ADVERTISEMENT

ಗೇಲ್‌: 8 ವರ್ಷದಲ್ಲಿ 100 ಸಿಎನ್‌ಜಿ ಸ್ಟೇಷನ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 14:15 IST
Last Updated 6 ಅಕ್ಟೋಬರ್ 2023, 14:15 IST
ಮಂಗಳೂರಿನ ಸಿಎನ್‌ಜಿ ಪಂಪ್‌
ಮಂಗಳೂರಿನ ಸಿಎನ್‌ಜಿ ಪಂಪ್‌   

ಮಂಗಳೂರು: ನಗರದಲ್ಲಿ ಅಡುಗೆ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಅಗತ್ಯಕ್ಕೆ ಅನಿಲ ಸರಬರಾಜು ಮಾಡುತ್ತಿರುವ ಗೇಲ್‌ ಗ್ಯಾಸ್‌ ಕಂಪನಿಯು ಎಂಟು ವರ್ಷಗಳಲ್ಲಿ ಜಿಲ್ಲೆಯಾದ್ಯಂತ 100 ಸಿಎನ್‌ಜಿ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ. ಪುತ್ತೂರು, ಸುಳ್ಯ ಮತ್ತು ನೆಲ್ಯಾಡಿಯಲ್ಲಿ ಶೀಘ್ರದಲ್ಲೇ ಘಟಕಗಳು ಆರಂಭವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ಮನೆ ಮನೆಗೆ ಕೊಳವೆ ಮೂಲಕ ಅಡುಗೆ ಅನಿಲ ತಲುಪಿಸುವ ಪಿಎನ್‌ಜಿ (ಪೈಪ್ಡ್‌ ನ್ಯಾಚುರಲ್ ಗ್ಯಾಸ್) ಸೌಲಭ್ಯಕ್ಕೆ ಜಿಲ್ಲೆಯಲ್ಲಿ ಉತ್ತಮ ಬೇಡಿಕೆ ಇದ್ದು ವಸತಿ ಸಮುಚ್ಛಯ, ಫ್ಲ್ಯಾಟ್‌, ಅಪಾರ್ಟ್‌ಮೆಂಟ್‌ ಮತ್ತು ಒಂಟಿ ಮನೆಗಳಿಗಾಗಿ 1 ಲಕ್ಷದ 10 ಸಾವಿರ ಅರ್ಜಿಗಳು ಬಂದಿವೆ. ಭವಿಷ್ಯದಲ್ಲಿ 3 ಲಕ್ಷದ 50 ಸಾವಿರ ಮನೆಗಳಿಗೆ ಈ ಸೌಲಭ್ಯ ಸಿಗಲಿದೆ. ಆರಂಭಿಕ ಘಟ್ಟದಲ್ಲಿ ಸುರತ್ಕಲ್‌, ಮುಕ್ಕ, ಮೂಲ್ಕಿ, ಕುಳಾಯಿ ಮತ್ತು ಬೊಂದೆಲ್‌ನಲ್ಲಿ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.

ಹೋಟೆಲ್ ಮತ್ತು ರೆಸ್ಟಾರೆಂಟ್ ಸೇರಿ 40 ಕೈಗಾರಿಕೆ ಮತ್ತು 124 ವಾಣಿಜ್ಯ ಸಂಸ್ಥೆಗಳಿಗೆ ಪಿಎನ್‌ಜಿ ಸೌಲಭ್ಯವನ್ನು ನೀಡುವ ಸಂಬಂಧ ಒಪ್ಪಂದವಾಗಿದೆ. ಸಿಎನ್‌ಜಿ (ಕಂಪ್ರೆಸ್ಡ್‌ ನ್ಯಾಚುರಲ್ ಗ್ಯಾಸ್‌) ಘಟಕಗಳ ಮೂಲಕ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು ಮತ್ತು ಸುಳ್ಯದಲ್ಲಿ ಅನಿಲ ಸರಬರಾಜು ಮಾಡಲಾಗುತ್ತಿದೆ. ಬೈಕಂಪಾಡಿಯ ಎನ್‌ಎಂಪಿಎ ಕಾಲೊನಿ ಮತ್ತು ಕೆಐಎಡಿಬಿ ಕಾಲೊನಿಯ 72 ಮನೆಗಳಿಗೆ ಪಿಎನ್‌ಜಿ ಸಂಪರ್ಕ ಕಲ್ಪಿಸಲಾಗಿದೆ. ‍ಪಿಎನ್‌ಜಿ ಮಿತ್ರ ಆ್ಯಪ್‌ನಲ್ಲಿ ಈ ಸೌಲಭ್ಯದ ಕುರಿತು ಮಾಹಿತಿ ಇದೆ ಎಂದು ವಿವರಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.