ಬಂಟ್ವಾಳ (ದಕ್ಷಿಣ ಕನ್ನಡ): ಇಲ್ಲಿನ ಕಲ್ಲಡ್ಕ ಸಮೀಪದ ಬೋಳಂತೂರು ತುಳಸೀವನ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ ವತಿಯಿಂದ ಶನಿವಾರ ನಡೆದ 41ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ವೇಳೆ ಸಿಹಿ ತಿಂಡಿ ಮತ್ತು ಪಾನೀಯ ನೀಡದಂತೆ ಸಂಘಟಕರು ಮಸೀದಿಗೆ ಬರೆದ ಪತ್ರ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.
‘ಕಳೆದ ವರ್ಷ ಮೆರವಣಿಗೆ ವೇಳೆ ನಿಮ್ಮ ಸಮಾಜ ಬಾಂಧವರು ನೀಡಿದ್ದ ಸಿಹಿ ತಿಂಡಿ ಮತ್ತು ಪಾನೀಯ ಸೇವಿಸಿ ಕೆಲವು ಮಕ್ಕಳು ಅಸ್ವಸ್ಥಗೊಂಡಿದ್ದರು. ಇದರಿಂದ ನಮ್ಮ ನಡುವಿನ ಸಾಮರಸ್ಯ ಕೆಡುವ ಆತಂಕ ಇದ್ದು, ಇನ್ನು ಮುಂದೆ ಶೋಭಾಯಾತ್ರೆ ವೇಳೆ ಯಾವುದೇ ಸಿಹಿ ತಿಂಡಿ ಮತ್ತು ಪಾನೀಯ ನೀಡದಂತೆ ಮುಂಜಾಗ್ರತಾ ಕ್ರಮವಾಗಿ ವಿನಂತಿಸುತ್ತಿದ್ದೇವೆ. ಈ ಮನವಿಗೆ ಸಂಬಂಧಿಸಿ ನಿಮ್ಮ ಎಲ್ಲ ಸಮಾಜ ಬಾಂಧವರು ಸಹಕರಿಸಬೇಕಾಗಿ ಮನವಿ ಮಾಡುತ್ತಿದ್ದೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಿದ್ಧಿವಿನಾಯಕ ಮಂದಿರ ಆಡಳಿತ ಸಮಿತಿ ಅಧ್ಯಕ್ಷ ಮುತ್ತಪ್ಪ, ‘ಗಣೇಶ ಚತುರ್ಥಿಯಂದು ತುಳಸೀವನ ಭಜನಾ ಮಂದಿರದಲ್ಲಿ ಪ್ರತಿಷ್ಠಾಪಿಸುವ ಗಣೇಶ ವಿಗ್ರಹವನ್ನು 2 ಕಿ.ಮೀ. ಶೋಭಾಯಾತ್ರೆ ನಡೆಸಿ, ಬೀರುಕೋಡಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಎರಡು ವರ್ಷಗಳಿಂದ ಮೆರವಣಿಗೆ ಹಾದುಹೋಗುವ ಎರಡು ಮಸೀದಿಗಳ ಎದುರು ಮುಸ್ಲಿಂ ಸಮುದಾಯದವರು ಸಿಹಿ ತಿಂಡಿ, ಪಾನೀಯ ವಿತರಿಸುತ್ತಿದ್ದರು. ಈ ಊರಿನಲ್ಲಿ ಎಲ್ಲರೂ ಅನ್ಯೋನ್ಯವಾಗಿದ್ದು, ಭವಿಷ್ಯದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಬರಬಾರದು ಎಂದು ಪತ್ರ ಬರೆದು ಮಸೀದಿಗೆ ವಿನಂತಿಸಲಾಗಿತ್ತು. ಎರಡೂ ಮಸೀದಿಗಳ ಅಧ್ಯಕ್ಷರು ಸಹಮತ ವ್ಯಕ್ತಪಡಿಸಿ, ಈ ಬಾರಿ ಸಿಹಿ ತಿಂಡಿ, ಪಾನೀಯ ವಿತರಣೆ ಮಾಡಿಲ್ಲ. ಹೀಗಿರುವಾಗ, ಜನರ ನಡುವಿನ ಸೌಹಾರ್ದ ಸಂಬಂಧ ಕೆಡಿಸಲು ಹೊರಗಿನವರು ಈ ಪತ್ರವನ್ನು ದುರ್ಬಳಕೆ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಬೋಳಂತೂರಿನಲ್ಲಿ ಎಲ್ಲ ಸಮುದಾಯದವರು ಅನ್ಯೋನ್ಯವಾಗಿದ್ದೇವೆ. 40 ವರ್ಷಗಳಿಂದ ಸಾಮರಸ್ಯಕ್ಕೆ ಧಕ್ಕೆಯಾಗಿಲ್ಲ. ಭವಿಷ್ಯದಲ್ಲಿ ಸಾಮರಸ್ಯ ಕೆಡದಂತೆ ಮುಂಜಾಗ್ರತಾ ಕ್ರಮವಾಗಿ ಅವರು ಬರೆದ ಪತ್ರವನ್ನು ಕಿಡಿಗೇಡಿಗಳು ಬಳಸಿಕೊಂಡು ಅಪಪ್ರಚಾರ ನಡೆಸುತ್ತಿರುವುದು ಬೇಸರ ತಂದಿದೆ’ ಎಂದು ತುಳಸೀವನ ರೆಹಮಾನಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎಂ.ಇಬ್ರಾಹಿಂ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.