ಮಂಗಳೂರು: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ರೈಲು ರದ್ದಾಗಿದ್ದರಿಂದ ಮುಂಗಡ ಟಿಕೆಟ್ ಕಾದಿರಿಸಿದ್ದ ಪ್ರಯಾಣಿಕರು, ಹಣ ಮರುಪಾವತಿ ಮಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು, ಇಂತಹ ಪ್ರಯಾಣಿಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.
ರೈಲ್ವೆ ಇಲಾಖೆಯಿಂದ ನಿಗದಿತ ದಿನಗಳಂದು ರೈಲು ನಿಲ್ದಾಣದಲ್ಲಿ ಹಾಗೂ ಆನ್‌ಲೈನ್ ಮೂಲಕ ಹಣ ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದೆ. ಕೆಲ ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ಹಣ ವಾಪಸ್ ಪಡೆಯುತ್ತಿದ್ದು, ಇನ್ನೂ ಕೆಲವರು ಆನ್‌ಲೈನ್ ಮೂಲಕ ಮರು ಪಾವತಿ ಮಾಡಿಕೊಳ್ಳುತ್ತಿದ್ದಾರೆ.
ಇದೀಗ ಹಣ ಮರುಪಾವತಿಯನ್ನೇ ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುತ್ತಿರುವ ವಂಚಕರು, ರೈಲು ಪ್ರಯಾಣಿಕರಿಗೆ ಕರೆ ಮಾಡಿ, ಬ್ಯಾಂಕ್ ಖಾತೆ, ಡಿಬಿಟ್, ಕ್ರೆಡಿಟ್ ಕಾರ್ಡ್ ಸಂಖ್ಯೆ, ಸಿಸಿವಿ ಸಂಖ್ಯೆ, ಒಟಿಪಿ, ಎಟಿಎಂ ಪಿನ್ ಇತ್ಯಾದಿಗಳನ್ನು ಪಡೆಯುತ್ತಿದ್ದಾರೆ. ಹಣ ವಾಪಸ್ ಬಂದರೆ ಸಾಕು ಎನ್ನುವ ಪ್ರಯಾಣಿಕರು ಇಂಥವರ ಬಲೆಗೆ ಸುಲಭವಾಗಿ ಬೀಳುತ್ತಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ದಕ್ಷಿಣ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ. ಗುಗಣೇಶನ್, ರೈಲ್ವೆ ಇಲಾಖೆಯು ಪ್ರಯಾಣಿಕರ ಬ್ಯಾಂಕ್ ಖಾತೆ, ಮತ್ತಿತರ ವಿವರಗಳನ್ನು ಕೇಳುವುದಿಲ್ಲ. ಹಣ ಮರುಪಾವತಿ ಹೆಸರಿನಲ್ಲಿ ಯಾರಾದರೂ ಕರೆ ಮಾಡಿದರೆ, ಅಂಥವರ ಬಲೆಗೆ ಬೀಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಐಆರ್‌ಸಿಟಿಸಿ ವೆಬ್‌ಸೈಟ್‌ನಿಂದ ರೈಲ್ವೆ ಮುಂಗಡ ಟಿಕೆಟ್ ಕಾದಿರಿಸಿದ ಪ್ರಯಾಣಿಕರಿಗೆ, ಅದೇ ವೆಬ್‌ಸೈಟ್ ಮೂಲಕ ನೇರವಾಗಿ ಅವರು ಹಣ ಪಾವತಿಸಿದ ಖಾತೆಗೆ ಮರಳಿ ಹಣ ಜಮಾ ಮಾಡಲಾಗುತ್ತದೆ. ಅಲ್ಲದೇ ರೈಲ್ವೆ ನಿಲ್ದಾಣಗಳಲ್ಲಿಯೇ ಟಿಕೆಟ್‌ಗಳನ್ನು ನೀಡುವ ಮೂಲಕ ಹಣ ವಾಪಸ್ ಪಡೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ರೀತಿಯ ಯಾವುದೇ ಕರೆಗಳು ಬಂದಲ್ಲಿ, ರೈಲ್ವೆ ಸಹಾಯವಾಣಿ ಸಂಖ್ಯೆ 138 ಗೆ ಕರೆ ಮಾಡಿ ತಿಳಿಸಬಹುದು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.