ADVERTISEMENT

ಮಂಗಳೂರು | ಅರೆಬರೆ ಮಾರ್ಗ: ಪಾದಚಾರಿಗಳ ದೌರ್ಭಾಗ್ಯ

ಸಂಧ್ಯಾ ಹೆಗಡೆ
Published 11 ನವೆಂಬರ್ 2024, 6:11 IST
Last Updated 11 ನವೆಂಬರ್ 2024, 6:11 IST
<div class="paragraphs"><p>ಶಿವಬಾಗ್‌ನಲ್ಲಿ ಅಪೂರ್ಣ ಸ್ಥಿತಿಯಲ್ಲಿರುವ ಫುಟ್‌ಪಾತ್‌</p><p><br></p></div>

ಶಿವಬಾಗ್‌ನಲ್ಲಿ ಅಪೂರ್ಣ ಸ್ಥಿತಿಯಲ್ಲಿರುವ ಫುಟ್‌ಪಾತ್‌


   

ಮಂಗಳೂರು: ಮುರಿದು ಬಿದ್ದಿರುವ ಸಿಮೆಂಟ್ ಬ್ಲಾಕ್‌ಗಳ ನಡುವೆ ಮೇಲೆದ್ದು ಅಣಕಿಸುವ ಕಬ್ಬಿಣದ ಸರಳುಗಳು, ಕಾಲಿಗೆ ಎಡತಾಕುವ ಕೇಬಲ್ ಎಳೆಗಳು, ಕಸ ತುಂಬಿದ ಪ್ಲಾಸ್ಟಿಕ್ ಮೂಟೆಗಳು, ಅರೆಬರೆ ಕಾಮಗಾರಿ ನಡೆದು, ಅಲ್ಲೇ ಚಲ್ಲಾಪಿಯಲ್ಲಿಯಾಗಿ ಬಿದ್ದಿರುವ ಪೇವರ್ಸ್‌ಗಳು, ಸಣ್ಣಸಣ್ಣ ಮರಳು ಗುಡ್ಡಗಳು, ರಸ್ತೆ ತುಂಬ ಹರಡಿಕೊಂಡಿರುವ ಜಲ್ಲಿಗಳು...

ADVERTISEMENT

ಸ್ಮಾರ್ಟ್‌ ಸಿಟಿಯಾಗಿರುವ ಮಂಗಳೂರು ನಗರದ ಬಹುತೇಕ ಕಡೆಗಳಲ್ಲಿ ಪಾದಚಾರಿ ಮಾರ್ಗದಲ್ಲಿ ಹೋಗುವವರಿಗೆ ನಿತ್ಯ ಕಾಣುವ ದೃಶ್ಯಗಳಿವು.

ರಸ್ತೆಯ ಆರಂಭದಲ್ಲಿ ರಾಜಮಾರ್ಗದಂತೆ ಇರುವ ಫುಟ್‌ಪಾತ್‌ಗಳು ಮುಂದೆ ಹೋದಂತೆ ಹಾವಿನ ಬಾಲದಂತೆ ಕಿರಿದಾಗಿ, ಅರ್ಧ ರಸ್ತೆಯಲ್ಲೇ ಕೊನೆಗೊಳ್ಳುತ್ತವೆ. ಅದರ ಎದುರಿನಲ್ಲೇ ಕೊಳಚೆ ನಾರುವ ಚರಂಡಿ, ಆಳೆತ್ತರಕ್ಕೆ ಬೆಳೆದಿರುವ ಹುಲ್ಲು, ವಿಧಿಯಿಲ್ಲದೆ ಪಾದಚಾರಿಗಳು ರಸ್ತೆಯ ಅಂಚಿನಲ್ಲಿ ಜೀವ ಕೈಯಲ್ಲಿ ಹಿಡಿದು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ. ಕೆಲವೆಡೆ ಫುಟ್‌ಪಾತ್ ನಡುವಲ್ಲೇ ವಿದ್ಯುತ್ ಕಂಬಗಳು, ಟೆಲಿಫೋನ್ ಬಾಕ್ಸ್‌ಗಳು ಇವೆ. ಪಾದಚಾರಿಗಳು ‘ಜಂಪ್– ಡ್ರಾಪ್’ ಆಟದಂತೆ, ಫುಟ್‌ಪಾತ್ ಹತ್ತುವುದು ಮತ್ತೆ ರಸ್ತೆಗೆ ಇಳಿಯುವುದು ಮಾಡುತ್ತ ಮುಂದೆ ಸಾಗಬೇಕು. ವಯಸ್ಸಾದವರು, ಕಾಲು ನೋವಿನಿಂದ ಬಳಲುವವರಿಗೆ ನಡೆದುಕೊಂಡು ಹೋಗುವುದೇ ದೊಡ್ಡ ಯಾತನೆಯಾಗಿದೆ. ನಗರದ ಫುಟ್‌ಪಾತ್‌ಗಳ ದುರವಸ್ಥೆಯು ಸ್ಮಾರ್ಟ್‌ ಸಿಟಿಯ ಪರಿಕಲ್ಪನೆಯನ್ನೇ ಅಣಕಿಸುವಂತಿದೆ.

‘ನಗರದ ಅನೇಕ ಕಡೆ ಫುಟ್‌ಪಾತ್‌ಗಳು ಅವೈಜ್ಞಾನಿಕವಾಗಿವೆ. ಫುಟ್‌ಪಾತ್‌ಗಳ ಅಗಲ ಒಂದೇ ಅಳತೆಯಲ್ಲಿ ಇರುವುದಿಲ್ಲ. ಕೆಲವು ಕಡೆಗಳಲ್ಲಿ ಫುಟ್‌ಪಾತ್ ಅತಿಕ್ರಮಿಸಿ ವಾಹನ ನಿಲುಗಡೆ ಮಾಡುತ್ತಾರೆ. ಬೆಂದೂರ್‌ವೆಲ್‌ನಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗುವ ಮಾರ್ಗದ ಮಧ್ಯದಲ್ಲೇ ಟೆಲಿಫೋನ್‌ನವರ ದೊಡ್ಡ ಬಾಕ್ಸ್‌ ಇದೆ. ಫುಟ್‌ಪಾತ್ ಸಮಸ್ಯೆ ಬಗ್ಗೆ ಹಲವು ಬಾರಿ ದೂರು ನೀಡಿದರೂ, ಪಾಲಿಕೆ ಕ್ರಮ ವಹಿಸಿಲ್ಲ’ ಎಂದು ಆರೋಪಿಸುತ್ತಾರೆ ಸಾಮಾಜಿಕ ಹೋರಾಟಗಾರ ಜೆರಾಲ್ಡ್ ಟವರ್ಸ್.

‘ನಗರದ ಅನೇಕ ಬಡಾವಣೆಗಳಲ್ಲಿ ಫುಟ್‌ಪಾತ್ ಸಮಸ್ಯೆ ಇದೆ. ಫುಟ್‌ಪಾತ್ ಇಲ್ಲದ ಕಡೆ ಜನರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ಕಿರಿದಾದ ರಸ್ತೆಯಲ್ಲಿ ಎರಡು ದಿಕ್ಕುಗಳಲ್ಲಿ ವಾಹನಗಳು ಬರುತ್ತಿರುತ್ತವೆ, ನಡುವಲ್ಲೇ ಪಾದಚಾರಿಗಳು ಹೋಗುತ್ತಿರುತ್ತಾರೆ. ವಾಹನ ಚಾಲನೆ ಮಾಡುವಾಗ ಹೆಚ್ಚು ಎಚ್ಚರಿಕೆ ಬೇಕಾಗುತ್ತದೆ’ ಎನ್ನುತ್ತಾರೆ ಉರ್ವಸ್ಟೋರ್ ಬಸ್‌ ನಿಲ್ದಾಣ ಸಮೀಪದ ಆಟೊ ಚಾಲಕರೊಬ್ಬರು. 

‘ಪ್ರಜಾವಾಣಿ’ ಪ್ರತಿನಿಧಿ ನಗರ ಸಂಚಾರ ನಡೆಸಿದಾಗ ನಗರದ ಅನೇಕ ರಸ್ತೆಗಳಲ್ಲಿ ಫುಟ್‌ಪಾತ್ ಅನ್ನು ಅರೆಬರೆ ನಿರ್ಮಿಸಿ ಹಾಗೆಯೇ ಬಿಟ್ಟಿರುವುದು, ಖಾಸಗಿ ಕಾಂಪೌಂಡ್ ಗೋಡೆಗೆ ತಾಗಿ ಪೂರ್ಣಗೊಳಿ ಸಿರುವುದು, ಪೈಪ್ ಅಳವಡಿಕೆ ಕಾರಣಕ್ಕೆ ಪೇವರ್ಸ್ ಕಿತ್ತು ಹಾಕಿರುವುದು ಕಂಡು ಬಂತು.

ಪ್ರಮಾಣಪತ್ರ ಮಾತ್ರ:

ರಸ್ತೆ ನಿರ್ಮಾಣದ ವೇಳೆ ರಸ್ತೆಯ ಅಗಲ ನಿರ್ಧರಿತ ವಾಗಿರುತ್ತದೆ. ಹೆಚ್ಚುವರಿ ಜಾಗದಲ್ಲಿ ಫುಟ್‌ಪಾತ್ ನಿರ್ಮಿಸ ಲಾಗುತ್ತದೆ. ಫುಟ್‌ಪಾತ್ ನಿರ್ಮಾಣದ ವೇಳೆ ಸ್ಥಳೀಯ ಕೆಲವರು ತಮ್ಮ ಜಾಗ ಬಿಟ್ಟುಕೊಡಲು ಸಿದ್ಧರಿರುವುದಿಲ್ಲ. ಜಾಗ ಬಿಟ್ಟುಕೊಟ್ಟರೆ ಅವರಿಗೆ ಪಾಲಿಕೆಯಿಂದ ಟಿಡಿಆರ್ ಪ್ರಮಾಣಪತ್ರ ಮಾತ್ರ ನೀಡಲಾಗುತ್ತದೆ. ಕೆಲವು ಜಾಗಗಳ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಕಾರಣಕ್ಕೆ ಕೆಲವು ಕಡೆ ಫುಟ್‌ಪಾತ್‌ಗಳನ್ನು ಅರ್ಧ ನಿರ್ಮಿಸಿ ಹಾಗೆಯೇ ಬಿಡಲಾಗಿದೆ ಎನ್ನುತ್ತಾರೆ ಪಾಲಿಕೆಯ ಎಂಜಿನಿಯರ್‌ ಒಬ್ಬರು. ಫುಟ್‌ಪಾತ್ ನಿರ್ಮಾಣಕ್ಕೆ ಜಾಗ ನೀಡಿದರೆ, ಅಂತಹವರಿಗೆ ಪಾಲಿಕೆ ವತಿಯಿಂದ ಕಾಂಪೌಂಡ್ ನಿರ್ಮಿಸಿಕೊಡಲಾಗುತ್ತದೆ. ಮನೆಯ ಗೋಡೆಗೆ ಧಕ್ಕೆಯಾದರೆ, ಅದನ್ನು ಸಹ ನಿರ್ಮಿಸಿಕೊಡಲಾಗುತ್ತದೆ. ಫುಟ್‌ಪಾತ್ ಅತಿಕ್ರಮಣ ಆಗಿದ್ದು ಕಂಡುಬಂದಲ್ಲಿ, ಪಾಲಿಕೆಯಿಂದ ತೆರವುಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.

‘ಸಮನ್ವಯದ ಕೊರತೆ’

ರಾಜ್ಯದಲ್ಲಿ ಟಿಡಿಆರ್‌ಗೆ (ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು) ಜಾಗ ಬಿಟ್ಟುಕೊಟ್ಟವರಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರು ಮುಂಚೂಣಿಯಲ್ಲಿದ್ದಾರೆ. ನಗರದ ಅಭಿವೃದ್ಧಿಗಾಗಿ ಜನರು ತಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದರೂ, ಸರಿಯಾಗಿ ಅಭಿವೃದ್ಧಿ ಕಾರ್ಯ ಮಾಡದಿದ್ದರೆ, ಜನರಿಗೆ ಅನ್ಯಾಯ ಮಾಡಿದಂತೆ. ಪಾಲಿಕೆಯಲ್ಲಿ ಆಡಳಿತ ನಡೆಸುವವರು ಈ ಬಗ್ಗೆ ಗಮನ ಹರಿಸಬೇಕು ಎನ್ನುತ್ತಾರೆ  ಮಹಾನಗರ ಪಾಲಿಕೆಯ ಸದಸ್ಯ ಪ್ರವೀಣ್‌ಚಂದ್ರ ಆಳ್ವ. ಮೊದಲಿಗೆ ಹೋಲಿಸಿದರೆ ನಗರದಲ್ಲಿ ಫುಟ್‌ಪಾತ್‌ಗಳು ಹೆಚ್ಚಾಗಿವೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆ ಕೂಡ ವ್ಯವಸ್ಥಿತವಾಗಿ ಜಾರಿಗೊಂಡಿಲ್ಲ. ಭೂಗತ ಪೈಪ್‌ಗಳ ಮೇಲೆ ಕಾಂಕ್ರೀಟ್ ಹಾಕಿ ಫುಟ್‌ಪಾತ್ ನಿರ್ಮಿಸಿದ್ದಾರೆ. ಆದರೆ, ಕಾಮಗಾರಿಯ ನೆಪದಲ್ಲಿ ಮತ್ತೆ ಅದನ್ನು ಅಗೆದು ಹಾಕಲಾಗುತ್ತದೆ. ಮೆಸ್ಕಾಂ, ಗೇಲ್ ಗ್ಯಾಸ್, ಜಲಸಿರಿ ಮೊದಲಾದ ಯೋಜನೆಗಳ ಹೆಸರಿನಲ್ಲಿ ಫುಟ್‌ಪಾತ್ ರಸ್ತೆ ಅಗೆಯುವುದು ನಡೆಯುತ್ತಲೇ ಇದೆ. ಇವರೆಲ್ಲರ ನಡುವೆ ಸಮನ್ವಯ ಸಾಧಿಸಿ, ವ್ಯವಸ್ಥಿತ ಕಾಮಗಾರಿ ನಡೆಸಬೇಕಾದವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಪಾಂಡೇಶ್ವರ, ಕೊಡಿಯಾಲ್‌ಬೈಲ್, ವೆಲೆನ್ಸಿಯಾ, ಬಿಜೈ, ಕಂಕನಾಡಿ ಭಾಗಗಳಲ್ಲಿ ನಿತ್ಯ ಈ ದೃಶ್ಯ ಕಾಣಸಿಗುತ್ತದೆ ಎಂದು ಅವರು ಆರೋಪಿಸುತ್ತಾರೆ.

ಫುಟ್‌ಪಾತ್ ಸಮಸ್ಯೆ ಇರುವಲ್ಲಿ ಪರಿಶೀಲಿಸಿ, ಸರಿಪಡಿಸಲಾಗು ವುದು. ಖಾಸಗಿಯವರು ಜಾಗ ಬಿಟ್ಟುಕೊಡದ ಕಾರಣಕ್ಕೆ ಕೆಲವು ಕಡೆ ಫುಟ್‌ಪಾತ್ ಅನ್ನು ಅರ್ಧಕ್ಕೆ ನಿಲ್ಲಿಸಿದ ಪ್ರಕರಣಗಳು ಇವೆ
ಆನಂದ್ ಸಿ.ಎಲ್., ಪಾಲಿಕೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.