ್ಣು ಪರಿಶೀಲನೆ ಮಾಡಲಾಗುತ್ತಿದೆ. ಕೇರಳ ಗೇರು ಪ್ಲಾಂಟೇಷನ್ ಅಧಿಕಾರಿಗಳು ತಂಡಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮಣ್ಣು ಪರಿಶೀಲಿಸುವುದಾದರೆ 70 ಅಡಿ ಆಳದಿಂದ ಸಂಗ್ರಹಿಸುವಂತೆ ಹಾಗೂ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದರು. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಸ್ಥಳೀಯರು ಸಮಾಧಾನಗೊಂಡರು.
ಎಂಡೋಸಲ್ಫಾನ್ ಕೀಟನಾಶಕವನ್ನು ಬೇರೆಡೆ ನಾಶ ಮಾಡಲಾಗಿದೆ ಎಂದು ಕೇರಳದ ಗೇರು ಪ್ಲಾಂಟೇಷನ್ ಅಧಿಕಾರಿಗಳು ಮಾಹಿತಿ ನೀಡಿದಾಗ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಯಿತು. ಗೇರು ಪ್ಲಾಂಟೇಷನ್‌ಗೆ ಸೇರಿದ ಗೋದಾಮು ಪರಿಶೀಲನೆಯ ವೇಳೆ ಅಲ್ಲಿ ಎಂಡೋಸಲ್ಫಾನ್‌ನ 21 ಬ್ಯಾರಲ್ ಪತ್ತೆಯಾಯಿತು.
ರವೀಂದ್ರ ಶ್ಯಾನುಭಾಗ್ ದೂರು: ಎಂಡೋಸಲ್ಫಾನ್‌ನಿಂದ ಆದ ಸಮಸ್ಯೆ ಅಧ್ಯಯನ ನಡೆಸಿದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್ ಅವರು ಈ ಬಗ್ಗೆ ರಾಷ್ಟ್ರೀಯ ಹಸಿರು ಪೀಠಕ್ಕೆ ದೂರು ನೀಡಿದ್ದರು. ಈ ದೂರಿನಂತೆ ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ಹಸಿರು ಪೀಠ ನಿರ್ದೇಶಿಸಿ ಕರ್ನಾಟಕ, ಕೇರಳ ಸರ್ಕಾರ ಮತ್ತು ಪರಿಸರ ಇಲಾಖೆಗೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ಜಾರಿಗೊಂಡ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀದ್ದಾರೆ.
ಎಂಡೋಸಲ್ಫಾನ್‌ನ ವಿಷಕಾರಕ ಗುಣಗಳಿಂದಾಗಿ ಕೇರಳ ಮತ್ತು ಕರ್ನಾಟಕ ರಾಜ್ಯದ ಸುಮಾರು 12 ಸಾವಿರ ಮಕ್ಕಳು ಅಂಗವಿಕಲರಾಗಿದ್ದರು. ಹೀಗಾಗಿ 2021ರ ಮೇ 13ರಂದು ಭಾರತದಲ್ಲಿ ಎಂಡೋಸಲ್ಫಾನ್ ಮಾರಾಟ ಮತ್ತು ಉಪಯೋಗ ನಿಷೇಧಿಸಲಾಗಿತ್ತು. ಆದರೆ, ಆ ಬಳಿಕ ಉಳಿದಿದ್ದ ಎಂಡೋಸಲ್ಫಾನ್ ಅನ್ನು ಮಿಂಚಿಪದವು ಗುಡ್ಡದ ಗೇರು ತೋಪಿನ ಪಾಳು ಬಾವಿಯಲ್ಲಿ ಹೂತು ಹಾಕಲಾಗಿತ್ತು. ಇದರಿಂದಾಗಿ ಕೆಳ ಭಾಗದಲ್ಲಿನ ಬಾವಿ, ಕೆರೆಗಳಲ್ಲಿ ಎಂಡೋಸಲ್ಫಾನ್ ಅಂಶಗಳು ಕಾಣಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.