ADVERTISEMENT

ಎಳೆಯ ಪುತ್ರನೊಂದಿಗೆ ವಾಸ್ತವ್ಯವಿದ್ದ ಮಹಿಳೆಯ ಗುಡಿಸಲಿಗೆ ಬೆಂಕಿ

ನಗದು ಹಣ-ದಾಖಲೆಪತ್ರ ಬೆಂಕಿಗಾಹುತಿ: ಬೆಂಕಿ ಹಚ್ಚಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 14:34 IST
Last Updated 18 ಅಕ್ಟೋಬರ್ 2024, 14:34 IST
ಪುತ್ತೂರು ತಾಲ್ಲೂಕಿನ ಕುಂಬ್ರ ಸಮೀಪದ ಸಾರೆಪುಣಿ ಪಾದೆಡ್ಕ ಎಂಬಲ್ಲಿ ಬೆಂಕಿಗಾಹುತಿಯಾದ ಪದ್ಮಾವತಿ ಎಂಬುವರ ಗುಡಿಸಲು
ಪುತ್ತೂರು ತಾಲ್ಲೂಕಿನ ಕುಂಬ್ರ ಸಮೀಪದ ಸಾರೆಪುಣಿ ಪಾದೆಡ್ಕ ಎಂಬಲ್ಲಿ ಬೆಂಕಿಗಾಹುತಿಯಾದ ಪದ್ಮಾವತಿ ಎಂಬುವರ ಗುಡಿಸಲು   

ಪುತ್ತೂರು: ತಾಲ್ಲೂಕಿನ ಕುಂಬ್ರ ಸಮೀಪದ ಸಾರೆಪುಣಿಪಾದೆಡ್ಕ ಎಂಬಲ್ಲಿ ಗುಡಿಸಲೊಂದು ಶುಕ್ರವಾರ ಬೆಂಕಿಹಾಗುತಿಯಾಗಿ ಅಪಾರ ನಷ್ಟ ಉಂಟಾಗಿದೆ. ಗುಡಿಸಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಪಾದೆಡ್ಕ ನಿವಾಸಿ ಪದ್ಮಾವತಿ ಹಾಗೂ ಅವರ ಎಳೆಯ ಪ್ರಾಯದ ಪುತ್ರ ವಾಸ್ತವ್ಯವಿದ್ದ, ಶೀಟ್ ಅಳವಡಿಸಿರುವ ಗುಡಿಸಲು ಮನೆಯಲ್ಲಿ ಬೆಂಕಿ ಅವಘಡ ನಡೆದಿದೆ. ಮನೆಯೊಳಗೆ ಬ್ಯಾಗ್‌ನಲ್ಲಿ ಇರಿಸಿದ್ದ ₹ 15 ಸಾವಿರ ನಗದು ಹಣ, ಆಧಾರ್ ಕಾರ್ಡ್‌ ಸಹಿತ ದಾಖಲೆ ಪತ್ರಗಳು, ದಿನಸಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಗೋಡೆ ಇಲ್ಲದ ಗುಡಿಸಲಿನ ಸುತ್ತ ಅಳವಡಿಸಲಾಗಿದ್ದ ನೆಟ್ ಸುಟ್ಟು ಹೋಗಿದೆ.

ಪದ್ಮಾವತಿ ಅವರ ಪತಿ ನಿಧನರಾಗಿದ್ದು, ಅವರು ತನ್ನ 8 ವರ್ಷದ ಪುತ್ರನೊಂದಿಗೆ ಈ ಗುಡಿಸಲಿನಲ್ಲಿ ವಾಸ್ತವ್ಯವಿದ್ದರು. ಪದ್ಮಾವತಿ ಅವರು ಶುಕ್ರವಾರ ಕೆಲಸಕ್ಕೆ ಹೋಗಿದ್ದ ವೇಳೆ ಸ್ಥಳೀಯರು ಅವರಿಗೆ ಕರೆ ಮಾಡಿ ಮನೆಗೆ ಬೆಂಕಿ ಬಿದ್ದಿರುವ ವಿಚಾರ ತಿಳಿಸಿದ್ದರು. ಕೂಡಲೇ ಅವರು ಮನೆಗೆ ಬಂದಿದ್ದರೂ ಆ ವೇಳೆಗಾಗಲೇ ಗುಡಿಸಲಿನ ಒಂದು ಭಾಗ ಬೆಂಕಿಗಾಹುತಿಯಾಗಿತ್ತು.

ADVERTISEMENT

ಬೆಂಕಿ ಅವಘಡ ನಡೆದ ವಿಷಯ ತಿಳಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ, ಎಸ್‌ಕೆಎಸ್‌ಎಸ್‌ಎಫ್‌ ಮುಖಂಡ ಅಶ್ರಫ್ ಸಾರೆಪುಣಿ ಜತೆಗೆ  ಸ್ಥಳೀಯರಾದ ಹುಕ್ರ ಎಂಬುವರು ಬೆಂಕಿ ನಂದಿಸಲು ಶ್ರಮಿಸಿದರು. ಘಟನಾ ಸ್ಥಳಕ್ಕೆ ಕೆದಂಬಾಡಿ ಗ್ರಾಮ ಸಹಾಯಕ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪದ್ಮಾವತಿ ಅವರ ಮನೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಮನೆಯ ಒಲೆ ಒಂದು ಮೂಲೆಯಲ್ಲಿದ್ದು, ಅಲ್ಲಿ ಬೆಂಕಿ ಅವಘಡ ಆಗಿರುವ ಕುರುಹುಗಳು ಕಂಡು ಬಂದಿಲ್ಲ, ಒಲೆಯಲ್ಲಿ ಬೆಂಕಿಯೂ ಇರಲಿಲ್ಲ. ಉದ್ದೇಶಪೂರ್ವಕವಾಗಿ ಗುಡಿಸಲಿಗೆ ಬೆಂಕಿ ಹಚ್ಚಿರಬಹುದು ಎನ್ನುವ ಸಂಶಯ ಸ್ಥಳೀಯವಾಗಿ ವ್ಯಕ್ತವಾಗಿದೆ. ಘಟನೆ ಬಗ್ಗೆ ಪದ್ಮಾವತಿ ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನನ್ನಲ್ಲಿ ಇದ್ದ ₹ 15 ಸಾವಿರ ನಗದು, ಆಧಾರ್ ಕಾರ್ಡ್‌ ದಾಖಲೆಗಳು ಸುಟ್ಟು ಭಸ್ಮವಾಗಿದ್ದು, ನಾವು ಇನ್ನೇನು ಮಾಡಬೇಕು. ನನ್ನಲ್ಲಿ ಒಂದು ರೂಪಾಯಿ ಹಣವೂ ಇಲ್ಲ. ದಾನಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿ ಎಂದು ಅವರು ಅಂಗಲಾಚತೊಡಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.