ADVERTISEMENT

ತೀವ್ರ ನಿಗಾ ಬ್ಲಾಕ್‌, ಐಪಿಎಚ್‌ಗೆ ಆದ್ಯತೆ

ವೆನ್ಲಾಕ್‌, ಲೇಡಿಗೋಷನ್ ಆಸ್ಪತ್ರೆಗಳಿಗೆ ಬೇಟಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:23 IST
Last Updated 17 ನವೆಂಬರ್ 2024, 8:23 IST
ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು
ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು   

ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ಪ್ರತ್ಯೇಕ ಬ್ಲಾಕ್‌ ಮತ್ತು ಸಮಗ್ರ ಸಾರ್ವಜನಿಕ ಆರೋಗ್ಯ (ಐಪಿಎಚ್‌) ಪ್ರಯೋಗಾಲಯ ತೆರೆಯಲು ಆದ್ಯತೆ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಗಳಿಗೆ ಶನಿವಾರ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವೆನ್ಲಾಕ್ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ಸಿದ್ಧಪಡಿಸಬೇಕಾಗಿದ್ದು ತೀವ್ರ ನಿಗಾ ಘಟಕದ ಬ್ಲಾಕ್‌ಗೆ ₹ 24 ಕೋಟಿ ಮತ್ತು ಐಪಿಎಚ್‌ ಪ್ರಯೋಗಾಲಯಕ್ಕೆ ₹ 1 ಕೋಟಿ ವಿನಿಯೋಗಿಸಲಾಗುವುದು. ಪ್ರಯೋಗಾಲಯದಲ್ಲಿ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಸಿಗಲಿವೆ. ಟ್ರಾಮಾ ಕೇಂದ್ರದಲ್ಲಿ ಇದನ್ನು ಸ್ಥಾಪಿಸಲಾಗುವುದು ಎಂದರು.  

ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಗಳ ಹೊಸ ಬ್ಲಾಕ್ ನಿರ್ಮಿಸಬೇಕಾಗಿದೆ. 2017ರಲ್ಲಿ ಕೆಎಂಸಿ ಆಸ್ಪತ್ರೆಯ ಜೊತೆ ಈ ಕುರಿತು ಒಪ್ಪಂದ ಆಗಿದ್ದು ಅವರ ಜೊತೆ ಚರ್ಚಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಶವಾಗಾರಕ್ಕೂ ಶವ ಪರೀಕ್ಷೆಗೂ ಹೊಸ ಕಟ್ಟಡ ನಿರ್ಮಿಸಬೇಕಾಗಿದ್ದು ಅರೆವೈದ್ಯಕೀಯ ಕಾಲೇಜು, ಅಡುಗೆ ಮನೆ ಮತ್ತು ಎರಡು ಕಟ್ಟಡಗಳ ನಡುವೆ ಸೇತುವೆ ನಿರ್ಮಿಸುವುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು.

ADVERTISEMENT

ಆಸ್ಪತ್ರೆಯ ಒಟ್ಟಾರೆ ಅಭಿವೃದ್ಧಿಗೆ ಒಟ್ಟು ₹ 10 ಕೋಟಿ ವೆಚ್ಚ ತಗಲುವ ಅಂದಾಜು ಇದೆ. ಇದಕ್ಕಾಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಗಳನ್ನು ಬಳಸಬೇಕಾಗಿದೆ. ಉಳಿದ ವೆಚ್ಚವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭರಿಸಲಿದೆ. ಮುಂದಿನ ತಿಂಗಳು ಅಥವಾ ಜನವರಿಯಲ್ಲಿ ಆದ್ಯತೆ ಮೇಲೆ ಕೈಗೊಳ್ಳಬೇಕಾಗಿರುವ ಯೋಜನೆಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಅಡ್ಡೂರು ಪೊಳಲಿ ತಾತ್ಕಾಲಿಕ ಸೇತುವೆ

ಅಡ್ಡೂರು–ಪೊಳಲಿ ಮತ್ತು ಉಳಾಯಿಬೆಟ್ಟು ಸೇತುವೆಗಳನ್ನು ಬಲಪಡಿಸಲಾಗುವುದು ಎಂದು ತಿಳಿಸಿದ ದಿನೇಶ್ ಗುಂಡೂರಾವ್‌ ಸದ್ಯ ತಾತ್ಕಾಲಿಕ ಸೇತುವೆ ನಿರ್ಮಿಸಲು ನಿರ್ಧರಿಸಲಾಗಿದೆ. ಪೊಳಲಿ ಸೇತುವೆ ಅಭಿವೃದ್ಧಿಗೆ ₹ 6.10 ಕೋಟಿ ಮತ್ತು ಉಳಾಯಿಬೆಟ್ಟು ಸೇತುವೆಗೆ ₹ 5 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಎರಡು ಸೇತುವೆಗಳ ಅಭಿವೃದ್ಧಿಗೆ ಸಂಬಂಧಿಸಿ ಲೋಕೋಪಯೋಗಿ ಇಲಾಖೆ ಸಚಿವರ ಜೊತೆ ಮಾತನಾಡಿದ್ದು ತುರ್ತಾಗಿ ಪರಿಗಣಿಸಬೇಕಾಗಿದೆ ಎಂದು ಕೋರಲಾಗಿದೆ. ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕಿದ ಕೂಡಲೇ ಕಿರು ಟೆಂಡರ್ ಕರೆಯಲಾಗುವುದು. ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸುವ ಗುರಿ ನೀಡಲಾಗುವುದು. ಅಡ್ಡೂರು–ಪೊಳಲಿ ಸೇತುವೆಯ ಜಾಗದಲ್ಲಿ ಹೊಸ ಸೇತುವೆ ನಿರ್ಮಿಸಲು ₹ 50 ಕೋಟಿ ಬೇಕಾಗಬಹುದು. ಅದಕ್ಕೂ ಯೋಜನೆ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದರು.                                                                                                                     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.