ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಕ್ರಿಯೆ ನಡೆಸಿ, ಹೆಚ್ಚಿನ ದಕ್ಷಿಣೆ ನೀಡುವಂತೆ ಭಕ್ತರನ್ನು ಪೀಡಿಸಿದ ಆರೋಪದಲ್ಲಿ ಕ್ರಿಯಾಕರ್ತೃ ಒಬ್ಬರನ್ನು (ಅರ್ಚಕ) ಅಮಾನತುಗೊಳಿಸಲಾಗಿದೆ.
ಸರ್ಪ ಸಂಸ್ಕಾರ ಕ್ರಿಯಾ ಕರ್ತೃ ಶಿವಪ್ರಕಾಶ್ ಪಾಂಡೇಲು ಅಮಾನತುಗೊಂಡ ಅರ್ಚಕ.
ಆಂಧ್ರಪ್ರದೇಶದ ಭಕ್ತರ ತಂಡವೊಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಪ ಸಂಸ್ಕಾರ ಸೇವೆಗೆ ಬಂದಿತ್ತು. ಸೇವೆ ಮುಗಿಸಿದ ನಂತರ ಸೇವಾರ್ಥಿಗಳು ಅರ್ಚಕರಿಗೆ ದಕ್ಷಿಣೆ ನೀಡಿದ್ದಾರೆ. ಈ ವೇಳೆ ದಕ್ಷಿಣೆ ಕಡಿಮೆ ಕೊಟ್ಟಿದ್ದಾರೆ ಎಂದು ಸಿಟ್ಟಿಗೆದ್ದ ಅರ್ಚಕ, ದಕ್ಷಿಣೆ ತಟ್ಟೆಯನ್ನು ದೂರ ತಳ್ಳಿದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಸೇವಾರ್ಥಿಗಳು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರು.
‘ಸರ್ಪ ಸಂಸ್ಕಾರ ಕ್ರಿಯಾಕರ್ತೃ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿದ್ದರೂ, ದೇವಸ್ಥಾನದ ವತಿಯಿಂದ ಅವರಿಗೆ ವೇತನ ಪಾವತಿಸಲಾಗುತ್ತದೆ. ದಕ್ಷಿಣೆ ರೂಪದಲ್ಲಿ ಸೇವಾರ್ಥಿಗಳೂ ಹಣ ನೀಡುತ್ತಾರೆ. ಆದರೆ, ದಕ್ಷಿಣೆ ಮೊತ್ತವನ್ನು ಇಂತಿಷ್ಟೇ ನೀಡಬೇಕು, ಪ್ರತ್ಯೇಕವಾಗಿ ತಾಂಬೂಲ ಕಾಣಿಕೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳು ಅರ್ಚಕರಿಂದ ಕೇಳಿಬರುತ್ತಿದೆ. ಹೆಚ್ಚಿನ ಹಣಕ್ಕಾಗಿ ಪೀಡಿಸಲಾಗುತ್ತಿದೆ’ ಎಂದು ಭಕ್ತರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.