ಮೂಡುಬಿದಿರೆ: ಬಾನಂಗಳದಲ್ಲಿ ಬಣ್ಣಬಣ್ಣದ ಮೋಡಗಳು ಚಿತ್ತಾರ ಬಿಡಿಸುತ್ತಿದ್ದಂತೆ ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಸಂಗೀತ ‘ತ್ರಿಮೂರ್ತಿಗಳು’ ಪ್ರಶಸ್ತಿ ಸಂಭ್ರಮದಲ್ಲಿ ಪುಳಕಗೊಂಡರು.
ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂಟಪದಲ್ಲಿ ನಡೆದ ‘ಆಳ್ವಾಸ್ ವಿರಾಸತ್’ನ ಕೊನೆಯ ದಿನವಾದ ಭಾನುವಾರ ಸಂಜೆ ಪಿಟೀಲು ವಾದಕ ವಿದ್ವಾನ್ ಮೈಸೂರು ಎಂ.ಮಂಜುನಾಥ್, ಬಾನ್ಸುರಿ ಮಾಂತ್ರಿಕ ಧಾರವಾಡದ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಮತ್ತು ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರಿಗೆ ‘ಆಳ್ವಾಸ್ ವಿರಾಸತ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಲು, ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ತಲಾ ₹1 ಲಕ್ಷ ನಗದಿನೊಂದಿಗೆ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನದ ಬೆನ್ನಲ್ಲೇ ಪ್ರತಿ ಕಲಾವಿದರಿಗೆ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಲಾಯಿತು. ನಳಿನಕಾಂತಿ ರಾಗದ ‘ಮನವಿಯಾಳ ಕಿಂ ಚರ’ವನ್ನು ಪಿಟೀಲಿನಲ್ಲಿ ನುಡಿಸಿ ಮೈಸೂರು ಮಂಜುನಾಥ್ ಅವರಿಗೆ ಗೌರವ ಸಲ್ಲಿಸಲಾಯಿತು. ರಾಗ್ ರಂಗ್ ಖ್ಯಾತಿಯ ಅಲ್ಬಂನ ಹಾಡನ್ನು ಕೊಳಲಿನಲ್ಲಿ ನುಡಿಸಿ ಗೋಡ್ಖಿಂಡಿ ಅವರಿಗೆ ಮತ್ತು ಜೈ ಹೋ ಹಾಡಿನ ಝಲಕ್ ನೊಂದಿಗೆ ವಿಜಯ ಪ್ರಕಾಶ್ ಅವರಿಗೆ ಗೌರವ ನೀಡಲಾಯಿತು.
ನಂತರ ಪನ್ನೀರು, ತಿಲಕ, ಪುಷ್ಪಾರ್ಚನೆ, ಆರತಿಯೊಂದಿಗೆ ಆಳ್ವಾಸ್‌ನ ವೈಶಿಷ್ಟ್ಯ ಮೆರೆಯಲಾಯಿತು. ಈ ವೇಳೆ ಕಲಾ ತಂಡ ಆಲಾಪೊಸಿದ ‘ನಾದ ಸರಸ್ವತಿ...’ ಹಾಡು ಜ್ಞಾನಾಮೃತ ಆರತಿಯ ಮೆರುಗು ತುಂಬಿತು.
ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯರು, ಮಣಿಪುರದ ಮಾಜಿ ಸಂಸದ ನಾರಾ ಸಿಂಗ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಉದ್ಯಮಿ ಕೆ.ಶ್ರೀಪತಿ ಭಟ್, ಮುಖಂಡ ಅಭಯಚಂದ್ರ ಜೈನ್ ಇದ್ದರು.
ಹುಚ್ಚು ಮನಸ್ಸು ಅಪಾಯಕಾರಿ: ಪ್ರಾಸ್ತಾವಿಕ ಭಾಷಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅವರು, ‘ಕಲೆಯನ್ನು ಆಸ್ವಾದಿಸಲಾಗದ ಮನಸ್ಸುಗಳು ಅಪಾಯಕಾರಿ. ಕಲಾ ಕಾರ್ಯಕ್ರಮಗಳ ಆಯೋಜನೆಗೆ ಈವೆಂಟ್ ಮ್ಯಾನೇಜರ್ ಅಗತ್ಯ ಇಲ್ಲ. ಸೌಂದರ್ಯ ಪ್ರಜ್ಞೆ ಇರುವವರು ಸಾಕು' ಎಂದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಮೈಸೂರು ಮಂಜುನಾಥ್, ‘ದೇವೇಂದ್ರನೂ ನಾಚುವಂಥ ಕಾರ್ಯಕ್ರಮ ಇದಾಗಿದೆ. ದೇವಲೋಕ ಹೈಜಾಕ್ ಆಗಿದೆ. ಇಂದ್ರನೇ ಬೇಸರ ಮಾಡಿಕೊಳ್ಳುವಂಥ ಪರಿಸರ ಇಲ್ಲಿ ನಿರ್ಮಾಣ’ ಆಗಿದೆ ಎಂದು ಬಣ್ಣಿಸಿದರು.
‘ಆಳ್ವಾಸ್, ಎಲ್ಲ ಒಳ್ಳೆಯ ವಿಚಾರಗಳು ಇರುವ ಸಂಸ್ಥೆಯಾಗಿದ್ದು ವಿರಾಸತ್ ಈಗ ಸಮಾಜಮುಖಿ ಆಗಿರುವುದು ಸಂತೋಷದ ಸಂಗತಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.