ADVERTISEMENT

ತುಳು ಪ್ರಗತಿಗೆ ರಾಜಾಶ್ರಯ ಅಗತ್ಯ: ದಯಾನಂದ ಕತ್ತಲಸಾರ್

ಶೀನಾ ನಾಡೋಳಿ ಅವರ ‘ಬೊಳಂತ್ಯೆ-ಉರ್ಪೆಲ್’, ‘ಧರ್ಮೊದಿಟ್ಟಿ’ ಮತ್ತು ‘ಪ್ಲೀಸ್, ಫೀಸ್ ಪಿರಕೊರ್ಲೆ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 13:35 IST
Last Updated 12 ಜುಲೈ 2024, 13:35 IST
ಶೀನಾ ನಾಡೋಳಿ (ಎಡದಿಂದ ಎರಡನೆಯವರು) ಅವರ 'ಬೊಳಂತ್ಯೆ-ಉರ್ಪೆಲ್', 'ಧರ್ಮೊದಿಟ್ಟಿ' ಮತ್ತು 'ಪ್ಲೀಸ್, ಫೀಸ್ ಪಿರ ಕೊರ್ಲೆ' ಕೃತಿಗಳನ್ನು ಬಿಡುಗಡೆ
ಶೀನಾ ನಾಡೋಳಿ (ಎಡದಿಂದ ಎರಡನೆಯವರು) ಅವರ 'ಬೊಳಂತ್ಯೆ-ಉರ್ಪೆಲ್', 'ಧರ್ಮೊದಿಟ್ಟಿ' ಮತ್ತು 'ಪ್ಲೀಸ್, ಫೀಸ್ ಪಿರ ಕೊರ್ಲೆ' ಕೃತಿಗಳನ್ನು ಬಿಡುಗಡೆ   

ಮಂಗಳೂರು: ತುಳು ಭಾಷೆಯಲ್ಲಿ ಅನೇಕ ಉತ್ತಮ ಕೆಲಸಗಳು ಆಗುತ್ತಿವೆ. ಆದರೆ ರಾಜಾಶ್ರಯ ಇಲ್ಲದ ಕಾರಣ ಈ ಕೆಲಸಗಳು ಭಾಷೆ ಮತ್ತು ಸಂಸ್ಕೃತಿಯ ಬೆಳಗವಣಿಗೆಗೆ ಪೂರಕವಾಗಿ ಪೂರ್ಣ ಪ್ರಮಾಣದಲ್ಲಿ ಒದಗುತ್ತಿಲ್ಲ ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಅಭಿಪ್ರಾಯಪಟ್ಟರು.

ಬೆಳ್ತಂಗಡಿ ಸರ್ಕಾರಿ ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕ ಶೀನಾ ನಾಡೋಳಿ ಅವರ 'ಬೊಳಂತ್ಯೆ-ಉರ್ಪೆಲ್', 'ಧರ್ಮೊದಿಟ್ಟಿ' ಮತ್ತು 'ಪ್ಲೀಸ್, ಫೀಸ್ ಪಿರ ಕೊರ್ಲೆ' ಕೃತಿಗಳನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ರಾಜಕೀಯ ಸ್ಥಾನಮಾನ ಇದ್ದರೆ ತುಳುವಿನಲ್ಲಿ ಇನ್ನಷ್ಟು ಬೆಳವಣಿಗೆ ಕಾಣಬಹುದಿತ್ತು ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಬೆಳ್ತಂಗಡಿಯ ಕಾಂತಾರ ಜನಪರ ವೇದಿಕೆ (ಕಾಂಜವೇ), ಮಂಗಳೂರಿನ ವಿದ್ಯಾ ಪ್ರಕಾಶನ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತವಾಗಿ ಶುಕ್ರವಾರ ಕಾರ್ಯಕ್ರಮ ಆಯೋಜಿಸಿದ್ದವು.

ADVERTISEMENT

ಯಾವುದೇ ಭಾಷೆಯ ತಿರುಳು ಸವೆಯುತ್ತ ಹೋಗುವುದು ಅಪಾರ ನಷ್ಟದ ಲಕ್ಷಣ. ತುಳುವಿಗೆ ಸಂಬಂಧಿಸಿ ಇಂಥ ಸವಕಳಿ ಆಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಇದೆ. ಪುಸ್ತಕಗಳ ಪ್ರಕಟಣೆ ಇದಕ್ಕೆ ಒಂದು ಮಾರ್ಗ ಎಂದ ಅವರು ಕೋವಿಡ್‌–19ರ ನಂತರದ ತಮ್ಮ ಅವಧಿಯಲ್ಲಿ ಅಕಾಡೆಮಿ 22 ಕೃತಿಗಳನ್ನು ಬಿಡುಗಡೆ ಮಾಡಿತ್ತು ಎಂದರು.

ತುಳು ಕೋಟಾದಡಿ ಮೀಸಲಾತಿ ಮತ್ತಿತರ ಸೌಲಭ್ಯ ಪಡೆಯಲು ಪ್ರಮಾಣಪತ್ರ ನೀಡುವ ಪರಿಪಾಠವನ್ನು ತುಳು ಅಕಾಡೆಮಿ ಮಾಡಿತ್ತು. ಅದನ್ನು ಮುಂದುವರಿಸಲು ಈಗಿನ ಅಧ್ಯಕ್ಷರು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು. 

ವಿಶ್ರಾಂತ ಕುಲಪತಿ ಪ್ರೊ.ಚಿನ್ನಪ್ಪ ಗೌಡ ಮಾತನಾಡಿ, ಶೀನಾ ಅವರು ಅನುವಾದಿಸಿರುವ ಆಂಗ್ಲ ಕವಿತೆಗಳು ತುಳುವಿನದ್ದೇ ಎಂಬಂತೆ ಇವೆ. ಅಷ್ಟರ ಮಟ್ಟಿಗೆ ತುಳುವಿನ ಸಂದರ್ಭಕ್ಕೆ ಒಗ್ಗಿಸಲು ಅವರು ಯಶಸ್ವಿಯಾಗಿದ್ದಾರೆ. ಇಂಗ್ಲಿಷ್ ಕಾವ್ಯವನ್ನು ತುಳುವಿಗೆ ಸಮರ್ಪಕವಾಗಿ ದಾಟಿಸಿರುವ ಅವರ ಕೃತಿಗಳಲ್ಲಿ ಸಂಸ್ಕೃತಿ ಅನುವಾದದ ಅತ್ಯುತ್ತಮ ಮಾದರಿಯನ್ನು ಕಾಣಬಹುದಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶೀನಾ ನಾಡೋಳಿ ‘ತುಳು ಅದ್ಭುತ ಭಾಷೆ. ಆದರೆ ಅದನ್ನು ಅಕಾಡೆಮಿಕ್ ಆಗಿ ದುಡಿಸಿಕೊಳ್ಳುವವರು ಮತ್ತು ಮಾತನಾಡುವವರು ವಿರಳವಾಗಿರುವುದರಿಂದ ಕೃತಿಗಳು ಕಡಿಮೆ ಬರುತ್ತಿವೆ’ ಎಂದರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಅಕ್ಷಯ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಮೋಹನ ಚಂದ್ರ, ಉಪನ್ಯಾಸಕ ನಂದಕಿಶೋರ ಎಸ್, ರಂಗಸಂಗಸತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ವಿದ್ಯಾ ಪ್ರಕಾಶನದ ರಘು ಇಡ್ಕಿದು, ಕಾಂಜವೇ ಸಂಚಾಲಕ ಆನಂದ ಭಾಗವಹಿಸಿದ್ದರು. ರಂಗಕರ್ಮಿ ಮೈಮ್ ರಾಮದಾಸ್ ಅವರ ರಂಗಗೀತೆಗಳು ಮುದ ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.