ಮಂಗಳೂರು: ಅಕ್ರಮ ಜಾಹೀರಾತು ನೀಡಿ ವಂಚಿಸಿದ ಬಗ್ಗೆ ದೂರು ದಾಖಲಾಗಿದೆ ಎಂದು ನಂಬಿಸಿ ಮುಂಬೈ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ₹ 50 ಲಕ್ಷ ಪಡೆದು ವಂಚಿಸಿದ ಬಗ್ಗೆ ಇಲ್ಲಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಅ.11ರಂದು ಮಧ್ಯಾಹ್ನ3 ಗಂಟೆಗೆ ನನ್ನ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ ವ್ಯಕ್ತಿ ತನ್ನನ್ನು ಮಹಾರಾಷ್ಟ್ರದ ಅಗ್ರಿಪಥ ಪೊಲೀಸ್ ಠಾಣೆಯ ಎಸ್.ಐ ವಿನಯ ಕುಮಾರ್ ಎಂದು ಪರಿಚಯಿಸಿಕೊಂಡಿದ್ದ. ನನ್ನ ಮೊಬೈಲ್‌ನಿಂದ ಅಕ್ರಮ ಜಾಹಿರಾತು ನೀಡಿ ಕಿರುಕುಳ ನೀಡಿದ ಬಗ್ಗೆ ಪ್ರಕರಣದ ದಾಖಲಾಗಿದ್ದು, ವಿಚಾರಣೆಗೆ ಮುಂಬೈಗೆ ಬರುವಂತೆ ತಿಳಿಸಿದ. ಬರಲು ಸಾಧ್ಯವಿಲ್ಲ ಎಂದಾಗ ಮೇಲಾಧಿಕಾರಿಯವರು ಕರೆ ಮಾಡುತ್ತಾರೆ ಎಂದಿದ್ದ.’
‘ನಂತರ ಕರೆ ಮಾಡಿದ ವ್ಯಕ್ತಿ ತನ್ನನ್ನು ಸಿಬಿಐನ ಆಕಾಶ ಕುಲ್ಲಹಾರಿ ಎಂದು ಪರಿಚಯಿಸಿಕೊಂಡ. ನನ್ನ ಮೇಲೆ ಕ್ರಮ ಜಾಹೀರಾತಿನ ಪ್ರಕರಣದ ಜೊತೆ ಇನ್ನೊಂದು ಪ್ರಕರಣ ದಾಖಲಾಗಿದೆ ಎಂದಿದ್ದ. ನರೇಶ್ ಗೋಯೆಲ್ ಎಂಬುವರ ಮನೆ ಜಪ್ತಿ ಮಾಡಿದಾಗ ನನ್ನ ಎಟಿಎಮ್ ಕಾರ್ಡ್ ಸಿಕ್ಕಿದೆ. ಅದರಲ್ಲಿ ಸುಮಾರು 20 ಜನರು ₹ 2 ಕೋಟಿ ಹಣವನ್ನು ಕೆನರಾ ಬ್ಯಾಂಕಿನ ಮುಂಬೈ ಖಾತೆಯಲ್ಲಿ ನನ್ನ ಹೆಸರಿನಲ್ಲಿರುವ ಖಾತೆಯ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ನಿಮ್ಮನ್ನು ಸಿ.ಬಿ.ಐ ಅಧಿಕಾರಿಗಳು ಬಂಧಿಸಲಿದ್ದಾರೆ. ದಾಖಾಲಾತಿಗಳೊಂದಿಗೆ ಸುಪ್ರಿಂ ಕೋರ್ಟ್‌ಗೆ ಹಾಜರಾಗಬೇಕು. ನಿಮಗೆ ಮುಂಬೈಗೆ ಬರಲು ಅಸಾಧ್ಯವಾದರೆ ಆನ್ ಲೈನ್‌ನ ತನಿಖೆಯನ್ನು ಮಾಡುತ್ತೇನೆ ಎಂದಿದ್ದ. ಮರುದಿನ ಮತ್ತೆ ಆತ ಕರೆ ಮಾಡಿ, ಬ್ಯಾಂಕಿನಲ್ಲಿ ನಾನು ಠೇವಣಿ ಇಟ್ಟ ಹಣವ ವಿವರ ಪಡೆದುಕೊಂಡ. ಎಲ್ಲಾ ಹಣವನ್ನು ಆರ್.ಬಿ.ಐ.ಗೆ ವರ್ಗಾಯಿಸುವಂತೆ ತಿಳಿಸಿದ. ನಾನು ₹50 ಲಕ್ಷವನ್ನು ಆತ ಸೂಚಿಸಿದ ಬ್ಯಾಂಕ್‌ಗೆ ಅ.19ರಂದು ವರ್ಗಾಯಿಸಿದ್ದೆ. ಆ ಹಣವನ್ನು ಮೂರು ದಿನಗಳ ನಂತರ ಮರು ಪಾವತಿ ಮಾಡುವುದಾಗಿ ತಿಳಿಸಿದ್ದ. ಆದರೆ ಮಾಡಿರಲಿಲ್ಲ. ಮತ್ತೆ ಕರೆ ಮಾಡಿದಾಗ ಮತ್ತಷ್ಟು ಹಣ ಕಟ್ಟುವಂತೆ ಹೇಳಿದ. ಆಗ ನಾನು ವಂಚನೆಗೆ ಒಳಗಾಗಿರುವುದು ತಿಳಿಯಿತು‘ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.