ADVERTISEMENT

ನಿರಾಸೆಯಲ್ಲಿ ಕಳೆದ ಮೀನುಗಾರಿಕೆ ಋತು: ಹಳೆ ಬಂದರಿನಲ್ಲಿ ಲಂಗರು ಹಾಕಿದ ಬೋಟ್‌ಗಳು

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 3:46 IST
Last Updated 2 ಜೂನ್ 2021, 3:46 IST
ಪ್ರಜಾವಾಣಿ
ಪ್ರಜಾವಾಣಿ    

ಮಂಗಳೂರು: ಕೋವಿಡ್–19, ಚಂಡಮಾರುತ, ಮಳೆಯಿಂದಾಗಿ ಹಲವು ಸಂಕಷ್ಟಗಳ ಮಧ್ಯೆ ಮತ್ತೊಂದು ಮೀನುಗಾರಿಕೆ ಋತು ಪೂರ್ಣವಾಗಿದೆ. ಮೀನುಗಾರರು ಸಾಕಷ್ಟು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಮೀನುಗಳ ಸಂತಾನೋತ್ಪತ್ತಿಗಾಗಿ ಪ್ರತಿ ವರ್ಷ ಜೂನ್ 1 ರಿಂದ ಜುಲೈ 31 ರವರೆಗೆ ಆಳ ಸಮುದ್ರ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತಿದೆ. ಅದರಂತೆ ಪಶ್ಚಿಮ ಕರಾವಳಿಯಲ್ಲಿ ಇದೀಗ ಮೀನುಗಾರಿಕೆಗೆ ರಜೆ.

ಕಳೆದ ವರ್ಷವೂ ಚಂಡಮಾರುತ, ಕೋವಿಡ್‌ನಿಂದಾಗಿ ಸಂಕಷ್ಟದ ಸುಳಿಗೆ ಸಿಲುಕಿದ್ದ ಮೀನುಗಾರಿಕೆ, ಈ ವರ್ಷವೂ ಆದೇ ಪರಿಸ್ಥಿತಿಯನ್ನು ಎದುರಿಸುವಂತಾಯಿತು. ಮೀನುಗಾರರು ಬಹು ತೇಕ ದಿನಗಳಲ್ಲಿ ಸಮುದ್ರಕ್ಕೆ ತೆರಳದೇ ಮನೆಯಲ್ಲಿಯೇ ಉಳಿಯುವಂತಾಯಿತು.

ADVERTISEMENT

ಎರಡು ವರ್ಷಗಳಿಂದ ಒಂದಿ ಲ್ಲೊಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಕಳೆದ ವರ್ಷ ಲಾಕ್‌ಡೌನ್‌, ಚಂಡಮಾರುತ, ಫಿಶ್ ಮೀಲ್‌ ಘಟಕಗಳ ಪ್ರತಿಭಟನೆಯಿಂದಾಗಿ ನಷ್ಟ ಅನುಭವಿಸುವಂತಾಯಿತು. ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಡೀಸೆಲ್ ಸಬ್ಸಿಡಿಯ ಬಿಡುಗಡೆಯಲ್ಲೂ ವಿಳಂಬವಾಯಿತು ಎನ್ನುವುದು ಮೀನುಗಾರರ ಅಳಲು.

ಅಲಿಖಿತ ಒಪ್ಪಂದದ ಪ್ರಕಾರ, ಹಿಡಿದ ಮೀನಿನಲ್ಲಿ ಟ್ರಾಲ್‌ ಬೋಟ್‌ ಮೀನುಗಾರರಿಗೆ ಶೇ 25 ಹಾಗೂ ಪರ್ಸಿನ್‌ ಬೋಟ್‌ ಮೀನುಗಾರರಿಗೆ ಶೇ 35 ರಷ್ಟು ಪಾಲು ನೀಡಲಾಗುತ್ತದೆ. ಬಾಕಿ ಉಳಿದಿದ್ದು ಬೋಟ್‌ ಮಾಲೀಕರಿಗೆ ಸೇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಲಾಭಾಂಶ ಅತ್ಯಂತ ಕಡಿಮೆ ಆಗುತ್ತಿದೆ ಎನ್ನುತ್ತಾರೆ ಪರ್ಸಿನ್‌ ಬೋಟ್‌ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಮೋಹನ್‌ ಬೆಂಗ್ರೆ.

ಸದ್ಯದ ಪರಿಸ್ಥಿತಿಯಲ್ಲಿ ಒಂದು ಬಾರಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದರೆ, ಕನಿಷ್ಠ ₹1 ಲಕ್ಷ ಮೌಲ್ಯದ ಡೀಸೆಲ್ ಅಗತ್ಯ. ಸರ್ಕಾರ ಡಿಸೆಂಬರ್‌ನಿಂದ ಡೀಸೆಲ್‌ ಸಬ್ಸಿಡಿ ಬಿಡುಗಡೆ ಮಾಡದೇ ಇರುವುದರಿಂದ ಕೆಲವೇ ಕೆಲವು ಬೋಟ್‌ಗಳು ಮಾತ್ರ ಮೀನುಗಾರಿಕೆ ನಡೆಸಿವೆ. ಲಾಕ್‌ಡೌನ್‌ ನಿಂದಾಗಿ ಮೀನಿನ ರಫ್ತೂ ಸಾಧ್ಯವಾಗಿಲ್ಲ ಎಂದು ಅವರು ಹೇಳುತ್ತಾರೆ.

ಕೇರಳ ಹಾಗೂ ತಮಿಳುನಾಡಿನ ಮೀನುಗಾರರು ಲೈಟ್ ಫಿಶಿಂಗ್‌ನಂತಹ ಅವೈಜ್ಞಾನಿಕ ಪದ್ಧತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಅವರು, ಈ ಬಾರಿಯೂ ಸರ್ಕಾರ ಮೀನುಗಾರರಿಗೆ ಯಾವುದೇ ಪ್ಯಾಕೇಜ್‌ ಘೋಷಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಬ್ಸಿಡಿ ಬಿಡುಗಡೆಗೆ ಸಾಫ್ಟ್‌ವೇರ್‌ ಸಮಸ್ಯೆಯಿಂದಾಗಿ ವಿಳಂಬವಾಗಿತ್ತು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಅರ್ಹ ಮೀನುಗಾರರಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳಿನ ಡೀಸೆಲ್ ಸಬ್ಸಿಡಿಯಾಗಿ ₹12 ಕೋಟಿ ಬಿಡುಗಡೆ ಮಾಡಿದೆ ಎಂದು ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ಕುಮಾರ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.