ಮಂಗಳೂರು: ಕಾದಂಬರಿಗಳ ಮೂಲಕ ಪ್ರಸಿದ್ಧರಾಗಿದ್ದ, ಸಾಹಿತ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳ ಕುರಿತ ಲೇಖಕ, ನಿವೃತ್ತ ಪ್ರಾಧ್ಯಾಪಕ ಕೆ.ಟಿ.ಗಟ್ಟಿ (86) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಅವರಿಗೆ ಪತ್ನಿ, ನಿವೃತ್ತ ಶಿಕ್ಷಕಿ ಯಶೋದಾ, ಪುತ್ರ ನಿಟ್ಟೆ ವಿವಿಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕ ಸತ್ಯಜಿತ್, ಪುತ್ರಿಯರಾದ ಅಮೆರಿಕದಲ್ಲಿ ಪರಿಸರ ವಿಜ್ಞಾನಿಯಾಗಿರುವ ಪ್ರಿಯದರ್ಶಿನಿ, ಆಸ್ಟ್ರಿಯಾದಲ್ಲಿ ಆಂಥ್ರಾಪಾಲಜಿಸ್ಟ್ ಆಗಿರುವ ಚಿತ್ ಪ್ರಭಾ ಇದ್ದಾರೆ.
ಕಾಸರಗೋಡು ಸಮೀಪದ ರಾಮದಾಸನಗರದಲ್ಲಿ 1938ರ ಜುಲೈ 22 ರಂದು ಜನಿಸಿದ ಕೆ.ಟಿ.ಗಟ್ಟಿ ಅವರು ಈಚೆಗೆ ದಕ್ಷಿಣ ಕನ್ನಡದಲ್ಲಿ ನೆಲೆಸಿದ್ದರು. ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಕೇರಳದಲ್ಲಿ ಪಿಡಿಸಿ (ಪ್ರಿ ಡಿಗ್ರಿ ಕೋರ್ಸ್) ಹಾಗೂ ಬಿ.ಎ ಪದವಿ ಗಳಿಸಿದರು. ಕಾಸರಗೋಡು ತಾಲ್ಲೂಕಿನ ಮಾಯಿಪ್ಪಾಡಿಯ ಬೇಸಿಕ್ ಟ್ರೇನಿಂಗ್ ಶಾಲೆ ಮತ್ತು ತಲಶ್ಶೇರಿ ಟ್ರೇನಿಂಗ್ ಕಾಲೇಜಿನಲ್ಲಿ ಬಿ.ಎಡ್ ಪದವಿ ಪಡೆದರು.
ಕಾಸರಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿ, ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. 1968ರಿಂದ ಮಣಿಪಾಲದ ಎಂಐಟಿ ಸಂಸ್ಥೆಯಲ್ಲಿ ಮತ್ತು ಉಡುಪಿಯ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು.
ಇಥಿಯೋಪಿಯಾದಲ್ಲಿದ್ದ ಅವರು ಸ್ವದೇಶಕ್ಕೆ ಮರಳಿದ ನಂತರ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಬಳಿ ‘ವನಸಿರಿ’ಯಲ್ಲಿ ಕೃಷಿ ಮತ್ತು ಸಾಹಿತ್ಯಕೃಷಿಯಲ್ಲಿ ತೊಡಗಿಸಿಕೊಂಡರು. ‘ಝೇಂಕಾರದ ಹಕ್ಕಿ’.
ಲಂಡನ್‌ನಲ್ಲಿ ಡಿಪ್ಲೊಮಾ ಪಡೆದ ಅವರ ಸಾಹಿತ್ಯ ಕೃಷಿ ಆರಂಭವಾದದ್ದು 1957ರಲ್ಲಿ. ಕೆ.ಟಿ. ಗಟ್ಟಿ ಅವರ ತಂದೆ ಧೂಮಪ್ಪ ಗಟ್ಟಿ. ತಾಯಿ ಪರಮೇಶ್ವರಿ. ಧೂಮಪ್ಪ ಅವರು ಯಕ್ಷಗಾನ ಪ್ರಿಯರಾಗಿದ್ದರು. ಯಕ್ಷಗಾನ ಮೇಳದೊಂದಿಗೆ ಒಡನಾಟ ಇದ್ದ ಅವರು ಪರ ಊರಿಗೆ ಹೋಗಿದ್ದಾಗ ಪುಸ್ತಕಗಳನ್ನು ಮನೆಗೆ ತರುತ್ತಿದ್ದರು. ಇದರಿಂದ ಕೆ.ಟಿ.ಗಟ್ಟಿ ಅವರಿಗೆ ಓದುವ ಪ್ರೇರಣೆ ಉಂಟಾಯಿತು. ತಾಯಿ ಹಾಡುತ್ತಿದ್ದ ಪಾಡ್ದನಗಳು ಅವರಲ್ಲಿ ಸಾಹಿತ್ಯ ಒಲವು ಮೂಡಿಸಿದವು. ಅವರ ಮೊದಲ ಕಾದಂಬರಿ ‘ಶಬ್ದಗಳು’ ಧಾರಾವಾಹಿಯಾಗಿ ‘ಸುಧಾ’ ವಾರಪತ್ರಿಕೆಯಲ್ಲಿ 1976ರಲ್ಲಿ ಪ್ರಕಟವಾಯಿತು. 1978ರಲ್ಲಿ ಬರೆದ ‘ಸಾಫಲ್ಯ’ ಕಾದಂಬರಿ ಸೇರಿದಂತೆ 2004ರ ವರೆಗೆ ಸುಮಾರು 14 ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಇದೊಂದು ಸಾಧನೆಯೇ ಸರಿ.
ಕಾರ್ಮುಗಿಲು, ಪುನರಪಿ ಜನನಂ, ಬಿಸಿಲುಗುದುರೆ, ಕಾಮರೂಪಿ, ಸನ್ನಿವೇಶ, ಉರಿ, ಶಬ್ದಗಳು, ನಿರಂತರ, ಸ್ವರ್ಣ ಮೃಗ, ಅಬ್ರಾಹ್ಮಣ, ಪರುಷ, ಅಶ್ರುತ ಗಾನ, ಅರಗಿನ ಅರಮನೆ, ಶಿಲಾ ತಪಸ್ವಿ, ಸನ್ನಿವೇಶ, ಗ್ಲಾನಿ, ಪರಮಾರ್ಥ, ಪರಿಧಿ, ಪೂಜಾರಿ, ಮನೆ, ಕೆಂಪು ಕಳವೆ, ಕರ್ಮಣ್ಯೇ ವಾಧಿಕಾರಸ್ತೆ, ಭೂಮಿಗೀತೆ, ಕೂಪ, ಅಪೂರ್ಣ, ಸುಖಾಂತ, ಸಾಫಲ್ಯ, ಕಾಮಯಜ್ಞ, ಅವಿಭಕ್ತರು, ರಸಾತಳ, ನವೆಂಬರ್ 10, ಯುಗಾಂತರ, ಮಿತಿ, ರಾಗಲಹರಿ, ಮೃತ್ಯೋರ್ಮಾ ಅಮೃತಂ ಗಮಯ, ಏಳು ಮಲ್ಲಿಗೆ ತೂಕದ ಹುಡುಗಿ, ಇತಿಹಾಸದ ಮೊಗಸಾಲೆಯಲ್ಲಿ, ಅನಂತರ, ಅಂತರಂಗದ ಅತಿಥಿ, ಯುದ್ಧ ಮುಂತಾದವು ಅವರ ಪ್ರಮುಖ ಕಾದಂಬರಿಗಳು.
ಮೂರನೆಯ ಧ್ವನಿ (ಸಾಹಿತ್ಯ ಚಿಂತನ), ನಿನ್ನೆ ನಾಳೆಗಳ ನಡುವೆ (ಸಾಮಾಜಿಕ ಚಿಂತನ), ನಮ್ಮ ಬದುಕಿನ ಪುಟಗಳು, ‘ನಮ್ಮೊಳಗಿನ ಆಕಾಶ’, ‘ನಾಲ್ಕುದಿಕ್ಕು ಮತ್ತು ಅಂತರಾಳದ ತಂತಿ’ (ವೈಚಾರಿಕ ಲೇಖನಗಳು)ಕೃತಿ ರೂಪದಲ್ಲಿ ಪ್ರಕಟಗೊಂಡಿವೆ. ‘ಝೇಂಕಾರದ ಹಕ್ಕಿ’ ಹಾಗೂ ಇಂಗ್ಲಿಷ್ ಗೀತೆಗಳ ಅನುವಾದ ‘ನನ್ನ ಪ್ರೇಮದ ಹುಡುಗಿ’ ಅವರ ಕಾವ್ಯಗಳು.
ನಾಟ್ಕ, ಕೆಂಪು ಕಾಗೆ, ಸತ್ಯಕ್ಕೆ ಜಯ, ಕುರುಡರು, ನಗರ ಪರ್ವ, ಬೊಂಬೆಯಾಟ, ಜುಜುಬಿ ದೇವರ ಜುಗಾರಿ ಮುಂತಾದ ಅವರು ಬರೆದ ನಾಟಕಗಳು. ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಪಂಜಾಬಿ ಮುಂತಾದ ಭಾಷೆಗಳಿಗೆ ನಾಟಕಗಳು ಅನುವಾದಗೊಂಡಿವೆ.
ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ತಂದೆ ತಾಯಿಗಳಿಗೂ ಉಪಯುಕ್ತವಾಗುವ ಕೃತಿಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ. ಅಂಡಮಾನ್ ಪ್ರವಾಸದ ‘ನಿಸರ್ಗ ಕನ್ಯೆ ಅಂಡಮಾನ್’, ಪ್ರಬಂಧ ಸಂಕಲನ ಬರೆದಿದ್ದಾರೆ. ‘ತೀರ’ ಅವರ ಆತ್ಮಕಥೆ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.