ADVERTISEMENT

ಬಿಜೆಪಿಯಲ್ಲೂ ಹೆಚ್ಚುತ್ತಿದೆ ಕಾಂಗ್ರೆಸ್‌ನ ಗಾಡ್‌ ಫಾದರ್‌ ಸಂಸ್ಕೃತಿ: ಆರೋಪ

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್‌ ಆರೋಪ

​ಪ್ರಜಾವಾಣಿ ವಾರ್ತೆ
Published 18 ಮೇ 2024, 14:11 IST
Last Updated 18 ಮೇ 2024, 14:11 IST
ಕೆ.ರಘುಪತಿ ಭಟ್ 
ಕೆ.ರಘುಪತಿ ಭಟ್    

ಮಂಗಳೂರು: ‘ಕಾಂಗ್ರೆಸ್‌ನಲ್ಲಿದ್ದ ಗಾಡ್‌ ಫಾದರ್‌ ಸಂಸ್ಕೃತಿ ಈಗ ಬಿಜೆಪಿಯಲ್ಲೂ ವ್ಯಾಪಿಸಿದೆ. ನಾಯಕರನ್ನು ಓಲೈಸಿದರೆ ಮಾತ್ರ ಕೆಲಸ ಆಗುತ್ತದೆ. ಪಕ್ಷಕ್ಕಾಗಿ ದುಡಿಯುವವರಿಗೆ ಬಿಜೆಪಿಯಲ್ಲೂ ಮನ್ನಣೆ ಸಿಗುತ್ತಿಲ್ಲ’ ಎಂದು ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ. ರಘುಪತಿ ಭಟ್‌ ಬೇಸರ ವ್ಯಕ್ತಪಡಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬಿಜೆಪಿಯ ರಾಜ್ಯ ಮಟ್ಟದ ನಾಯಕರಿಂದ ಕರಾವಳಿಯ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಕರಾವಳಿ ಜಿಲ್ಲೆಯ ಮತದಾರರು ಏನಿದ್ದರೂ ಬಿಜೆಪಿಗೇ ಮತ ನೀಡುತ್ತಾರೆ ಎಂದು ಭಾವಿಸಿರುವ ಪಕ್ಷದ ಕೆಲ ಮುಖಂಡರು ಇಲ್ಲಿನ ನಾಯಕರನ್ನು ತುಳಿಯುತ್ತಿದ್ದಾರೆ. ಈ ಧೋರಣೆ ವಿರುದ್ಧ ಧ್ವನಿ ಎತ್ತಲು ನಾನು ಈ ಸಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಗೆಲ್ಲುವ ಭರವಸೆಯಿಂದಲೇ ಕಣಕ್ಕಿಳಿದಿದ್ದೇನೆಯೇ ಹೊರತು ಯಾರನ್ನೋ ಸೋಲಿಸಲು ಅಲ್ಲ’ ಎಂದರು.

‘ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 38 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಶಾಸಕನಾಗಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ಅರಿವಿದೆ. ಈ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಬಳಕೆ ಆಗುವುದಿಲ್ಲ. ಅಭ್ಯರ್ಥಿಯ ಹೆಸರಿನ ಮುಂದೆ ಸಂಖ್ಯೆ ಉಲ್ಲೇಖಿಸಿ ಮತ ಚಲಾಯಿಸಲಾಗುತ್ತದೆ. ಹಾಗಾಗಿ ನಾನು ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.