ಸುಳ್ಯ: 1837ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಸಿ ಅಮರರಾದ ಸ್ವಾತಂತ್ರ್ಯ ಸಮರ ವೀರ, ಸಂಘಟನಾ ಚತುರ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆ ಸೋಮವಾರ ಸುಳ್ಯಕ್ಕೆ ಬಂದಿದ್ದು, ಬಸ್‌ನಿಲ್ದಾಣದ ಬಳಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಸಂಪಾಜೆ ಮಾರ್ಗವಾಗಿ ಬಂದ ಪ್ರತಿಮೆಯನ್ನು ಅರಂತೋಡು, ಪೆರಾಜೆ ಮೊದಲಾದ ಕಡೆಗಳಲ್ಲಿ ಸ್ವಾಗತಿಸಿ, ಸುಳ್ಯ ಪೇಟೆ ಆರಂಭಗೊಳ್ಳುವ ಉಬರಡ್ಕ ಕ್ರಾಸ್‌ನ ಬಳಿ ಸಾವಿರಾರು ಮಂದಿ ಭವ್ಯ ಸ್ವಾಗತ ಕೋರಿದರು.
ಮಹಿಳೆಯರು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಿದರೆ, ಕೆದಂಬಾಡಿ ಕುಟುಂಬಸ್ಥರು, ಗೌಡ ಯುವ ಸೇವಾ ಸಂಘದ ಪದಾಧಿಕಾರಿಗಳು ಪುಷ್ಪಾರ್ಚನೆಯೊಂದಿಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪುತ್ಥಳಿ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಮತ್ತು ಕಾರ್ಯದರ್ಶಿಯವರಿಗೆ ಕೆದಂಬಾಡಿ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು.
ಅಲ್ಲಿಂದ ಮೆರವಣಿಗೆಯ ಮೂಲಕ ಸಾವಿರಾರು ಮಂದಿ ಖಾಸಗಿ ಬಸ್ ನಿಲ್ದಾಣದ ಬಳಿಗೆ ರಾಮಯ್ಯ ಗೌಡರ ಪುತ್ಥಳಿಯೊಂದಿಗೆ ಬಂದರು. ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಪುಷ್ಪಾರ್ಚನೆ ಮಾಡಿ ಕಂಚಿನ ಪ್ರತಿಮೆಯನ್ನು ಸ್ವಾಗತಿಸಿದರು.
ಸಚಿವರಾದ ಎಸ್.ಅಂಗಾರ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ., ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಹಶೀಲ್ದಾರ್ ಅನಿತಾಲಕ್ಷ್ಮಿ, ಅನೇಕ ಗಣ್ಯರು ಇದ್ದರು.
ಸ್ವಾತಂತ್ರ್ಯ ಹೋರಾಟದ ದ್ಯೋತಕವಾಗಿ ಕೇಸರಿ, ಬಿಳಿ, ಹಸಿರು ಬಣ್ಣದ ಬಲೂನ್‌ಗಳನ್ನು ಮೂರು ಧರ್ಮಗಳ ಧರ್ಮಗುರುಗಳು ಆಕಾಶಕ್ಕೆ ಹಾರಿಸಿದರು. ಶಾಂತಿಯ ಸಂಕೇತವಾದ ಬಿಳಿ ಪಾರಿವಾಳಗಳನ್ನು ಆಕಾಶಕ್ಕೆ ಹಾರಿಬಿಡಲಾಯಿತು. ಕಂಚಿನ ಪ್ರತಿಮೆಗೆ ಕೂಜುಗೋಡು ಕುಟುಂಬದ ಪರವಾಗಿ ಬೃಹತ್ ಹೂವಿನ ಹಾರ ಹಾಕಲಾಯಿತು.
ಕಂಚಿನ ಪ್ರತಿಮೆ ಬರುವುದಕ್ಕೂ ಮುನ್ನ ಸುಳ್ಯದ ಎನ್ನೆಂಸಿಯ ವಿದ್ಯಾರ್ಥಿಗಳು ಲೋಕೇಶ್ ಊರುಬೈಲು ನಿರ್ದೇಶನದ ‘ಅಮರ ಸುಳ್ಯದ ಸ್ವಾತಂತ್ರ್ಯ ಸಮರ 1837’ ನಾಟಕ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.