ADVERTISEMENT

‘ಹಣ ಕಳೆದುಕೊಂಡವರ ನೆರವಿಗೆ ಸರ್ಕಾರ ಧಾವಿಸಲಿ’

ಹಣಕಾಸು ಅವ್ಯವಹಾರ– ವಂಚಕ ಕಂಪನಿಗಳ ವಿರುದ್ಧ ಸಿಬಿಐ ತನಿಖೆಗೆ ಸಂತ್ರಸ್ತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:51 IST
Last Updated 12 ಜೂನ್ 2024, 6:51 IST

ಮಂಗಳೂರು: ‘ಹಣ ಹೂಡಿಕೆ ಮಾಡಿದರೆ ಹೆಚ್ಚು ಬಡ್ಡಿ ನೀಡುವುದಾಗಿ ನಂಬಿಸಿ ಕೆಲವು ಕಂಪನಿಗಳು ಗ್ರಾಹಕರಿಗೆ ಲಕ್ಷಾಂತರ  ರೂಪಾಯಿ ವಂಚಿಸಿವೆ. ಇಂತಹ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು. ವಂಚನೆ ಎಸಗಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು’ ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

‘ಲಕ್ಷಾಂತರ ಗ್ರಾಹಕರನ್ನು ವಂಚಿಸುವ ಇಂತಹ ಹಣಕಾಸು ದಂಧೆಯನ್ನು ನಿಗ್ರಹಿಸಲು ಸರ್ಕಾರ ಬಲವಾದ ಕಾನೂನು ರೂಪಿಸಬೇಕು. ಸಂತ್ರಸ್ತ ಗ್ರಾಹಕರಿಗೆ ಹಣ ಮರಳಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಸಂತ್ರಸ್ತರು ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರ ಪರವಾಗಿ ಮಂಗಳವಾರ ಮಾತನಾಡಿದ ತುಳುನಾಡ ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜೆಪ್ಪು, ‘  ಅಂಗವಿಕಲರೂ ಆಗಿರುವ ಹಿರಿಯ ನಾಗರಿಕ ಆರ್.ಬಾಲಚಂದರ್ ಬಲ್ಮಠದಲ್ಲಿ ಶಾಖಾ ಕಚೇರಿ ಹೊಂದಿದ್ದ ಕೆನರಾ ಫಿಶ್ ಆ್ಯಂಡ್ ಫಾರ್ಮರ್ ಕಂಪನಿಯಲ್ಲಿ ₹ 4 ಲಕ್ಷ ಹಣ ಹೂಡಿಕೆ ಮಾಡಿದ್ದರು. ಈ ಕಂಪನಿ ಕಳೆದ ತಿಂಗಳು ಮುಚ್ಚಿದೆ. ಇವರಂತೆಯೇ 120 ಗ್ರಾಹಕರು ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿದೆ. ಕಂಪನಿ ಬಾಗಿಲು ಹಾಕುವ ಮುನ್ಸೂಚನೆ ಸಿಕ್ಕಿದ ತಕ್ಷಣವೇ ಮಾಹಿತಿ ನೀಡಿದರೂ ಆರೋಪಿಗಳ ಬಂಧನಕ್ಕೆ ಕ್ರಮವಹಿಸಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ವೃಕ್ಷ ಬ್ಯುಸಿನೆಸ್ ಸಲ್ಯೂಶನ್  ಕಂಪನಿ ಗ್ರಾಹಕರ ಹಣಕ್ಕೆ ಹೆಚ್ಚಿನ ಬಡ್ಡಿ ದರ ನೀಡುವುದಾಗಿ ನಂಬಿಸಿ ದಕ್ಷಿಣ ಕನ್ನಡ, ಉಡುಪಿಯೂ ಸೇರಿದಂತೆ ದೇಶದಾದ್ಯಂತ ಹಣ ಸ್ವೀಕೃತಿ ಕೇಂದ್ರಗಳನ್ನು ಪ್ರಾರಂಭಿಸಿತ್ತು. ಏಜೆಂಟರ ಮೂಲಕ ಗ್ರಾಹಕರಿಂದ ಕೋಟ್ಯಾಂತರ ರೂಪಾಯಿ ಠೇವಣಿ ಸಂಗ್ರಹಿಸಿದ್ದ ಕಂಪನಿ  2014ರಲ್ಲಿ ಬಾಗಿಲು ಹಾಕಿತ್ತು. ಈ ಬಗ್ಗೆ ಸಾಕಷ್ಟು ಹೋರಾಟ ನಡೆದ ಬಳಿಕ ಸಿಐಡಿ ತನಿಖೆಗೆ ಪ್ರಕರಣವನ್ನು ಒಪ್ಪಿಸಲಾಗಿದೆ. ಆದರೆ ಇನ್ನೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಆರೋಪಿಗಳು ಜಾಮೀನಿನ ಮೂಲಕ ಹೊರಗಿದ್ದು ಕೋರ್ಟಿಗೆ ಹಾಜರಾಗುತ್ತಿದ್ದಾರೆ’ ಎಂದರು.

‘ಇಂತಹ ಹಣಕಾಸು ಕಂಪನಿಗಳನ್ನು ಸ್ಥಾಪಿಸಿ ವಂಚಿಸುವವರ ಜಾಲವೇ ಇದೆ. ಒಂದು ಕಂಪನಿ ಮುಚ್ಚಿದ ಬಳಿಕ ಬೇರೊಂದು ಹೆಸರಿನಲ್ಲಿ ಅವರು ಕಂಪನಿಯನ್ನು ಸ್ಥಾಪಿಸುತ್ತಾರೆ. ಅದರ ನಿರ್ದೇಶಕರು ಅವರೇ ಆಗಿರುತ್ತಾರೆ’ ಎಂದರು. 

ಸುದ್ದಿಗೋಷ್ಠಿಯಲ್ಲಿ ಆರ್.ಬಾಲಚಂದರ್, ಶಾರದಾ ಶೆಟ್ಟಿ, ಪ್ರಶಾಂತ್ ಕಡಬ, ಚಂದ್ರಕಲಾ, ರೇಣುಕಾ ಮೊದಲಾದವರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.