ಉಪ್ಪಿನಂಗಡಿ: ಬಿಸಿಲ ಝಳದಿಂದ ಸಂಪೂರ್ಣ ಬತ್ತಿ, ಹರಿವನ್ನೇ ನಿಲ್ಲಿಸಿದ್ದ ನೇತ್ರಾವತಿ ನದಿ, ಉತ್ತಮ ಮಳೆ ಲಭಿಸಿದ ಬೆನ್ನಲ್ಲೇ ಮತ್ತೆ ಹರಿಯಲಾರಂಭಿಸಿದ್ದಾಳೆ. ನೇತ್ರಾವತಿ ಜತೆಗೆ ಕುಮಾರಧಾರಾ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಎರಡೂ ನದಿಗಳಲ್ಲಿ ಮಣ್ಣು ಮಿಶ್ರಿತ ಕೆಂಬಣ್ಣದ ನೀರು ಹರಿಯುತ್ತಿದೆ.
ವಾರದ ಹಿಂದೆ ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹಗೊಂಡಿದ್ದ ನೀರನ್ನು ಮಂಗಳೂರಿಗೆ ಕುಡಿಯುವ ನೀರು ಪೂರೈಸುವ ತುಂಬೆ ಅಣೆಕಟ್ಟಿಗೆ ಹರಿಸಲಾಗಿತ್ತು. ಇದಾದ ನಂತರ ನೇತ್ರಾವತಿ ನದಿ ಒಡಲು ಬರಿದಾಗ ನೀರಿನ ಹರಿಯುವಿಕೆಯೇ ನಿಂತಿತ್ತು. ಸುತ್ತಮುತ್ತಲ ಪ್ರದೇಶದಲ್ಲಿ ಮಳೆಯಾದರೂ, ನದಿಗೆ ನೀರು ಬಂದಿರಲಿಲ್ಲ. ಈಗ ನದಿಯಲ್ಲಿಮಣ್ಣು ಮಿಶ್ರಿತ ನೀರಿನ ಹರಿಯುವಿಕೆ ಆರಂಭವಾಗಿದೆ.
ಸುಬ್ರಹ್ಮಣ್ಯ ಪರಿಸರದಲ್ಲಿಯೂ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸುಬ್ರಹ್ಮಣ್ಯದಿಂದ ಹರಿದು ಬರುವ ಕುಮಾರಧಾರಾ ನದಿಯಲ್ಲಿಯೂ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಉಭಯ ನದಿಗಳು ಸಂಗಮಿಸುವ ಉಪ್ಪಿನಂಗಡಿಯಲ್ಲಿ ನದಿಯಲ್ಲಿ ನೀರಿನ ಹರಿವಿನಿಂದ ಜೀವ ಕಳೆ ಮೂಡಿದೆ.
ನದಿಯಲ್ಲಿ ಸಂಗ್ರಹವಾಗಿದ್ದ ಹಿನ್ನೀರು ಸಂಪೂರ್ಣ ಖಾಲಿಯಾದ ಬಳಿಕ ನದಿಯ ಒಡಲಿನಲ್ಲಿರುವ ಮೀನುಗಳನ್ನು ಬೇಟೆಯಾಡಲು ದೊಡ್ಡ ಗಾತ್ರದ ವಲಸೆ ಕೊಕ್ಕರೆಗಳೂ ಸೇರಿದಂತೆ ಹಕ್ಕಿಗಳ ಹಿಂಡು ನದಿಯಲ್ಲಿ ಕಂಡು ಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.