ADVERTISEMENT

ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಗೂಂಡಾ ರಾಜಕಾರಣ ಜಾಸ್ತಿ: ನಳಿನ್ ಕುಮಾರ್‌ ಕಟೀಲ್‌

ಶರಣ್‌ ಪಂಪ್‌ವೆಲ್‌ ವಿರುದ್ಧದ ಪ್ರಕರಣ ಹಿಂಪಡೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 5:51 IST
Last Updated 2 ಜೂನ್ 2024, 5:51 IST
ಸುದ್ದಿಗೋಷ್ಠಿಯಲ್ಲಿ ನಳಿನ್ ಕುಮಾರ್‌ ಕಟೀಲ್‌ ಮಾತನಾಡಿದರು. ಕ್ಯಾ.ಗಣೇಶ್ ಕಾರ್ಣಿಕ್‌,ಪ್ರತಾಪಸಿಂಹ ನಾಯಕ್, ಡಾ.ವೈ.ಭರತ್ ಶೆಟ್ಟಿ, ಸತೀಶ್‌ ಕುಂಪಲ, ಹರೀಶ್ ಪೂಂಜ, ಸುಧೀರ್ ಶೆಟ್ಟಿ ಕಣ್ಣೂರು ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ನಳಿನ್ ಕುಮಾರ್‌ ಕಟೀಲ್‌ ಮಾತನಾಡಿದರು. ಕ್ಯಾ.ಗಣೇಶ್ ಕಾರ್ಣಿಕ್‌,ಪ್ರತಾಪಸಿಂಹ ನಾಯಕ್, ಡಾ.ವೈ.ಭರತ್ ಶೆಟ್ಟಿ, ಸತೀಶ್‌ ಕುಂಪಲ, ಹರೀಶ್ ಪೂಂಜ, ಸುಧೀರ್ ಶೆಟ್ಟಿ ಕಣ್ಣೂರು ಭಾಗವಹಿಸಿದ್ದರು   

ಮಂಗಳೂರು: ‘ನಗರದ ರಸ್ತೆಯೊಂದರಲ್ಲಿ ನಮಾಜ್‌ ಮಾಡಿದ ಪ್ರಕರಣದ ಕುರಿತು ಹೇಳಿಕೆ ನೀಡಿದ ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯವಾಹ ಶರಣ್‌ ಪಂಪ್‌ವೆಲ್‌ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ತಕ್ಕ ಉತ್ತರ ನೀಡಬೇಕಾಗುತ್ತದೆ’ ಎಂದು ಸಂಸದ ನಳಿನ್ ಕುಮಾರ್‌ ಕಟೀಲ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ರಸ್ತೆಯಲ್ಲಿ ನಿಂತು ನಮಾಜ್ ಮಾಡಿದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸ್‌ ಅಧಿಕಾರಿ ಮೇಲೆ ಸರ್ಕಾರ ಶಿಸ್ತುಕ್ರಮ ಜರುಗಿಸಿದೆ. ಈ ಪ್ರಕರಣದಲ್ಲಿ ತರಾತುರಿಯಲ್ಲಿ ಬಿ– ವರದಿ ಸಲ್ಲಿಸಲಾಗಿದೆ. ಆದರೆ, ಕೇವಲ ಹೇಳಿಕೆ ನೀಡಿದ್ದನ್ನೇ ಮುಂದಿಟ್ಟುಕೊಂಡು ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಇದು ಸರ್ಕಾರದ ಹಿಂದೂ ವಿರೋಧಿ ನಿಲುವಿಗೆ ಉದಾಹರಣೆ. ಇದನ್ನು ಖಂಡಿಸುತ್ತೇವೆ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ ಗೂಂಡಾ ರಾಜಕಾರಣ ಜಾಸ್ತಿ ಆಗುತ್ತಿದೆ. ಹುಬ್ಬಳ್ಳಿಯ ಘಟನೆ ಬಳಿಕ, ಅಂತಹ ಅನೇಕ ಕೃತ್ಯಗಳು ವಿವಿಧೆಡೆ ಮರುಕಳಿಸಿವೆ. ರಾಜ್ಯದಾದ್ಯಂತ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಕೋಮುವಾದ ಹರಡಿಸುವ ಮೂಲಕ ಭಯೋತ್ಪಾದನೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಇವುಗಳನ್ನೆಲ್ಲ ತಡೆಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದರು.

ADVERTISEMENT

‘ವಿಧಾನಸೌಧದಲ್ಲೇ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದರೆ, ಕಾಂಗ್ರೆಸ್‌ ವಿಜಯೋತ್ಸವದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದರೂ ಈ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಹೇಳಿದರು. 

ಸಂಸತ್‌ ಸದಸ್ಯನಾಗಿ ಅವಧಿ ಮುಗಿದ ಬಳಿಕ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ, ‘ನಾನು ಯಾವತ್ತೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರಲು ಬಯಸುವವ. ಸಾಮಾನ್ಯ ಕಾರ್ಯಕರ್ತರನಾಗಿಯೇ ಮುಂದುವರಿಯುತ್ತೇನೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಡಾ.ವೈ.ಭರತ್ ಶೆಟ್ಡಿ, ಹರೀಶ್ ಪೂಂಜ, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್, ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ರಾವ್, ಪಕ್ಷದ ಮುಖಂಡರಾದ ವಿಕಾಸ್ ಪುತ್ತೂರು, ಯತೀಶ್, ಹರಿಕೃಷ್ಣ ಬಂಟ್ವಾಳ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Cut-off box - ‘ನೈರುತ್ಯ ಕ್ಷೇತ್ರಗಳೆರಡರಲ್ಲೂ ಗೆಲುವು’ ನೈರುತ್ಯ ಪದವೀಧರರ ಕ್ಷೇತ್ರದ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಹಿಂದಿನಿಂದಲೂ ಪ್ರಬಲವಾಗಿದೆ. ಈ ಎರಡೂ ಕ್ಷೇತ್ರಗಳಲ್ಲೂ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ನಳಿನ್‌ ವಿಶ್ವಾಸ ವ್ಯಕ್ತಪಡಿಸಿದರು.  ‘ಮತದಾರರ ಸಂಪರ್ಕ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಈ ಸಲ ಈ ಸಲ ಘಟ ಪ್ರಮುಖ್‌ ಅವರನ್ನು ನೇಮಿಸಿ ಮತದಾರರನ್ನು ಮತಗಟ್ಟೆಗೆ ಕರೆತರುವ ಹೊಣೆ ವಹಿಸಲಾಗಿದೆ. ಪಕ್ಷದಲ್ಲಿದ್ದ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರೂ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಡಾ.ಧನಂಜಯ ಸರ್ಜಿ ಹಾಗೂ ನೈರುತ್ಯ ಶೀಕ್ಷಕರ ಕ್ಷೇತ್ರದಲ್ಲಿ ಎಸ್‌.ಎಲ್.ಭೋಜೇಗೌಡ ಗೆಲುವಿಗೆ ಅಡ್ಡಿಯಾಗದು’ ಎಂದರು. ‘ಭೋಜೇಗೌಡರು ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡುವಾಗ ಜೆಡಿಎಸ್‌ ಎನ್‌ಡಿಎಯ ಅಂಗವಾಗಿರಲಿಲ್ಲ. ಹಾಗಾಗಿ ನಮ್ಮ ಪಕ್ಷವನ್ನು ಬೆಂಬಲಿಸುತ್ತಾ ಬಂದವರು ಅವರಿಗೂ ಮತ ನೀಡಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.