ಮಂಗಳೂರು: ನಗರದ ಪದವಿ ಪೂರ್ವ ಕಾಲೇಜೊಂದರ ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗುವುದಕ್ಕೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದೇ ಕಾರಣ ಎಂದು ಗೊತ್ತಾಗಿದೆ.
ಮೇರಿಹಿಲ್‌ನಲ್ಲಿರುವ ಕಾಲೇಜಿನ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರು ದಕ್ಷಿಣ ಎಸಿಪಿ ದಿನಕರ ಶೆಟ್ಟಿ ನೇತೃತ್ವದ ಪೊಲೀಸರ ತಂಡವು ಚೆನ್ನೈಗೆ ತೆರಳಿ, ವಿದ್ಯಾರ್ಥಿನಿಯರನ್ನು ಅವರ ಪೋಷಕರ ಜೊತೆ ಮಂಗಳೂರಿಗೆ ಕರೆ ತಂದಿದೆ.
‘ಮೂವರು ವಿದ್ಯಾರ್ಥಿನಿಯರಲ್ಲಿ ಒಬ್ಬರ ಪೋಷಕರು ಚೆನ್ನೈನ ನಿವಾಸಿ. ಕಡಿಮೆ ಅಂಕ ಬಂದ ಕಾರಣಕ್ಕೆ ನೊಂದು ಕಾಲೇಜು ತೊರೆಯಲು ಬಯಸಿದ್ದ ವಿದ್ಯಾರ್ಥಿನಿಯರು ಚೆನ್ಬೈಗೆ ತೆರಳಲು ನಿರ್ಧರಿಸಿದ್ದರು. ಎಲ್ಲಿಯೂ ಉಳಿದುಕೊಳ್ಳದೇ ಬಸ್ ಹಾಗೂ ರೈಲಿನ ಮೂಲಕ ಪ್ರಯಾಣಿಸಿದ್ದರು. ಒಂದು ದಿನ ಪ್ರಯಾಣದಲ್ಲಿ ಕಳೆದ ಬಳಿಕ ಅವರಿಗೆ ತಪ್ಪಿನ ಅರಿವಾಗಿತ್ತು. ಪೋಷಕರನ್ನು ಸಂಪರ್ಕಿಸಲು ಅವರ ಬಳಿ ಮೊಬೈಲ್ ಕೂಡ ಇರಲಿಲ್ಲ. ಯಾವುದಾದರೂ ಪೊಲೀಸ್ ಠಾಣೆಗೆ ತಲುಪಿಸುವಂತೆ ಚೆನ್ನೈನ ಆಟೊರಿಕ್ಷಾ ಚಾಲಕರೊಬ್ಬರ ಬಳಿ ಕೇಳಿಕೊಂಡಿದ್ದರು. ಪೊಲೀಸ್ ಠಾಣೆಗೆ ತಲುಪಿದ ಬಳಿಕ ಪೋಷಕರನ್ನು ಸಂಪರ್ಕಿಸಿದ್ದರು. ಅಷ್ಟರಲ್ಲಾಗಲೇ ಚೆನ್ನೈ ತಲುಪಿದ್ದ ಪೊಲೀಸರ ತಂಡವೂ ಅಲ್ಲಿನ ಠಾಣೆಯ ಪೊಲೀಸರನ್ನು ಸಂಪರ್ಕಿಸಿತ್ತು. ಅಲ್ಲಿಗೆ ಪೋಷಕರನ್ನು ಕರೆಸಿಕೊಂಡ ಪೊಲೀಸರು ವಿದ್ಯಾರ್ಥಿನಿಯರನ್ನು ನಗರಕ್ಕೆ ಶುಕ್ರವಾರ ರಾತ್ರಿ ಕರೆತಂದಿದ್ದಾರೆ’ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.