ADVERTISEMENT

ಕೆಮ್ಮಾರ | ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಅವಘಡ; ಮನೆ ಭಾಗಶಃ ಭಸ್ಮ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 14:04 IST
Last Updated 30 ಜೂನ್ 2024, 14:04 IST
ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಉಂಟಾದ ಬೆಂಕಿ ಅವಘಡದಿಂದ ಸ್ವತ್ತುಗಳು ಸುಟ್ಟು ಕರಕಲಾಗಿರುವುದು
ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಉಂಟಾದ ಬೆಂಕಿ ಅವಘಡದಿಂದ ಸ್ವತ್ತುಗಳು ಸುಟ್ಟು ಕರಕಲಾಗಿರುವುದು   

ಉಪ್ಪಿನಂಗಡಿ: ಕಡಬ ತಾಲ್ಲೂಕು ಕೊಯಿಲ ಗ್ರಾಮದ ಕೆಮ್ಮಾರ ಎಂಬಲ್ಲಿ ಭಾನುವಾರ ಮನೆಯೊಳಗೆ ಬೆಂಕಿ ಹೊತ್ತಿಕೊಂಡು ಮನೆಯ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆ ಭಾಗಶಃ ಹಾನಿಗೊಂಡಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಮ್ಮಾರ ಶಾಲೆ ಬಳಿಯ ನಿವಾಸಿ ದಿ.ಇಬ್ರಾಹಿಂ ಎಂಬುವರ ಪುತ್ರ ಅಬ್ದುಲ್ ರಹಿಮಾನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದೆ. ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯೊಳಗೆ ಆವರಿಸಿದೆ. ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಷಿಂಗ್ ಮೆಸಿಷಿನ್, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬೆಂಕಿಯ ತಾಪಕ್ಕೆ 2 ಕಡೆ ಗೋಡೆ ಬಿರುಕು ಬಿಟ್ಟಿದೆ. ಬೆಂಕಿ ಕಾಣಿಸಿಕೊಂಡ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ನೆಲದ ಟೈಲ್ಸ್ ಸಿಡಿದಿದೆ. ಇದರಿಂದಾಗಿ ಸುಮಾರು ₹ 35 ಲಕ್ಷ ನಷ್ಟ ಉಂಟಾಗಿದೆ ಎಂದು ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್, ಪತ್ನಿ, ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ವರ್ಷದ ಹಿಂದೆ ಮನೆ ನಿರ್ಮಿಸಲಾಗಿತ್ತು.

ಬೆಂಕಿ ಅವಘಡದ ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತರಾದ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ಮನೆಯೊಳಗೆ ಪ್ರವೇಶಿಸಿ
ವಿದ್ಯುತ್ ಸಂಪರ್ಕ, ಗ್ಯಾಸ್ ಸಂಕರ್ಪ ಕಡಿತಗೊಳಿಸಿದರು. ಪುತ್ತೂರಿನಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.

ಘಟನಾ ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ಭೇಟಿ ನೀಡಿದರು. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ನಾನು ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತಳಾಗಿದ್ದೆ. ತುಂತುರು ಮಳೆಯಾಗುತ್ತಿತ್ತು. ಭಾರಿ ಸಿಡಿಲಿನ ಶಬ್ದ ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣುತ್ತಿರಲಿಲ್ಲ ಎಂದು ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ತಿಳಿಸಿದರು.

ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಉಂಟಾದ ಬೆಂಕಿ ಅವಘಡದಿಂದ ಸ್ವತ್ತುಗಳು ಸುಟ್ಟು ಕರಕಲಾಗಿರುವುದು
ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಮನೆ ಭಾಗಶಃ ಬೆಂಕಿಗೆ ಆಹುತಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.