ADVERTISEMENT

ಸ್ವ ಗ್ರಾಮದಲ್ಲೇ ಇದ್ದರೂ ತಲೆಮರೆಸಿಕೊಂಡಿದ್ದಂತಿದ್ದ

ಗೌರಿ ಲಂಕೇಶ್ ಹತ್ಯೆ ಆರೋಪಿ ಮೋಹನ್ ನಾಯಕ್

ಲೋಕೇಶ್‌ ಪೆರ್ಲಂಪಾಡಿ
Published 21 ಜುಲೈ 2018, 17:13 IST
Last Updated 21 ಜುಲೈ 2018, 17:13 IST
ಮೋಹನ್ ನಾಯಕ್
ಮೋಹನ್ ನಾಯಕ್   

ಸುಳ್ಯ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಬಾಡಿಗೆ ಮನೆ ಮತ್ತು ಗನ್ ಒದಗಿಸಿ ಕೊಟ್ಟ ಆರೋಪದ ಮೇರೆಗೆ ಬಂಧಿತನಾಗಿರುವ ಮೋಹನ್ ನಾಯಕ್ ಊರಲ್ಲಿ ಇದ್ದರೂ ಇಲ್ಲದಂತೆ ತಲೆ ಮರೆಸಿಕೊಂಡಿರುತ್ತಿದ್ದ.

ಆರೋಪಿ ಸುಳ್ಯ ತಾಲ್ಲೂಕಿನ ಸಂಪಾಜೆಯ ಮುಂಡಡ್ಕ ಬಳಿಯ ನಿವಾಸಿ ಮೋಹನ್ ನಾಯಕ್ ಎಂಬವನನ್ನು ಎಸ್‌ಐಟಿ ತಂಡ ಬಂಧಿಸಿ ಬೆಂಗಳೂರು ಕೋರ್ಟ್‌ಗೆ ಹಾಜರುಪಡಿಸಿದಾಗ ಆರೋಪಿಯನ್ನು 14 ದಿನಗಳ ಎಸ್‌ಐಟಿ ಕಸ್ಟಡಿಗೆ ಒಪ್ಪಿಸಲಾಗಿದೆ.

ಶಸ್ತ್ರಾಸ್ತ್ರ ವ್ಯಾಪಾರಿ: ಮಡಿಕೇರಿಯಲ್ಲಿ ಶಸ್ತ್ರಾಸ್ತ್ರ ವ್ಯಾಪಾರಿಯಾಗಿರುವ ಮೋಹನ್ ನಾಯಕ್ ಮೂಲತಃ ಕೃಷಿಕ. ಅವನ ತಂದೆ ವಾಸು ನಾಯಕ್ ಅವರು ಪುತ್ತೂರುವಿನಲ್ಲಿ ಹೊಗೆಸೊಪ್ಪು ವ್ಯಾಪಾರಿಯಾಗಿ ವಿವಿಧ ಕಡೆ ವ್ಯಾಪಾರ ನಡೆಸಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡವರು. ಅವರು ಪುತ್ತೂರಿನಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದಾರೆ. ಆದರೆ ಮೋಹನ್ ನಾಯಕ್ ತನ್ನ ಪತ್ನಿ, ಮಕ್ಕಳೊಂದಿಗೆ ಸಂಪಾಜೆಯಲ್ಲಿಯೇ ವಾಸವಾಗಿದ್ದಾನೆ. ಮಗ ಮಡಿಕೇರಿಯಲ್ಲಿ ಪಿಯುಸಿ ಮತ್ತು ಕಿರಿಯ ಮಗಳು ಸಂಪಾಜೆಯಲ್ಲಿ 5ನೇ ತರಗತಿ ಓದುತ್ತಿದ್ದಾಳೆ. ಮೋಹನ್ ನಾಯಕ್‌ಗೆ ಸುಮಾರು 25 ಎಕರೆ ಜಮೀನು ಇದ್ದು, ಕೆಲಸದವರ ಮೂಲಕ ಕೃಷಿ ಮಾಡುತ್ತಿದ್ದಾನೆ.

ADVERTISEMENT

ಮೋಹನ್ ನಾಯಕ್ ಮನೆಗೆ ಹೋಗಬೇಕಾದರೆ ಸಂಪಾಜೆ ಮಾಣಿ-ಮೈಸೂರು ರಸ್ತೆಯಿಂದ ಎರಡು ಕಿ.ಮೀ. ಇದೆ. ಸಂಪಾಜೆಯಿಂದ ಒಂದು ಕಿ.ಮೀ.ಡಾಂಬರು ರಸ್ತೆಯಿದ್ದು, ನಂತರ ಒಂದು ಕಿ.ಮೀ. ತೀರಾ ಕಾಡುಗಳ ಮಧ್ಯೆ ಕಚ್ಚಾ ರಸ್ತೆ ಇದೆ. ಮನೆ ಹತ್ತಿರ 100 ಮೀಟರ್ ದೂರದಲ್ಲಿ ಮೊದಲ ಗೇಟ್ ಇದೆ. ಅನಂತರ 50 ಮೀಟರ್ ದೂರದಲ್ಲಿ ಮತ್ತೊಂದು ಗೇಟ್ ದಾಟಿ ಮನೆಗೆ ಹೋಗಬೇಕು. 2ನೇ ಗೇಟ್ ನಂತರ ಸುರಂಗದ ದಾರಿ ಮೂಲಕ ಮನೆ ಒಳಗೆ ಹೋಗಬೇಕು.

ಊರಲ್ಲಿ ಕಾಣುತ್ತಿರಲಿಲ್ಲ: ಮೋಹನ್ ನಾಯಕ್ ಮನೆಗೆ ಇತ್ತೀಚಿನ ಆನೇಕ ವರ್ಷಗಳಿಂದ ಯಾರಿಗೂ ಪ್ರವೇಶ ಇರುತ್ತಿರಲಿಲ್ಲ. ತೋಟದ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ಕೊಡಲಾಗಿತ್ತು. ಹೀಗಾಗಿ ಕೆಲಸದವರು ಕೂಡಾ ಅವರಷ್ಟಕ್ಕೆ ಬಂದು ಕೆಲಸ ಮಾಡಿ ಹೋಗುತ್ತಿದ್ದರೆನ್ನಲಾಗಿದೆ. ಆದರೆ ಅವನ ಮನೆಗೆ ಅನೇಕ ವರ್ಷಗಳಿಂದ ನಾನಾ ತರಹದ ಜನರು ಬೇರೆ ಬೇರೆ ಭಾಷೆ ಮಾತನಾಡುವವರು ಬಂದು ಹೋಗುತ್ತಿದ್ದರೆನ್ನಲಾಗಿದೆ. ಅಲ್ಲಿಗೆ ಅಪರಿಚಿತ ಊರಿನಿಂದ ಬರುತ್ತಿದ್ದವರು ಹಿಂದಿ, ಇಂಗ್ಲಿಷ್‌, ಇತರ ಬೇರೆ ಬೇರೆ ಭಾಷೆ ಮಾತನಾಡುತ್ತಿದ್ದರು ಎಂದು ಅಲ್ಲಿನ ಅಂಗಡಿಯವರು ಹೇಳುತ್ತಿದ್ದಾರೆ. ಪಂಚೆ ಧರಿಸಿ ಸುತ್ತಾಡುತ್ತಿದ್ದ ಮೋಹನ್ ನಾಯಕ್ ಊರಲ್ಲಿ ಇದ್ದರೂ ಇಲ್ಲದಂತಹ ರೀತಿಯಲ್ಲಿ ತನ್ನ ವಾಹನಗಳಲ್ಲಿ ಓಡಾಡುತ್ತಿದ್ದನಂತೆ. ಒಂದು ರೀತಿಯಲ್ಲಿ ತಲೆಮರೆಸಿಕೊಂಡವನಂತೆ ಊರಲ್ಲಿ ಇರುತ್ತಿದ್ದ.

ಕಳೆದ ಸುಮಾರು 15 ವರ್ಷದಿಂದ ಸನಾತನ ಸಂಸ್ಥೆಯ ಸಕ್ರಿಯ ಕಾರ್ಯಕರ್ತನಾಗಿದ್ದ. ಅನೇಕ ಕಡೆಗಳಲ್ಲಿ ಸಂಸ್ಥೆ ಬಗ್ಗೆ ಭಾಷಣ ಮಾಡುವುದು, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಮಾಡುತ್ತಿದ್ದ. ಅವನ ಮನೆಗೆ ಇತ್ತೀಚಿನ ಕೆಲ ದಿನಗಳಿಂದ ಆಗಾಗ ಕಾರುಗಳಲ್ಲಿ ಹೊರಗಿನಿಂದ ಜನ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಮೋಹನ್ ನಾಯಕ್ ಕುಶಾಲನಗರದಲ್ಲಿ ನಾಟಿ ವೈದ್ಯನಾಗಿ ಗುರುತಿಸಿಕೊಂಡಿದ್ದು ನಾಟಿ ಔಷಧಿ ಕೂಡ ನೀಡುತ್ತಿದ್ದ. ಸ್ಥಳೀಯರಲ್ಲಿ ಆತ ಪ್ರಸಿದ್ದ ನಾಟಿ ವೈದ್ಯ ಎನ್ನುವಂತೆ ಹೇಳಿಕೊಂಡು ತಿರುಗುತ್ತಿದ್ದ. ಹೊರಗಿನ ಜನರು ಬರುವಾಗ ಔಷಧಿಗಾಗಿ ಬರುತ್ತಿರಬಹುದು ಎಂದು ಸ್ಥಳೀಯರು ಭಾವಿಸಿದ್ದರು. ಹಿಂದಿನಿಂದಲೂ ಊರಲ್ಲಿ ಕಾಣಿಸಿಕೊಳ್ಳುವುದು ಈತ ವಿರಳ. ಆಗಾಗ ಬೆಂಗಳೂರಿಗೂ ಹೋಗುತ್ತಿದ್ದ ಮೋಹನ್ ನಾಯಕ್ ಗೌರಿ ಹತ್ಯೆ ಆರೋಪಿಗಳ ಜೊತೆ ಸಂಪರ್ಕ ಹೊಂದಿರುವ ವಿಚಾರ ಶುಕ್ರವಾರ ಬೆಳಿಗ್ಗಿನಿಂದ ಜನರ ಗಮನಕ್ಕೆ ಬಂತು ಎಂದು ಹೇಳಲಾಗುತ್ತಿದೆ.

ಕಾರು ನಂಬರ್‌ಗೆ ಮಣ್ಣು: ಕೆಲವು ದಿನಗಳಿಂದ ಎಸ್‌ಐಟಿ ತಂಡ ಈತನ ಚಲನವಲನಗಳ ಮೇಲೆ ಹದ್ದಿನ ಕಣ್ಣು ಇಟ್ಟಿತ್ತೆನ್ನಲಾಗಿದೆ. ಈ ವಿಷಯ ಆತನ ಗಮನಕ್ಕೆ ಬಂದಿರಬಹುದು ಎನ್ನುವ ನೆಲೆಯಲ್ಲಿ ಆತನ ತನ್ನ ಕಾರು ನಂಬರ್‌ಗೆ ಮಣ್ಣು ಮೆತ್ತಿಸಿಕೊಂಡು ನಂಬರ್ ಸ್ಪಷ್ಟ ಕಾಣದಂತೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಮೋಹನ್ ಬಂಧನ ಆಗುತ್ತಿದ್ದಂತೆ ಅಲ್ಲಿನ ಸ್ಥಳೀಯರು ಆಶ್ವರ್ಯ ಪಟ್ಟಿದ್ದರು. ಅವನ ಮನೆಯವರಿಗೂ ಗೊತ್ತಿರಲಿಲ್ಲ. ಅವರ ವಿಚಾರಿಸಿದಾಗ ನಮಗೆ ಏನೂ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ನಾಳೆ ಮಹಜರು ಸಾಧ್ಯತೆ:ಮೋಹನ್ ನಾಯಕ್‌ನನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ತಂಡ ಆತನ ಅಂಗಡಿ, ಮನೆ, ವ್ಯವಹಾರ ಇತ್ಯಾದಿಗಳ ಮಾಹಿತಿ ಸಂಗ್ರಹಿಸಿ ದಾಖಲೆ ಸಂಗ್ರಹಿಸಲು ಮುಂದಾಗಿದ್ದು, ಆತನನ್ನು ಮತ್ತೆ ಮನೆಗೆ ಕರೆತಂದು ಮಹಜರು ಮಾಡುವುದನ್ನು ಭಾನುವಾರ ಮಾಡಲಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.