ADVERTISEMENT

ಮಂಗಳೂರು | ‘ಗೋಕುಲ’ದ ಗೋವುಗಳಿಗೆ ಸಂಗೀತಾಮೃತ

ವಿಷ್ಣುಪ್ರಸಾದ್, ನಾಗರತ್ನಾ ದಂಪತಿ ಸ್ಥಾಪಿಸಿದ ಗೋಶಾಲೆ: ಪ್ರತಿ ತಿಂಗಳೂ ಕಾರ್ಯಕ್ರಮ

ವಿಕ್ರಂ ಕಾಂತಿಕೆರೆ
Published 27 ಅಕ್ಟೋಬರ್ 2024, 5:37 IST
Last Updated 27 ಅಕ್ಟೋಬರ್ 2024, 5:37 IST
ಗೋಕುಲಂ ಗೋಶಾಲೆಯ ಪಾರ್ಶ್ವನೋಟ
ಗೋಕುಲಂ ಗೋಶಾಲೆಯ ಪಾರ್ಶ್ವನೋಟ   

ಮಂಗಳೂರು: ಜಯಂತಶ್ರೀ ರಾಗದಲ್ಲಿ ರಾಮನನ್ನು ಕೊಂಡಾಡುವ ತ್ಯಾಗರಾಜರ ‘ಮರುಗೇಲರಾ..’ ಇರಲಿ, ಖಮಾಸ್‌ ರಾಗದಲ್ಲಿ ಶ್ರೀಕೃಷ್ಣನನ್ನು ಆರಾಧಿಸುವ ಮುತ್ತುಸ್ವಾಮಿ ದೀಕ್ಷಿತರ ‘ಶ್ರೀ ಸಂತಾನಂ ಗೋಪಾಲಕೃಷ್ಣಂ ಉಪಾಸ್ಮಯೇ...’ ಕೇಳಲಿ, ಹಂಸಧ್ವನಿ ರಾಗದಲ್ಲಿ ಗಣಪತಿಯನ್ನು ಸ್ತುತಿಸುವ ದೀಕ್ಷಿತರ ‘ವಾತಾಪಿ ಗಣಪತಿಂ ಭಜೇಹಂ..’ ಮೊಳಗಲಿ, ‘ಗೋಕುಲ’ದ ಗೋವುಗಳು ತಲೆದೂಗುತ್ತವೆ, ಸಂಭ್ರಮಿಸುತ್ತವೆ.

ಕರ್ನಾಟಕ ಸಂಗೀತದ ಭಕ್ತಿಭಾವ, ದೀರ್ಘ ಆಲಾಪದ ಹಿನ್ನೆಲೆಯ ಹಿಂದುಸ್ತಾನಿ ಸಂಗೀತದ ಬಂದಿಶ್‌, ಚೀಸ್‌ಗಳು; ವೀಣೆ, ಕೊಳಲು, ಸಿತಾರ್‌, ಸಂತೂರ್‌, ವಯಲಿನ್‌ನ ಮಧುರನಾದ, ಘಟಂ, ಮೋರ್ಸಿಂಗ್‌, ಖಂಜೀರ, ತಬಲಾ, ಪಖಾವಾಜ್‌ ಮುಂತಾದ ಪಕ್ಕವಾದ್ಯ–ಸಾಥಿ ವಾದ್ಯಗಳ ಮಾಧುರ್ಯ ಎಲ್ಲವೂ ಈ ಗೋವುಗಳಿಗೆ ಅಪ್ಯಾಯಮಾನ.

ಕಾಸರಗೋಡು ಜಿಲ್ಲೆ ಪೆರಿಯದ ಬೇಕಲ್ ಗೋಕುಲಂ ಗೋಶಾಲೆಯಲ್ಲಿ ನಾಲ್ಕು ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ನಡೆಯುವ ‘ಪರಂಪರಾ’ ಸಂಗೀತೋತ್ಸವ ಸಹೃದಯರಿಗೆ ರಸ ರೋಮಾಂಚನ ನೀಡಿದರೆ, ಗೋವುಗಳಿಗೆ ಅಮೃತ ಉಣಿಸುತ್ತಿದೆ. 

ADVERTISEMENT

ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕರ್ಕಿಯಿಂದ ಮದುವೆಯಾಗಿ ಬಂದಿರುವ ಕೆಮಿಕಲ್ ಬಯಾಲಜಿ ಪದವೀಧರೆ ನಾಗರತ್ನಾ ಮತ್ತು ಜ್ಯೋತಿಷಿ, ಕಾಸರಗೋಡಿನ ವಿಷ್ಣುಪ್ರಸಾದ್ ಹೆಬ್ಬಾರ್ ಅವರ ಕಸಸಿನ ಕೂಸು ಬೇಕಲ್ ಗೋಕುಲಂ ಗೋಶಾಲೆ. 2017ರಲ್ಲಿ ಈ ದಂಪತಿ ನಿರ್ಮಿಸಿದ ಗೋಶಾಲೆಯಲ್ಲಿ ಈಗ ದೇಶದ ವಿವಿಧ ಭಾಗಗಳ ಕಾಸರಗೋಡು ಗಿಡ್ಡ, ವೆಚ್ಚೂರ್, ಮಲೆನಾಡ ಗಿಡ್ಡ, ಕಾಂಗೇಯಂ, ಹಳ್ಳಿಕಾರ್, ಬರಗೂರು, ಓಂಗೋಲ್, ಗಿರ್, ಕಾಂಗ್ರೆಸ್ ತಳಿಯ 225 ಗೋವುಗಳು ಇವೆ. ಇವುಗಳಿಗೆ ಸಮೀಪದಲ್ಲೇ ‘ಪರಂಪರಾ ವಿದ್ಯಾಪೀಠ’ವೂ ಇದೆ. ಇಲ್ಲಿ ಸಂಗೀತ ಮತ್ತು ನೃತ್ಯ ಸೇರಿದಂತೆ ವಿವಿಧ ಪ್ರದರ್ಶಕ ಕಲೆಗಳ ತರಬೇತಿ ನೀಡಲಾಗುತ್ತದೆ. ಗೋವುಗಳಿಗೆ ಸಂಗೀತದ ಸ್ವಾದ ನೀಡಲು ತಿಂಗಳಿಗೊಂದು ಕಾರ್ಯಕ್ರಮ ನಡೆಯುತ್ತದೆ. ದೀಪಾವಳಿ ಸಂದರ್ಭದಲ್ಲಿ ಸಂಗೀತ, ಮಾರ್ಚ್‌ನಲ್ಲಿ ನೃತ್ಯ ಕಾರ್ಯಕ್ರಮಗಳು ಇರುತ್ತವೆ. 

ಗೋಶಾಲೆ ನಡುವೆ ಕಲಾ ಕಾರ್ಯಕ್ರಮ

ತಿಂಗಳ ಸಂಗೀತ ಕಾರ್ಯಕ್ರಮ, ವಾರ್ಷಿಕ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಗೋಶಾಲೆಯ ಮಧ್ಯದಲ್ಲೇ ನಡೆಯುತ್ತದೆ. ಇಲ್ಲಿ ಗೋವುಗಳಿಗೆ ಕೃತಕ ಆಹಾರ ನೀಡುವುದಿಲ್ಲ. ಗೋಶಾಲೆಯನ್ನು ಯತೇಚ್ಛ ಗಾಳಿ ಮತ್ತು ಬೆಳಕು ಸಿಗುವಂತೆ ನಿರ್ಮಿಸಲಾಗಿದೆ. ದಿನಕ್ಕೊಮ್ಮೆ ವಿಶಾಲ ಹುಲ್ಲುಗಾವಲಿನಲ್ಲಿ ಮೇಯುವ ಅವಕಾಶವುಂಟು. ಇದೆಲ್ಲದರ ಜೊತೆಯಲ್ಲಿ ಗೀತಾಮೃತವೂ ಲಭ್ಯ. ಸಂಗೀತ ಆಸ್ವಾದಿಸಲು ಆರಂಭಿಸಿದ ನಂತರ ಗೋವುಗಳಿಗೆ ಅನಾರೋಗ್ಯ ಕಾಡಲಿಲ್ಲ, ಹಾಲು ಉತ್ಪಾದನೆ ಹೆಚ್ಚಳವಾಗಿದೆ ಎಂದು ನಾಗರತ್ನಾ ಹೇಳಿದರು.

‘ಗೋವುಗಳ ಪಾಲನೆಗೆಂದೇ 15 ಮಂದಿ ಕೆಲಸಕ್ಕೆ ಇದ್ದಾರೆ. ಪಂಚಗವ್ಯ ಸೇರಿದಂತೆ 30ರಿಂದ 40 ಉತ್ಪನ್ನಗಳನ್ನು ಇಲ್ಲೇ ತಯಾರಿಸುತ್ತಿದ್ದು ಮಾರಾಟದ ವ್ಯವಸ್ಥೆಯೂ ಇದೆ. ಗೋವು ಎಂದರೆ ಹಾಲು ನೀಡುವ ಪ್ರಾಣಿ ಎಂದಷ್ಟೇ ಸಾಮಾನ್ಯವಾಗಿ ಜನರ ಕಲ್ಪನೆ. ಆದರೆ ಅದರ ಎಲ್ಲ ಉತ್ಪನ್ನಗಳಲ್ಲೂ ಔಷಧೀಯ ಗುಣಗಳು ಇವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಬೆಣ್ಣೆ, ತುಪ್ಪ, ಸೆಗಣಿ ಮಾತ್ರವಲ್ಲ, ಸೋಪ್‌, ನೋವು ನಿವಾರಕ ಔಷಧಿಯೂ ಇಲ್ಲಿ ತಯಾರಾಗುತ್ತದೆ. ಮೈಗ್ರೇನ್‌ಗೆ ನಾವು ಕೊಡುವ ಔಷಧಿ ಅತ್ಯಂತ ಪರಿಣಾಮಕಾರಿಯಾಗಿದೆ’ ಎಂದು ಅವರು ತಿಳಿಸಿದರು.  

ಪತಿಯನ್ನು ಕಟ್ಟಿಹಾಕಿದ ಸಂಗೀತ

‘ವಿಷ್ಣು ಪ್ರಸಾದ್ ಅವರು ಸದಾ ಬ್ಯುಸಿ. ಜ್ಯೋತಿಷ ಮತ್ತಿತರ ಕೆಲಸಗಳಿಗಾಗಿ ಮನೆಯಿಂದ ಹೊರಗೆ, ಪರವೂರಲ್ಲಿ ಇರುವುದೇ ಹೆಚ್ಚು. ಅವರನ್ನು ದೀಪಾವಳಿ ಸಂದರ್ಭದಲ್ಲಾದರೂ ಮನೆಯಲ್ಲಿ ಇರಿಸಲು ಉಪಾಯ ಹುಡುಕುತ್ತಿದ್ದಾಗ ಹೊಳೆದದ್ದು ಸಂಗೀತ ಕಾರ್ಯಕ್ರಮದ ಪರಿಕಲ್ಪನೆ. ಅವರಿಗೆ ಸಂಗೀತ ಎಂದರೆ ತುಂಬ ಇಷ್ಟ. ಆದ್ದರಿಂದ ಗೀತಗೋಷ್ಠಿ ನಡೆಸಲು ನಿರ್ಧರಿಸಿದೆವು. ಮೊದಲ ಎರಡು ವರ್ಷ ಒಂದು ವಾರದ ಕಾರ್ಯಕ್ರಮ ಮಾಡಿದೆವು. ಮೂರನೇ ವರ್ಷ 10 ದಿನಗಳಿಗೆ ವಿಸ್ತರಣೆ ಆಯಿತು. ಈ ವರ್ಷವೂ 10 ದಿನಗಳ ಕಾರ್ಯಕ್ರಮ ಇದೆ’ ಎಂದು ನಾಗರತ್ನಾ ತಿಳಿಸಿದರು.

ಕರ್ಕಿಯಲ್ಲಿ ಹೈಸ್ಕೂಲ್ ಓದಿದ ನಾಗರತ್ನಾ ಹೊನ್ನಾವರದ ಎಸ್‌ಡಿಎಂನಲ್ಲಿ ಬಿಎಸ್‌ಸಿ ಮತ್ತು ಧಾರವಾಡ ವಿವಿಯಲ್ಲಿ ಎಂಎಸ್‌ಸಿ ಮಾಡಿ ಪೋಷಕಯುಕ್ತ ಉತ್ಪನ್ನಗಳ ಮೂಲಕ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಜೀನ್‌ಗಳ ಚಟುವಟಿಕೆ ಕುರಿತು ಇಂಗ್ಲೆಂಡ್‌ನಲ್ಲಿ ಸಂಶೋಧನೆ ನಡೆಸಿದ್ದಾರೆ. ಊರಿಗೆ ಮರಳಿದ ನಂತರ ಮದುವೆಯಾಯಿತು. ಗೋವುಗಳ ಉತ್ಪನ್ನ ತಯಾರಿಸುವುದಕ್ಕಾಗಿ ಆಯುರ್ವೇದ ಔಷಧ ಪದ್ಧತಿಯನ್ನೂ ಅಭ್ಯಾಸ ಮಾಡಿದ್ದಾರೆ.

ಪುಟಾಣಿ ಕಲಾವಿದೆ ಗಂಗಾ ಶಶಿಧರನ್ ಅವರಿಂದ ಗೋಶಾಲೆಯಲ್ಲಿ ವಯಲಿನ್ ಮೋಡಿ
ಉಷಾ ಭಟ್ ಗಾಯನ
ಗೋವುಗಳ ಆರೈಕೆಯಲ್ಲಿ ವಿಷ್ಣುಪ್ರಸಾದ್ ಮತ್ತು ನಾಗರತ್ನಾ
ಎಲ್ಲ ತಳಿಯ ಹಸುಗಳಿಗೆ ಅದೇ ತಳಿಯ ಹೋರಿಗಳು ಇವೆ. ಹೀಗಾಗಿ ಅಡ್ಡತಳಿ ಆಗುವ ಸಾಧ್ಯತೆಗಳಿಲ್ಲ. ಹಾಗೆ ಆದರೆ ನಮ್ಮ ಮೂಲ ತಳಿಗಳು ಉಳಿಯುವುದಿಲ್ಲ. ಮೂಲ ತಳಿ ಉಳಿಸುವುದೇ ನಮ್ಮ ಉದ್ದೇಶ.
–ವಿಷ್ಣುಪ್ರಸಾದ್ ಗೋಶಾಲೆ ಸ್ಥಾಪಕ
ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಗೋವುಗಳ ಸೇವೆ ಮಾಡುವುದನ್ನು ಕಂಡು ಬೆಳೆದ ನನಗೆ ಗೋವುಗಳ ಬಗ್ಗೆ ಅಪಾರ ಪ್ರೀತಿ ಕಾಳಜಿ. ಗೋಶಾಲೆ ತೆರೆಯಲು ಅದೂ ಒಂದು ಕಾರಣ.
ನಾಗರತ್ನಾ ಗೋಶಾಲೆ ಸ್ಥಾಪಕಿ

ಕರ್ನಾಟಕ–ಹಿಂದೂಸ್ತಾನಿ ಜುಗಲ್‌ಬಂದಿ ನಾಂದಿ

ಈ ಬಾರಿಯ ದೀಪಾವಳಿ ಸಂಗೀತೋತ್ಸವ ನ.1ರಿಂದ 10ರ ವರೆಗೆ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ನಡೆಯಲಿದೆ. ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತದ ಜುಗಲ್‌ಬಂದಿಯೊಂದಿಗೆ ಆರಂಭಗೊಳ್ಳುವ ಉತ್ಸವದಲ್ಲಿ ಪಟ್ಟಾಭಿರಾಮ ಪಂಡಿತ್ ಹಾಗೂ ಕೃಷ್ಣೇಂದ್ರ ವಾಡೇಕರ್ ಕಚೇರಿ ನಡೆಸಿಕೊಡಲಿದ್ದಾರೆ. ಚೆನ್ನೈನ ಸುನಿಲ್ ಗಾರ್ಗೇಯನ್ ಬೆಂಗಳೂರು ಸಹೋದರಿಯರು ಎನ್.ಜೆ ನಂದಿನಿ ಮೈಸೂರಿನ ಆರ್.ಕೆ.ಪದ್ಮನಾಭ ಹೇರಂಭ-ಹೇಮಂತ ಸಹೋದರರು ಕುಮರೇಶ್–ಜಯಂತಿ ಕುಮರೇಶ್ ಲತಾಂಗಿ ಸಹೋದರಿಯರು ಮಲ್ಲಾಡಿ ಸಹೋದರರು ಲಾಲ್ಗುಡಿ ಜಿ.ಜೆ.ಆರ್ ಕೃಷ್ಣನ್ ಅಭಿಷೇಕ್ ರಘುರಾಮ್ ಜಯಂತ್ ಮುಂತಾದವರು ಪ್ರಮುಖ ಆಕರ್ಷಣೆ. ಕಲಾವಿದರಿಗೂ ಆಸ್ವಾದಕರಿಗೂ ಆಹಾರ ಮತ್ತು ವಸತಿ ವ್ಯವಸ್ಥೆ ಇದೆ. ಈ ಬಾರಿ ಪರಂಪರಾ ಪ್ರಶಸ್ತಿಗೆ ಕೆ.ಜೆ.ಯೇಸುದಾಸ್ ಭಾಜನರಾಗಿದ್ದು ಬಾಲಪ್ರತಿಭಾ ಪ್ರಶಸ್ತಿಗೆ ಮೃದಂಗ ವಾದಕ ಸಿದ್ಧಾಂತ್‌ ಗುರುರತ್ನ ಪ್ರಶಸ್ತಿಗೆ ಗುರುವಾಯೂರಿನ ಗೀತಾ ಶರ್ಮಾ ಆಯ್ಕೆಯಾಗಿದ್ದಾರೆ ಎಂದು ವಿಷ್ಣುಪ್ರಸಾದ್ ಹೆಬ್ಬಾರ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.