ADVERTISEMENT

ದೇವರ ಗುಡ್ಡೆ: ನಾಳೆ ಉಳುಮೆ, ಬಿತ್ತನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:24 IST
Last Updated 10 ಜುಲೈ 2024, 14:24 IST
ಸೂರ್ಯನಾರಾಯಣ ದೇವಸ್ಥಾನ
ಸೂರ್ಯನಾರಾಯಣ ದೇವಸ್ಥಾನ   

ಬಜಪೆ: ಬಾಲಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ಮಳಲಿ (ಮಣೇಲ್) ದೇವರಗುಡ್ಡೆ ಸೂರ್ಯನಾರಾಯಣ ಹಾಗೂ ಪರಿವಾರ ದೇವರ ಗರ್ಭಗುಡಿ ನಿರ್ಮಾಣದ ಪೂರ್ವಭಾವಿಯಾಗಿ ಜುಲೈ 12ರಂದು ಗಣಪತಿ ಹೋಮ, ಪ್ರಾರ್ಥನೆ, ಪುಣ್ಯಾಹ ಹಾಗೂ ಭೂಮಿಯನ್ನು ಉಳುಮೆ ಮಾಡಿ ಧಾನ್ಯಗಳ ಬಿತ್ತನೆ ಕಾರ್ಯಗಳು ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿವೆ.

ದೇವಸ್ಥಾನ ಇದ್ದ  ವಠಾರವನ್ನು ಈಗಾಗಲೇ ಸಮತಟ್ಟುಗೊಳಿಸಲಾಗಿದ್ದು, ಧಾರ್ಮಿಕ ವಿಧಾನಗಳನ್ನು ಕೈಗೊಂಡು ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಪುರಾತನ ಕೆರೆ ಶೋಧನೆ ನಡೆಸಲಾಗಿದೆ. ಗರ್ಭಗುಡಿ ಹಾಗೂ ಸುತ್ತು ಪೌಳಿಯ ಸೂಕ್ತ ಜಾಗವನ್ನು ವಾಸ್ತು ತಜ್ಞರು  ಗುರುತಿಸಿದ್ದಾರೆ. ಗರ್ಭಗುಡಿ ನಿರ್ಮಾಣದ ಪೂರ್ವಭಾವಿಯಾಗಿ ಶುಕ್ರವಾರ ಹಲವು ಧಾರ್ಮಿಕ ವಿಧಿಗಳು ನಡೆಯಲಿವೆ.

ಅಂದು ಎರಡು ಹೋರಿಗಳಿಗೆ ನೊಗ- ನೇಗಿಲು ಕಟ್ಟಿ ಪೂಜೆ ಮಾಡಿ, ಗರ್ಭ ಗುಡಿಯ ಜಾಗವನ್ನು ಉಳುಮೆ ಮಾಡಲಾಗುತ್ತದೆ. ಹಸನು ಮಾಡಿದ ನೆಲದಲ್ಲಿ ಹೆಸರು, ಎಳ್ಳು, ಹುರುಳಿ ಹಾಗೂ ರಕ್ಷೆಗಾಗಿ ಸಾಸಿವೆ ಬೀಜಗಳನ್ನು ಬಿತ್ತನೆ ಮಾಡಲಾಗುತ್ತದೆ.

ADVERTISEMENT

ಕೆಲವು ತಿಂಗಳ ನಂತರ ಇದರಲ್ಲಿ ಬರುವ ಫಸಲನ್ನು ಗೋವುಗಳಿಗೆ ಗೋಗ್ರಾಸ ಕೊಟ್ಟು, ದೇವರು ಹಾಗೂ ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿ, ಇದೇ ಫಸಲಿನಿಂದ ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಆನಂತರ ಭೂಮಿಯನ್ನು ಸುಮಾರು ಐದಡಿಯಷ್ಟು ಆಳ ಅಗೆದು ಗರ್ಭಗುಡಿಯ ಕಾರ್ಯಗಳನ್ನು ಆರಂಭಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.