ಉಳ್ಳಾಲ: ಕುತ್ತಾರು ಕೊರಗಜ್ಜ ದೈವದ ಭಕ್ತರ ಹೆಸರಿನಲ್ಲಿ ‘ಡಿವೋಟಿಸ್ ಆಫ್ ಕುತ್ತಾರು ಕೊರಗಜ್ಜ’ ನಕಲಿ ಫೇಸ್‌ಬುಕ್ ಖಾತೆ ತೆರೆದು ಹಣ ಸಂಗ್ರಹಿಸಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕುತ್ತಾರು ಕೊರಗಜ್ಜ ದೈವದ ಆದಿ ಸ್ಥಳಗಳ ಆಡಳಿತ ಮಂಡಳಿಯು ಸೆನ್ ಠಾಣೆಗೆ ದೂರು ನೀಡಿದೆ.
ಕೊರಗಜ್ಜನ ಆಡಳಿತ ಮಂಡಳಿಯು ಯಾವುದೇ ಉದ್ದೇಶಕ್ಕಾಗಿ ಆನ್‌ಲೈನ್ ಮುಖಾಂತರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಿಲ್ಲ. ಕೊರಗಜ್ಜ ದೈವದ ಮೇಲೆ ಸಾರ್ವಜನಿಕರಿಗೆ ಇರುವ ಭಕ್ತಿಯನ್ನೇ ಪ್ರಧಾನವಾಗಿರಿಸಿಕೊಂಡು ‘ಡಿವೋಟಿಸ್ ಆಫ್ ಕುತ್ತಾರು ಕೊರಗಜ್ಜ’ ಎಂಬ ಫೇಸ್‌ಬುಕ್ ಖಾತೆಯಲ್ಲಿ ದೇಣಿಗೆ ಸಂಗ್ರಹಿಸಿ, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ವಿಷಾದದ ಸಂಗತಿ. ಇದು ಕಾನೂನುಬಾಹಿರವಾಗಿದೆ. ಕ್ಷೇತ್ರದಲ್ಲಿ ಆಡಳಿತ ಮಂಡಳಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ಪ್ರಕಟಣೆ ಬಂದಲ್ಲಿ ಅದಕ್ಕೆ ಭಕ್ತರು ಪ್ರತಿಕ್ರಿಯಿಸಬಾರದು ಎಂದು ಕ್ಷೇತ್ರದ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.
ತಪ್ಪು ಮಾಹಿತಿ ನೀಡಿ ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸ ಮಾಡುವುದರಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. ಕ್ಷೇತ್ರದಲ್ಲಿ ನಡೆಯುವಂತಹ ಎಲ್ಲ ರೀತಿಯ ಸೇವೆಗೆ ಭಕ್ತರಿಗೆ ಆಡಳಿತ ಮಂಡಳಿಯಿಂದ ಕಡ್ಡಾಯವಾಗಿ ರಶೀದಿಯನ್ನು ನೀಡಲಾಗುತ್ತದೆ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಮಾಹಿತಿಯನ್ನು ನಂಬಬಾರದು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.