ADVERTISEMENT

ಮಂಗಳೂರು: ಕಳೆದ ವರುಷದ ಕಹಿ ಮರೆತು ಕಡಲಿಗಿಳಿದ ಮೀನುಗಾರರು

ಇಳುವರಿ ಕುಸಿತದಿಂದ 2023–24ರಲ್ಲಿ ಭಾರಿ ನಷ್ಟ, ಮೀನುಗಾರರಲ್ಲಿ ಹೊಸ ಹುರುಪು ಮೂಡಿಸಿದೆ ಮಳೆ

ಪ್ರವೀಣ್‌ ಕುಮಾರ್‌ ಪಿ.ವಿ
Published 5 ಆಗಸ್ಟ್ 2024, 6:05 IST
Last Updated 5 ಆಗಸ್ಟ್ 2024, 6:05 IST
ಆಳಸಮುದ್ರ ಮೀನುಗಾರಿಕೆಗೆ ತೆರಳಲು ಮಂಗಳೂರಿನ ಬಂದರಿನಲ್ಲಿ ಸಜ್ಜಾಗಿ ನಿಂತಿರುವ  ದೋಣಿಗಳು – ಪ್ರಜಾವಾಣಿ ಚಿತ್ರ
ಆಳಸಮುದ್ರ ಮೀನುಗಾರಿಕೆಗೆ ತೆರಳಲು ಮಂಗಳೂರಿನ ಬಂದರಿನಲ್ಲಿ ಸಜ್ಜಾಗಿ ನಿಂತಿರುವ  ದೋಣಿಗಳು – ಪ್ರಜಾವಾಣಿ ಚಿತ್ರ   

ಮಂಗಳೂರು: ಕಳೆದ ವರ್ಷದ ಕಡಲಾಳದ ಮೀನುಬೇಟೆ ಕೈಗೂಡದ ಕಹಿನೆನಪುಗಳನ್ನು ಮರೆತು, ಮತ್ತೆ ನಿರೀಕ್ಷೆಗಳ ಭಾರ ಹೊತ್ತು, ಅಲೆಗಳ ಬೆನ್ನೇರಿ ಅರಬ್ಬಿ ಸಮುದ್ರದತ್ತ ಮತ್ತೆ ದಾಂಗುಡಿ ಇಟ್ಟಿದ್ದಾರೆ ಇಲ್ಲಿನ ಮೀನುಗಾರರು.

ಕಳೆದ ಎರಡು ತಿಂಗಳಿನಲ್ಲಿ ಸುರಿದ ಭರ್ಜರಿ ಮಳೆ ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಭಾರಿ ಮಳೆ ಸುರಿದ ವರ್ಷಗಳಲ್ಲೆಲ್ಲ ಮೀನಿನ ಭರಫೂರ ಫಸಲು ಸಿಕ್ಕಿರುವುದು ಇದಕ್ಕೆ ಕಾರಣ.

61 ದಿನಗಳ ಮೀನುಗಾರಿಕಾ ರಜೆ ಆ.1ಕ್ಕೆ ಕೊನೆಗೊಂಡಿದೆ. ಆ ಬಳಿಕ ಮಳೆಯ ಅಬ್ಬರವೂ ತುಸು ಇಳಿದಿದೆ. ಇನ್ನೊಂದೆಡೆ,  ಗರ್ಜಿಸುತ್ತಿದ್ದ ಅಲೆಗಳ ಉಬ್ಬರವೂ ಕಡಿಮೆಯಾಗಿದೆ. ಬಂದರಿನ ದಕ್ಕೆಯಲ್ಲಿ ಲಂಗರು ಹಾಕಿದ್ದ ದೋಣಿಗಳು ಒಂದೊಂದಾಗಿ ಕಡಲಿಗೆ ಇಳಿಯುತ್ತಿವೆ. ಈ ದೋಣಿಗಳ ಮೀನುಗಾರರು ‘ಈ ವರ್ಷ ಮೀನು ಶಿಕಾರಿ ಕೈ ಹಿಡಿಯಲಿ’ ಎಂದು ಕಡಲ ರಾಜನಿಗೆ ಕೈಮುಗಿದು ಸಮುದ್ರದತ್ತ ಮುಖಮಾಡಿದ್ದಾರೆ.

ADVERTISEMENT

‘ಆಗಸ್ಟ್‌ 1ರಂದು ಸುಮಾರು 30 ಆಳ ಸಮುದ್ರ ಮೀನುಗಾರಿಕಾ ದೋಣಿಗಳು ಮಾತ್ರ ಸಮುದ್ರಕ್ಕೆ ಇಳಿದಿವೆ. ಆ. 2ರಂದು 150ಕ್ಕೂ ಹೆಚ್ಚು ಮೀನುಗಾರರು ಕಡಲಿನತ್ತ ತೆರಳಿದ್ದಾರೆ. ಮಳೆಯೂ ಕಡಿಮೆ ಆಗಿರುವುದರಿಂದ ಆ. 3ರಂದು 200ಕ್ಕೂ ಹೆಚ್ಚು ದೋಣಿಗಳು ಆಳ ಸಮುದ್ರ ಮೀನುಗಾರಿಕೆಗೆ ತೆರಳಿವೆ. ಪರ್ಸೀನ್‌ ಬೋಟುಗಳು ಸೋಮವಾರದಿಂದ ಸಮುದ್ರಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿವೆ’ ಎಂದು ಮೀನುಗಾರರ ಮುಖಂಡ ಮೋಹನ್ ಬೆಂಗ್ರೆ ’ಪ್ರಜಾವಾಣಿ‘ಗೆ ತಿಳಿಸಿದರು.

2022–23ರಲ್ಲಿ ದ.ಕ. ಜಿಲ್ಲೆಯ ಮೀನುಗಾರರಿಗೆ ಬಂಪರ್‌ ಇಳುವರಿ ಬಂದಿತ್ತು. ಆ ವರ್ಷ 3,33,537 ಟನ್‌ ಮೀನು ಲಭಿಸಿತ್ತು. ಇದರ ಮಾರಾಟದಿಂದ  ₹4,154 ಕೋಟಿ ವಹಿವಾಟು ನಡೆದಿತ್ತು. ಆದರೆ, ಕಳೆದ ಸಾಲು ಮೀನುಗಾರರ ಪಾಲಿಗೆ ನಿರಾಶಾದಾಯಕವಾಗಿತ್ತು. 2023–24ರಲ್ಲಿ ಮೀನು ಇಳುವರಿ ದಿಢೀರ್‌ ಆಗಿ ಅರ್ಧಕ್ಕರ್ಧ ಕುಸಿದಿತ್ತು. ಮೀನಿಗೆ ಉತ್ತಮ ಧಾರಣೆ ಇದ್ದರೂ ವಾರ್ಷಿಕ ವಹಿವಾಟು ₹ 2587.12 ಕೋಟಿಗೆ ಕುಸಿದಿತ್ತು.

‘ಕಳೆದ ವರ್ಷ ಆಳಸಮುದ್ರಕ್ಕೆ ತೆರಳಿದ್ದ ಬಹುತೇಕ ಮೀನುಗಾರಿಕಾ ದೋಣಿಗಳು ಮೀನು ಸಿಗದೇ ಖಾಲಿ ಖಾಲಿ ಮರಳಿದ್ದವು.  ನಷ್ಟ ಅನುಭವಿಸುವ ಭೀತಿಯಿಂದ ಅನೇಕರು ದೋಣಿಗಳನ್ನು ಸಮುದ್ರಕ್ಕೆ ಇಳಿಸಲೂ ಹಿಂದೇಟು ಹಾಕಿದ್ದರು.  ಸಿಕ್ಕ ಮೀನಿಗೂ ಹೇಳಿಕೊಳ್ಳುವಂತಹರ ಧಾರಣೆಯೂ ಸಿಕ್ಕಿಲ್ಲ’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಚೇತನ ಬೆಂಗ್ರೆ.

ಕಳೆದ  ವರ್ಷ  ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಹಾಗಾಗಿ ಇಳುವರಿಯೂ ಕುಸಿದಿತ್ತು. ಸಮೃದ್ಧ ಮಳೆಯಾದಾಗ ಮೀನಿನ ಇಳುವರಿಯೂ ಹೆಚ್ಚುತ್ತದೆ. ಈ ಸಲದ ಇದುವರೆಗಿನ ಮಳೆ ಮೀನುಗಾರಿಕೆಗೆ ಪೂರಕವಾಗಿದೆ ಎನ್ನುತ್ತಾರೆ ಮೀನುಗಾರರು. 

‘ಈ ಸಲ ಸಮುದ್ರವು ಹೇಳುಕೊಳ್ಳುವಷ್ಟು ಪ್ರಕ್ಷುಬ್ಧವಾಗಿಲ್ಲ. ಭಾರಿ ಗಾತ್ರದ ಅಲೆಗಳೂ ಕಾಣಿಸಿಕೊಂಡಿಲ್ಲ. ಸೋಮೇಶ್ವರದಿಂದ ಕುಂದಾಪುರದವರೆಗೂ ಮೀನುಗಾರಿಕೆಗೆ ಪೂರಕ ವಾತಾವರಣವಿದೆ. ಅರಬ್ಬಿ ಸಮುದ್ರವನ್ನು ಸೇರುವ ನದಿಗಳಲ್ಲಿ ಈ ಸಲ ಮೀನುಗಾರಿಕಾ ಋತು ಆರಂಭವಾಗುವುದಕ್ಕೆ ಮುನ್ನವೇ ಪ್ರವಾಹ ಕಾಣಿಸಿಕೊಂಡಿದೆ. ಯಥೇಚ್ಚ ಪ್ರಮಾಣದಲ್ಲಿ ಮಳೆ ನೀರು ಸಮುದ್ರವನ್ನು ಸೇರಿದೆ. ಹಾಗಾಗಿ ಈ ಸಲ ಮೀನುಗಾರಿಕಾ ಋತು ಚೆನ್ನಾಗಿರಬಹುದು ಎಂಬ ನಿರೀಕ್ಷೆ ನಮ್ಮದು’ ಎಂದು ಮೋಹನ ಬೆಂಗ್ರೆ ತಿಳಿಸಿದರು. 

ಕಳೆದ ವರ್ಷ ಮೀನಿನ ಇಳುವರಿ ಕುಸಿದರೂ  ಮೀನುಗಾರಿಕಾ ದೋಣಿಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲು 200 ದೋಣಿಗಳು ಹೆಚ್ಚುವರಿಯಾಗಿ ನೊಂದಣಿಯಾಗುವ ನಿರೀಕ್ಷೆ ಇದೆ. ಆಗಸ್ಟ್‌ ಅಂತ್ಯದವರೆಗೂ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಆ ಬಳಿಕವಷ್ಟೇ ಇದರ ನಿಖರ ಚಿತ್ರಣ ಸಿಗಲಿದೆ.

ಕಾರ್ಮಿಕರ ಸಮಸ್ಯೆ: ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ಸ್ಥಳೀಯ ಮೊಗವೀರರು ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಾಗಿ ಮೀನುಗಾರಿಕೆ ನಡೆಸುತ್ತಿದ್ದರು. ವರ್ಷ ಕಳೆದಂತೆ ಮೀನುಗಾರಿಕೆಗೆ ಕಾರ್ಮಿಕರ ಕೊರತೆಯೂ ಎದುರಾಗಿದೆ. ಆಳ ಸಮುದ್ರ ಮೀನುಗಾರಿಕೆಗೆ ತಮಿಳುನಾಡು, ಜಾರ್ಖಂಡ್‌ ಹಾಗೂ ಒಡಿಷಾದ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. 

ಹೊರರಾಜ್ಯದ ಮೀನುಗಾರರ ಹಾವಳಿ

‘ಮೀನುಗಾರಿಕೆ ರಜೆಯ ಸಂದರ್ಭದಲ್ಲಿ ಇಲ್ಲಿನ ಮೀನುಗಾರರು ಆಳ ಸಮುದ್ರಕ್ಕೆ ತೆರಳುವುದಿಲ್ಲ. ಆದರೆ ಬೇರೆ ರಾಜ್ಯಗಳ ಮೀನುಗಾರರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ನಿರ್ಬಂಧವನ್ನು ಉಲ್ಲಂಘಿಸಿ ಇಲ್ಲಿನ ಕಡಲಿನಲ್ಲಿ ಮೀನುಗಾರಿಕೆ ನಡೆಸುತ್ತಾರೆ’ ಎಂದು ಆರೋಪಿಸುತ್ತಾರೆ ಇಲ್ಲಿನ ಮೀನುಗಾರರು. ಮೀನುಗಾರಿಕೆ ಸಂಬಂಧಿಸಿ ದೇಶದಾದ್ಯಂತ ಏಕರೂಪದ ಕಾನೂನು ಜಾರಿಯಾಗಬೇಕು. ನಿಯಮ ಮೀರಿ ಮೀನುಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ಮೀನುಗಾರರ ಬೇಡಿಕೆ.

‘ಮೀನುಗಾರಿಕಾ ರಜೆ 3 ತಿಂಗಳಿಗೆ ವಿಸ್ತರಿಸಿ’

ಮೀನುಗಾರಿಕೆಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಬೇಕಾದರೆ ಮೀನುಗಳು ಸಂತಾನೋತ್ಪತ್ತಿ ನಡೆಸುವ ಅವಧಿಯಲ್ಲಿ ಮೀನು ಹಿಡಿಯಲು ಅವಕಾಶ ಕಲ್ಪಿಸಬಾರದು. ಆ ಕಾರಣಕ್ಕಾಗಿಯೇ ಮೀನುಗಾರಿಕಾ ಇಲಾಖೆ ಜೂನ್‌ 1ರಿಂದ ಜುಲೈ 31ರ ವರೆಗೆ ಮೀನುಗಾರಿಕಾ ರಜೆಯನ್ನು ಘೋಷಿಸುತ್ತದೆ. ಕಳೆದ ವರ್ಷ ಮೀನಿನ ಫಸಲಿನಲ್ಲಿ ಭಾರಿ ಇಳಿಕೆ ಕಂಡು ಬಂದ ಪರಿಣಾಮ ಮೀನುಗಾರಿಕಾ ರಜೆಯನ್ನು ಮೂರು ತಿಂಗಳಿಗೆ ವಿಸ್ತರಿಸಬೇಕೆಂಬ ಬೇಡಿಕೆ ಮೀನುಗಾರರಿಂದಲೇ ವ್ಯಕ್ತವಾಗಿದೆ. ‘ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲೂ ಮೀನುಗಾರಿಕೆಗೆ ಮೂರು ತಿಂಗಳು ರಜೆ ನೀಡಿದರೆ ಒಳ್ಳೆಯದು. ನಮ್ಮ ಪೂರ್ವಜರು ಶ್ರಾವಣ ಮಾಸದ ಹುಣ್ಣಿಮೆಯ ದಿನ ಕಡಲ ರಾಜನಿಗೆ ಹಾಲನ್ನು ಅರ್ಪಿಸಿ ಬಳಿಕ ಮೀನುಗಾರಿಕೆಗೆ ತೆರಳುತ್ತಿದ್ದರು. ಆಗ ಹೆಚ್ಚೂ ಕಡಿಮೆ ಎರಡೂವರೆಯಿಂದ ಮೂರು ತಿಂಗಳು ಮೀನುಗಾರಿಕೆಗೆ ರಜೆ ಇರುತ್ತಿತ್ತು. ಮೀನುಗಾರಿಕೆಯ ರಜೆಯನ್ನು ಮೂರು ತಿಂಗಳಿಗೆ ವಿಸ್ತರಿಸಿದರೆ ಮೀನುಗಾರರಿಗೇ ಅನುಕೂಲ. ಈಚೆಗೆ ಎಕ್ಕೂರಿನ ಮೀನುಗಾರಿಕಾ ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ರಾಜ್ಯದ ಮೂರು ಜಿಲ್ಲೆಗಳ ಮೀನುಗಾರರು ಈ ಪ್ರಸ್ತಾವಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದು ಚೇತನ್ ಬೆಂಗ್ರೆ ತಿಳಿಸಿದರು. 

ಅಳಿವೆ ಬಾಗಿಲಿನಲ್ಲಿ ಹೂಳು– ಮೀನುಗಾರರ ಗೋಳು

ಮಂಗಳೂರು ದಕ್ಕೆ ಹಾಗೂ ಅಳಿವೆ ಬಾಗಿಲಿನಲ್ಲಿ ಹೂಳಿನ ಸಮಸ್ಯೆಯಿಂದಾಗಿ ಮೀನುಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಹೂಳಿನಿಂದಾಗಿ ಅಳಿವೆಬಾಗಿಲಿನಲ್ಲಿ ಭಾರಿ ಗಾತ್ರದ ಅಲೆಗಳು ಉಂಟಾಗುತ್ತವೆ. ಕೆಲವು ಸಣ್ಣ ದೋಣಿಗಳು ಸಮುದ್ರಕ್ಕೆ ತೆರಳುವಾಗ ಅಥವಾ ಸಮುದ್ರದಿಂದ ದಕ್ಕೆಗೆ ಮರಳುವಾಗ ಇಲ್ಲಿ ಮಗುಚಿಬಿದ್ದಿವೆ. ಕೆಲ ಮೀನುಗಾರರು ಪ್ರಾಣವನ್ನೂ ಕಳೆದುಕೊಂಡ ಉದಾಹಣೆಗಳಿವೆ. ಹೂಳೆತ್ತಲು ₹ 29 ಕೋಟಿ ಮಂಜೂರಾಗಿದ್ದರೂ ಯಾವ ಸಂಸ್ಥೆಯೂ ಈ ಕಾಮಗಾರಿ ವಹಿಸಿಕೊಳ್ಳಲು ಮುಂದೆಬಂದಿರಲಿಲ್ಲ. ಏಳೆಂಟು ಸಲ ಸಂಸ್ಥೆಯು ಟೆಂಡರ್‌ ವಹಿಸಿಕೊಂಡಿದೆ. ಈ ಮಳೆಗಾಲ ಮುಗಿದ ಬಳಿಕ ಹೂಳೆತ್ತಲು ಸಿದ್ಧತೆ ನಡೆದಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.