ADVERTISEMENT

ಪುತ್ತೂರು | ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 13:29 IST
Last Updated 29 ಜುಲೈ 2024, 13:29 IST
ಹಲ್ಲೆಗೊಳಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಭ್ರಮೀಷ್
ಹಲ್ಲೆಗೊಳಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಭ್ರಮೀಷ್   

ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡಿಕೊಂಡು ಶಾಂತಿಭಂಗ ಮಾಡಿದ ಮತ್ತು ಈ ಪೈಕಿ ಒಬ್ಬ ತಲವಾರು ಹಿಡಿದು ಕೊಂಡು ಬಂದು ಹಲ್ಲೆಗೆ ಯತ್ನಿಸಿದ ಘಟನೆ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಸಂಪ್ಯ ಠಾಣೆ  ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ವೇಳೆ ಪಂಚೋಡಿ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ರಾಜೇಶ್ ಪಂಚೋಡಿ, ಪ್ರವೀಶ್ ನಾಯರ್, ರಾಕೇಶ್ ಪಂಚೋಡಿ, ಜಯರಾಜ್, ಪ್ರಜ್ವಲ್ ಮಡ್ಯಳಮಜಲು, ಸಂಜನ್ ರೈ ಹೊಡೆದಾಡಿಕೊಂಡಿದ್ದಾರೆ. ಈ ಪೈಕಿ ರಾಕೇಶ್ ಪಂಚೋಡಿ ಎಂಬಾತ ತಲ್ವಾರ್ ಹಿಡಿದುಕೊಂಡು ಹಲ್ಲೆಗೆ ಯತ್ನಿಸಿರುವುದಾಗಿ ತಿಳಿದು ಬಂದಿದೆ.

ರಾಕೇಶ್ ಪಂಚೋಡಿ ತಲವಾರು ಹಿಡಿದುಕೊಂಡು ಹಲ್ಲೆಗೆ ಯತ್ನಿಸಿದ ವೇಳೆ ಸ್ಥಳಕ್ಕೆ ತೆರಳಿದ ಸಂಪ್ಯ ಠಾಣೆ ಎಸ್ಐ ಜಂಬೂರಾಜ್ ಬಿ.ಮಹಾಜನ್ ನೇತೃತ್ವದ ಪೊಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿ ಸೇರಿ ಆತನ ಕೈಯಲ್ಲಿದ್ದ ತಲ್ವಾರನ್ನು ಕಸಿದುಕೊಂಡಿದ್ದಾರೆ. ಆ ಬಳಿಕ ಆರೋಪಿಗಳ ಪೈಕಿ ರಾಜೇಶ್ ಪಂಚೋಡಿ ಹಾಗೂ ಸಂಜನ್ ರೈ ಎಂಬುವರನ್ನು ವಶಕ್ಕೆ ತೆಗೆದುಕೊಂಡಿದ್ದು, ಈ ವೇಳೆ ಉಳಿದವರು ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಸಂಪ್ಯ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಪ್ಪು ಮಾಹಿತಿಯಿಂದ ಹಲ್ಲೆ: ಪಂಚೋಡಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪು ಮಾಹಿತಿಯ ಮೇಲೆ ಸಂಪ್ಯ ಠಾಣೆ ಪೊಲೀಸರು ಭಾನುವಾರ ರಾತ್ರಿ ಮನೆಗೆ ನುಗ್ಗಿ ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ನಿವಾಸಿ, ಪುತ್ತೂರಿನ ಕಂಪನಿಯೊಂದರಲ್ಲಿ ಎ.ಸಿ ಟೆಕ್ನಿಷಿಯನ್ ಆಗಿರುವ ಭ್ರಮೀಷ್ ಹಲ್ಲೆಗೊಳಗಾದವರು.

‘ನಾನು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಮನೆ ಬಳಿಗೆ ಬಂದ ನಾಲ್ವರು ಪೊಲೀಸರು ಬಾಗಿಲು ಬಡಿದಿದ್ದು, ಈ ವೇಳೆ ಯಾರು ಎಂದು ವಿಚಾರಿಸಿದಾಗ ಅವಾಚ್ಯವಾಗಿ ನಿಂದಿಸಿ ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಲಾಠಿಯಿಂದ ಹೊಡೆದಿದ್ದಾರೆ. ಗಲಾಟೆ ನಡೆದ ಸ್ಥಳದಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನದ ಬಳಿ ಕರೆದೊಯ್ದರು. ಅಲ್ಲಿದ್ದ ಎಸ್ಐ ಅವರಲ್ಲಿ, ನನಗೆ ಗಲಾಟೆಯ ವಿಷಯವೇ ಗೊತ್ತಿಲ್ಲ ಎಂದಾಗ ಮನೆಗೆ ಕಳುಹಿಸಿದ್ದಾರೆ. ಪೊಲೀಸರ ಲಾಠಿ ಏಟಿನಿಂದ ನನ್ನ ಎಡಗೈಗೆ ಬಲವಾದ ಗಾಯವಾಗಿದೆ’ ಎಂದು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಭ್ರಮೀಷ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.